ಬೆಂಗಳೂರು ಟ್ರಾಫಿಕ್​ಗೆ ಮುಕ್ತಿ ನೀಡಲು ನಿರ್ಮಾಣವಾಗಲಿದೆ ಎಲಿವೇಟೆಡ್ ರೋಟರಿ ಫ್ಲೈಓವರ್: ಏನಿದರ ವಿಶೇಷ? ಇಲ್ಲಿದೆ ವಿವರ

|

Updated on: Jul 05, 2024 | 9:03 AM

ಸದಾ ಗಿಜಿಗಿಡುವ ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬಿಬಿಎಂಪಿ ಮತ್ತು ರಾಜ್ಯ ಸರ್ಕಾರ ಒಂದಿಲ್ಲೊಂದು ಯೋಜನೆಗಳನ್ನು ಜಾರಿಗೆ ತರುತ್ತಲೇ ಇವೆ. ಇದೀಗ ಬಿಬಿಎಂಪಿ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಸುತ್ತ ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡಲು ಬೆಂಗಳೂರಿನ ಮೊದಲ ಏಕಮುಖ ಎಲಿವೇಟೆಡ್ ರೋಟರಿ ಮೇಲ್ಸೇತುವೆ ನಿರ್ಮಾಣಕ್ಕೆ ಮುಂದಾಗಿದೆ. ಇದರ ವಿಶೇಷಗಳೇನು? ಯಾವಾಗ ಸಿದ್ಧವಾಗಲಿದೆ? ಇತ್ಯಾದಿ ವಿವರ ಇಲ್ಲಿದೆ.

ಬೆಂಗಳೂರು ಟ್ರಾಫಿಕ್​ಗೆ ಮುಕ್ತಿ ನೀಡಲು ನಿರ್ಮಾಣವಾಗಲಿದೆ ಎಲಿವೇಟೆಡ್ ರೋಟರಿ ಫ್ಲೈಓವರ್: ಏನಿದರ ವಿಶೇಷ? ಇಲ್ಲಿದೆ ವಿವರ
ಬೆಂಗಳೂರು ಟ್ರಾಫಿಕ್​ಗೆ ಮುಕ್ತಿ ನೀಡಲು ನಿರ್ಮಾಣವಾಗಲಿದೆ ಎಲಿವೇಟೆಡ್ ರೋಟರಿ ಫ್ಲೈಓವರ್ (ಸಾಂದರ್ಭಿಕ ಚಿತ್ರ)
Follow us on

ಬೆಂಗಳೂರು, ಜುಲೈ 5: ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಾಣ ಮಾಡಲಾಗುತ್ತಿದ್ದು, ಶೀಘ್ರದಲ್ಲೇ ಇದು ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ. ಇದರ ಬೆನ್ನಲ್ಲೇ ಇದೀಗ ಬಿಬಿಎಂಪಿ, ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಸುತ್ತ ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡುವುದಕ್ಕಾಗಿ ಮುಕುಂದ ಥಿಯೇಟರ್ ಬಳಿಯಿಂದ ಬೆಂಗಳೂರಿನ ಮೊದಲ ಏಕಮುಖ ಎಲಿವೇಟೆಡ್ ರೋಟರಿ ಮೇಲ್ಸೇತುವೆ ನಿರ್ಮಾಣಕ್ಕೆ ಮುಂದಾಗಿದೆ.

ವಿಮಾನ ನಿಲ್ದಾಣದಲ್ಲಿರುವಂಥ ಮೂಲಸೌಕರ್ಯಗಳೊಂದಿಗೆ ಸರ್ ಎಂವಿ ಟರ್ಮಿನಲ್ ಅನ್ನು ಮೇಲ್ದರ್ಜೆಗೆ ಏರಿಸಿದ ನಂತರವೂ, ಕಿರಿದಾದ ರಸ್ತೆ ಮತ್ತು ಭಾರೀ ದಟ್ಟಣೆಯಿಂದಾಗಿ ನಗರದ ರೈಲು ನಿಲ್ದಾಣವು ಹಲವು ಸವಾಲುಗಳನ್ನು ಎದುರಿಸುತ್ತಿದೆ. ಟ್ರಾಫಿಕ್ ಜಾಮ್ ಸಮಸ್ಯೆಯನ್ನು ಪರಿಹರಿಸಲು, ಬಿಬಿಎಂಪಿ ಎಲಿವೇಟೆಡ್ ರೋಟರಿ ಮೇಲ್ಸೇತುವೆ ಯೋಜನೆಯನ್ನು ಪ್ರಸ್ತಾಪಿಸಿದೆ.

