BBMP Election: ಬಗೆಹರಿಯದ ಮೀಸಲಾತಿ ಗೊಂದಲ, ಸರ್ಕಾರಕ್ಕೆ ಮಹತ್ವದ ವರದಿ ಕೇಳಿದ ಕೋರ್ಟ್
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್ ಮಹತ್ವದ ಸೂಚನೆ ಕೊಟ್ಟಿದೆ.
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (BBMP) ವಾರ್ಡ್‌ವಾರು ಮಹಿಳಾ ಮೀಸಲಾತಿ ಗೊಂದಲ ಇನ್ನೂ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ. ವಾರ್ಡ್ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಇಂದು (ಸೆ.28) ಕರ್ನಾಟಕ ಕೈಕೋರ್ಟ್ (Karnataka High Court) ನಲ್ಲಿ ವಿಚಾರಣೆ ನಡೆಯಿತು.
ಬಿಬಿಎಂಪಿ ವಾರ್ಡ್‌ವಾರು ಮೀಸಲು ನಿಗದಿ ಪ್ರಶ್ನಿಸಿ ಈಜಿಪುರದ ಕೆ ಮಹದೇವ ಮತ್ತಿತರರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿದ್ದು, ಈ ವರ್ಷದೊಳಗೆ ಬಿಬಿಎಂಪಿ ಚುನಾವಣೆ ನಡೆಯಲೇಬೇಕು. ಹೊಸ ಮೀಸಲಾತಿ ರೂಪಿಸಲು ಎಷ್ಟು ಕಾಲಾವಕಾಶ ಬೇಕು? ಈ ಬಗ್ಗೆ ಪ್ರಮಾಣಪತ್ರ ಸಲ್ಲಿಸಲು ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ. ಅಲ್ಲದೇ ಅಲ್ಲಿಯವರೆಗೆ ಚುನಾವಣಾ ವೇಳಾಪಟ್ಟಿ ಪ್ರಕಟಿಸದಂತೆ ಸೂಚಿಸಿ ವಿಚಾರಣೆಯನ್ನು ಸೆಪ್ಟೆಂಬರ್ 30ಕ್ಕೆ ಮುಂದೂಡಿದೆ.
ಮೀಸಲಾತಿಗೆ ಸಂಬಂಧಿಸಿದ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಆಯೋಗದ ವರದಿಗೆ ಯಾವ ದಾಖಲೆ ಆಧರಿಸಲಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಮಂಗಳವಾರ ನಿರ್ದೇಶಿಸಿದೆ.
ಅರ್ಜಿದಾರರ ಪರ ಹಿರಿಯ ವಕೀಲರಾದ ಜಯಕುಮಾರ್ ಪಾಟೀಲ್, ಎ ಎಸ್ ಪೊನ್ನಣ್ಣ, ವಕೀಲರಾದ ಸಂದೀಪ್ ಪಾಟೀಲ್, ಎಂ ಜಯ ಮೋವಿಲ್ ಅವರು ಮೀಸಲು ನಿಗದಿ ಮಾಡುವ ನಿಯಮ ಪಾಲನೆಯಾಗಿಲ್ಲ. ಖಚಿತ ದತ್ತಾಂಶ ಇಲ್ಲದೇ ಒಬಿಸಿ ಮೀಸಲು ನಿಗದಿ ಮಾಡಲಾಗಿದೆ. ಸಮೀಕ್ಷೆಯನ್ನೇ ನಡೆಸದೆ ಒಬಿಸಿ ಆಯೋಗವು ಮೀಸಲಾತಿ ನಿರ್ಧರಿಸಿದೆ. ರಾಜಕೀಯ ಹಿಂದುಳಿದಿರುವಿಕೆ ಬಗ್ಗೆಯೂ ಯಾವುದೇ ಸಮೀಕ್ಷೆ ನಡೆಸಿಲ್ಲ. ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಮೂರು ಹಂತದ ಪರೀಕ್ಷೆಯ ಮಾನದಂಡ ಅನುಸರಿಸಿಲ್ಲ. ಹೀಗಾಗಿ, ಒಬಿಸಿ ಆಯೋಗದ ವರದಿಯಂತೆ ಮೀಸಲು ಪರಿಗಣಿಸಬಾರದು. ಹೊಸದಾಗಿ ಒಬಿಸಿ ಸಮುದಾಯಗಳ ಸಮೀಕ್ಷೆ ನಡೆಸಲು ನಿರ್ದೇಶನ ನೀಡಬೇಕು. ಕೆಲವು ವಿಧಾನಸಭಾ ಕ್ಷೇತ್ರಗಳ ಎಲ್ಲಾ ವಾರ್ಡ್ ಮಹಿಳೆಯರಿಗೆ ಮೀಸಲಿರಿಸಲಾಗಿದೆ. ಈ ನಿಟ್ಟಿನಲ್ಲಿಯೂ ಇದು ದೋಷಪೂರಿತ ಎಂದು ವಾದಿಸಿದರು.
ಇದಕ್ಕೆ ಪ್ರತಿಯಾಗಿ ರಾಜ್ಯ ಚುನಾವಣಾ ಆಯೋಗ ಪರ ವಕೀಲ ಕೆ ಎನ್ ಫಣೀಂದ್ರ ವಾದ ಮಂಡಿಸಿದ್ದು, ಒಬಿಸಿ ಮೀಸಲು ಪರಿಗಣಿಸದೇ ಚುನಾವಣೆ ನಡೆಸಬಹುದು. ಸುರೇಶ್ ಮಹಾಜನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನ ಇಲ್ಲೂ ಅನ್ವಯಿಸುತ್ತದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಚುನಾವಣೆ ನಡೆಸಲು ಆದೇಶಿಸುವಂತೆ ಮನವಿ ಮಾಡಿದರು. ಅಲ್ಲದೆ, ಹೊಸದಾಗಿ ಒಬಿಸಿ ಕುರಿತು ವರದಿ ಪಡೆಯುವುದು ವಿಳಂಬವಾಗುತ್ತದೆ. ಮೂರು ಹಂತದ ಪರಿಶೀಲನೆಯ ಆಧಾರದಲ್ಲಿ ಮೀಸಲಾತಿ ರೂಪಿಸಲು ಸಮಯಬೇಕಾಗುತ್ತದೆ. ಒಂದು ವೇಳೆ ಮೀಸಲು ಮರು ರೂಪಿಸಲು ನಿರ್ದೇಶನ ನೀಡಿದರೆ ಒಂದು ವಾರ ಮಾತ್ರ ಸಮಯ ನೀಡಬೇಕು. ಕೇಂದ್ರ ಚುನಾವಣಾ ಆಯೋಗಕ್ಕೆ ವಿದ್ಯುನ್ಮಾನ ಮತಯಂತ್ರ (ಇವಿಎಂ) ಮರಳಿಸಬೇಕಿದೆ. ಹೀಗಾಗಿ, ಮೀಸಲು ಮರುರೂಪಿಸಲು ಹೆಚ್ಚಿನ ಸಮಯ ನೀಡಬಾರದು ಎಂದರು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