ಆರೋಗ್ಯ ಲೆಕ್ಕಿಸದೇ ಕರ್ತವ್ಯ: ಬೆಂಗಳೂರಿನ ಪೀಪಲ್ಸ್ ಮ್ಯಾನ್ ಖ್ಯಾತಿಯ ಇನ್ಸ್‌ಪೆಕ್ಟರ್ ನಿಧನ
ಬೆಂಗಳೂರಿನ ಪೀಪಲ್ಸ್ ಮ್ಯಾನ್ ಖ್ಯಾತಿಯ ಇನ್ಸ್‌ಪೆಕ್ಟರ್ ಮಂಜುನಾಥ್ ನಿಧನರಾಗಿದ್ದಾರೆ, ಕುಟುಂಬ, ಸಂಸಾರಕ್ಕಿಂತಲೂ ಹೆಚ್ಚಾಗಿ ವೃತ್ತಿಯನ್ನೇ ಪ್ರೀತಿಸುತ್ತಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಮಾರಕ ರೋಗದಿಂದ ಎಲ್ಲರನ್ನು ಬಿಟ್ಟು ಅಗಲಿದ್ದಾರೆ.
ಬೆಂಗಳೂರು: ಬೆಂಗಳೂರಿನ ಜಯನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮಂಜುನಾಥ್ ನಿಧನರಾಗಿದ್ದಾರೆ. ಲಿವರ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಂಜುನಾಥ್ ಅವರು ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಲಿವರ್ ಕ್ಯಾನ್ಸರ್ ಕೊನೆ ಹಂತದಲ್ಲಿರುವಾಗ ಕಳೆದ ಜನವರಿಯಿಂದ ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿರುವುದು ತಿಳಿದಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಆದರೆ, ಭಾನುವಾರ ಮಧ್ಯಾಹ್ನ ಚಿಕಿತ್ಸೆ ಫಲಿಸದೇ ಮಂಜುನಾಥ್ ಸಾವನ್ನಪ್ಪಿದ್ದಾರೆ. ಹುಟ್ಟೂರು ಹಾಸನಕ್ಕೆ ಇನ್ಸ್ಪೆಕ್ಟರ್ ಮಂಜುನಾಥ್ ಮೃತದೇಹ ಕೊಂಡೊಯ್ಯಲಾಗಿದ್ದು, ಅವರ ಹುಟ್ಟೂರಾದ ಹುಟ್ಟೂರಾದ ಹಾಸನ ಜಿಲ್ಲೆಯ ಉದ್ದೂರಿನಲ್ಲಿ ಇಂದು (ಜೂನ್ 05) ಅಂತ್ಯಸಂಸ್ಕಾರ ನಡೆಯಲಿದೆ.
ಮಂಜುನಾಥ್ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆದ್ರೆ, ಆರೋಗ್ಯದಲ್ಲಿ ತೀರಾ ಏರುಪೇರಾಗುತ್ತಿದ್ದರಿಂದ ಚಿಕಿತ್ಸೆಗಾಗಿ ಸಾವಿಗೂ ಮುನ್ನ ಕೇವಲ 15 ದಿನ ರಜೆ ತೆಗೆದುಕೊಂಡಿದ್ದರು. ಇನ್ನು ಮೃತ ಇನ್ಸ್‌ಪೆಕ್ಟರ್ ಮಂಜುನಾಥ್ ಅವರಿಗೆ ಕೆಲವು ವರ್ಷಗಳ ಹಿಂದೆ ಮದುವೆಯಾಗಿದ್ದು, ಪತ್ನಿ ಹಾಗೂ ಚಿಕ್ಕ ಮಗನಿದ್ದಾನೆ. ದಕ್ಷ ಹಾಗೂ ಪ್ರಾಮಾಣಿಕ ಸೇವೆಯನ್ನು ಸಲ್ಲಿಸುವ ಮೂಲಕ ಹಂತ ಹಂತವಾಗಿ ಉನ್ನತ ಸ್ಥಾನಗಳನ್ನು ಅಲಂಕರಿಸುತ್ತಾ ಬಂದಿದ್ದರು. ಅವರ ದಕ್ಷ ಕಾರ್ಯ ನಿರ್ವಹಣೆಯಿಂದ ಬೆಂಗಳೂರಿನ ಜಯನಗರ ಠಾಣೆಗೆ ವರ್ಗಾವಣೆಯಾಗಿ ಬಂದಿದ್ದರು. ಆದರೆ, ವಿಧಿಯ ಆಟವೇ ಬೇರೆಯಾಗಿದ್ದು, ಈಗ ಗುಣಪಡಿಸಲಾಗದ ಮಾರಕ ರೋಗದಿಂದ ಎಲ್ಲರನ್ನು ಬಿಟ್ಟು ಅಗಲಿದ್ದಾರೆ
ಹಾಸನ ಮೂಲದವರಾದ ಮಂಜುನಾಥ್ ಯುಆರ್ 2007ನೇ ಬ್ಯಾಚ್ ನ ಪೊಲೀಸ್ ಇನ್ಸ್ಪೆಕ್ಟರ್ ಆಗಿ ವೃತ್ತಿಗೆ ಸೇರಿಕೊಂಡಿದ್ದರು. ಕಳೆದ 2021 ರಲ್ಲಿ ಮುಖ್ಯಮಂತ್ರಿ ಪದಕಕ್ಕೂ ಭಾಜನರಾಗಿದ್ದರು. ರಾಜ್ಯದ ಮೈಸೂರು ಪೊಲೀಸ್ ಅಕಾಡೆಮಿಯಲ್ಲಿ ತಮ್ಮ ಮೊದಲ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ಪೊಲೀಸ್ ಅಕಾಡೆಮಿಯಲ್ಲಿ ಯಶಸ್ವಿಯಾದ ನಂತರ ಬೆಳಗಾವಿ, ಚಾಮರಾಜನಗರ, ಬೇಲೂರು ಮತ್ತು ಕರ್ನಾಟಕದ ಹಲವಾರು ಭಾಗಗಳಲ್ಲಿ ಕಾರ್ಯನಿರ್ವಹಿಸಿದ್ದರು. ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ತಮ್ಮ 15 ವರ್ಷಗಳ ಸೇವೆಯಲ್ಲಿ ಹಲವಾರು ಪ್ರಕರಣಗಳನ್ನು ಪರಿಹರಿಸಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದಾರೆ. ಅವರನ್ನು ಕೆಲವೆಡೆ ಪೀಪಲ್ಸ್ ಮ್ಯಾನ್ ಎಂದು ಕರೆಯಲಾಗುತ್ತಿತ್ತು.
Published On - 7:32 am, Mon, 5 June 23