ಬೆಂಗಳೂರು: ರಾಜ್ಯದಲ್ಲಿ ಅನಧಿಕೃತವಾಗಿ ನಿರ್ಮಿಸಿದ ದೇಗುಲ ತೆರವು ವಿಚಾರಕ್ಕೆ ಸಂಬಂಧಿಸಿ ಬಿನ್ನಿಪೇಟೆಯ ಸಂಕಷ್ಟಹರ ಗಣಪತಿ ದೇವಾಲಯಕ್ಕೆ ನೋಟಿಸ್ ನೀಡಲಾಗಿದೆ. 2009ರ ನಂತರ ಫುಟ್‌ಪಾತ್ ಮೇಲೆ ದೇವಾಲಯ ನಿರ್ಮಾಣ ಮಾಡಲಾಗಿದೆ. ಹೀಗಾಗಿ ದೇವಾಲಯವನ್ನು ತೆರವು ಮಾಡುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಆದ್ರೆ ದೇವಸ್ಥಾನದಿಂದ ಯಾರು ನೋಟಿಸ್ ಪಡೆಯದಿರುವ ಹಿನ್ನೆಲೆ ದೇಗುಲದಿಂದ ಕಸ ಸಂಗ್ರಹಣೆಯನ್ನು ಬಿಬಿಎಂಪಿ ಸ್ಥಗಿತಗೊಳಿಸಿದೆ.
ಬೆಂಗಳೂರಿನಲ್ಲಿ 2009 ರ ನಂತರ 277 ಅನಧಿಕೃತವಾಗಿ ಧಾರ್ಮಿಕ ಕೇಂದ್ರಗಳನ್ನು ನಿರ್ಮಾಣ ಮಾಡಲಾಗಿದೆ. ಈ 277 ಧಾರ್ಮಿಕ ಕೇಂದ್ರಗಳಲ್ಲಿ ದೇವಾಲಯ, ಮಸೀದಿ, ಚರ್ಚ್ ಗಳ ಕೂಡ ಸೇರಿಕೊಂಡಿದೆ. 277 ಧಾರ್ಮಿಕ ಕಟ್ಟಡಗಳ ತೆರವು ಮಾಡಲು ಬಿಬಿಎಂಪಿ ಸೂಚನೆ ನೀಡಿದೆ. 277 ರ ಪೈಕಿ 200 ಹಿಂದೂ ದೇವಾಲಯಗಳಿದ್ದು, ನಾಗರ ಕಟ್ಟೆ, ಗಣೇಶ ಮೂರ್ತಿ, ಮಾಲದ ಮರ ಕಟ್ಟೆ ಹಾಗೂ ಸಣ್ಣಪುಟ್ಡ ದೇವಾಲಯಗಳಿಗೆ ಬಿಬಿಎಂಪಿ ನೋಟಿಸ್ ಕೊಟ್ಟಿದೆ.
50 ಕ್ಕೂ ಅಧಿಕ ಸಣ್ಣಪುಟ್ಟ ದೇವಾಲಯಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಆದ್ರೆ ಸಾರ್ವಜನಿಕ ಸ್ಥಳ ಹಾಗೂ ಫುಟ್ ಪಾತ್, ಪಾರ್ಕ್ಗಳಲ್ಲಿ ನಿರ್ಮಾಣವಾಗಿರುವ 70 ಮಸೀದಿ, ಚರ್ಚ್ ಗಳ ತೆರವು ಮಾಡಲು ಬಿಬಿಎಂಪಿ ಯಾವುದೇ ಕ್ರಮ ಕೈಗೊಂಡಿಲ್ಲ. 70 ಮಸೀದಿ, ಚರ್ಚ್ ಗಳಿಗೆ ಕೇವಲ ನೋಟಿಸ್ ಕೊಟ್ಟು ಸುಮ್ಮನಾಗಿದೆ. ಇದು ಜನರ ಆಕ್ರೋಶಕ್ಕೆ ಕಾರಣವಾಗುತ್ತಿದೆ.
ಜನರ ಭಾವನೆಗಳಿಗೆ ಧಕ್ಕೆಯಾಗದಂತೆ ತೆರವಿಗೆ ಸೂಚನೆ ನೀಡಿದ್ದೇವೆ
ಇನ್ನು ದೇವಸ್ಥಾನಗಳ ತೆರವು ಕಾರ್ಯಚರಣೆ ಬಗ್ಗೆ ಮಾತನಾಡಿದ ಕಂದಾಯ ಇಲಾಖೆ ಸಚಿವ ಆರ್ ಅಶೋಕ, ದೇಗುಲಗಳ ತೆರವು ಸಂಬಂಧ ಡಿಸಿಗಳ ಜತೆ ಚರ್ಚಿಸಿದ್ದೇನೆ. ಜನರ ಭಾವನೆಗಳಿಗೆ ಧಕ್ಕೆಯಾಗದಂತೆ ತೆರವಿಗೆ ಸೂಚನೆ ನೀಡಿದ್ದೇವೆ ಎಂದು ಹೇಳಿದರು.
ಏಕಾಏಕಿ ದೇವಾಲಯ ತೆರವು ಮಾಡುವುದು ಸರಿಯಲ್ಲ. ಈ ವಿಚಾರವಾಗಿ ಸಿಎಂ ಬೊಮ್ಮಾಯಿ ಜೊತೆ ಚರ್ಚಿಸುತ್ತೇನೆ. ಸುಪ್ರೀಂಕೋರ್ಟ್ ಆದೇಶವನ್ನು ಪಾಲನೆ ಮಾಡಬೇಕು. ಆದರೆ ಜನರ ಭಾವನೆಗಳಿಗೆ ಧಕ್ಕೆಯಾಗದಂತೆ ತೆರವು ಮಾಡಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು.
ಇದನ್ನೂ ಓದಿ: ತೆರವುಗೊಳಿಸಬೇಕಾದ ಅನಧಿಕೃತ ದೇಗುಲಗಳ ಪಟ್ಟಿಗೆ ಸೇರಿರುವ ಮೈಸೂರಿನ ಪ್ರಮುಖ ಧಾರ್ಮಿಕ ಕೇಂದ್ರಗಳು ಇವು
Published On - 10:09 am, Tue, 14 September 21