ಮೇಲ್ಸೇತುವೆ ನಿರ್ಮಾಣಕ್ಕೆ ಬಿಬಿಎಂಪಿ ಟೆಂಡರ್ ಕರೆದಿದ್ದು, ಬೈಯ್ಯಪ್ಪನಹಳ್ಳಿ ರೈಲ್ವೇ ಲೆವೆಲ್ ಕ್ರಾಸಿಂಗ್‌ನಲ್ಲಿ ಆರ್‌ಒಬಿಗಾಗಿ ಹೆಚ್ಚುವರಿ 2 ಲೇನ್‌ಗಳನ್ನು ನಿರ್ಮಿಸಲಾಗಿದೆ.

ಎಷ್ಟು ವೆಚ್ಚದ ಯೋಜನೆ?

ಬಿಬಿಎಂಪಿ ಎಲಿವೇಟೆಡ್ ರೋಟರಿ ಮೇಲ್ಸೇತುವೆ ಯೋಜನೆಗೆ ಬಿಬಿಎಂಪಿ 380 ಕೋಟಿ ರೂಪಾಯಿಗಳನ್ನು ನಿಗದಿಪಡಿಸಿದೆ. ಇದಲ್ಲದೆ, ಐಟಿಸಿ ಲಿಮಿಟೆಡ್ ಬಳಿಯ ಮಾರುತಿ ಸೇವಾನಗರದಿಂದ ಬಾಣಸವಾಡಿ ಮುಖ್ಯರಸ್ತೆಯವರೆಗೆ 4.5 ಕಿಮೀ ಉದ್ದದ ಎಲಿವೇಟೆಡ್ ರೋಟರಿ ಮೇಲ್ಸೇತುವೆಯನ್ನು ನಿರ್ಮಾಣ ಮಾಡುವ ಬಗ್ಗೆಯೂ ಬಿಬಿಎಂಪಿ ಚಿಂತನೆ ನಡೆಸಿದೆ.

ಎಲಿವೇಟೆಡ್ ರೋಟರಿ ಫ್ಲೈಓವರ್ ಕಾಮಗಾರಿ ಗಡುವು ಯಾವಾಗ?

ಎಲಿವೇಟೆಡ್ ರೋಟರಿ ಫ್ಲೈಓವರ್ ನಿರ್ಮಾಣಕ್ಕೆ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದ್ದು, ಈ ಸಂಬಂಧ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ಮೇಲ್ಸೇತುವೆ ಉದ್ಘಾಟನೆ ದಿನಾಂಕ ಇನ್ನೂ ತಿಳಿದುಬಂದಿಲ್ಲ.

ಎಲಿವೇಟೆಡ್ ರೋಟರಿ ಫ್ಲೈಓವರ್ ಎಂದರೇನು? ವಿಶೇಷಗಳೇನು?

  • ಎಲಿವೇಟೆಡ್ ರೋಟರಿ ಫ್ಲೈಓವರ್ ಕಮ್ಮನಹಳ್ಳಿ, ಹಳೆ ಮದ್ರಾಸ್ ರಸ್ತೆ, ಬಾಣಸವಾಡಿ ಮತ್ತು ಸರ್ ಎಂವಿ ಟರ್ಮಿನಲ್ ಕಡೆಗೆ ನಾಲ್ಕು ನಿರ್ಗಮನಗಳೊಂದಿಗೆ ವೃತ್ತಾಕಾರದ ಜಂಕ್ಷನ್‌ನ ವೈಶಿಷ್ಟ್ಯಗಳನ್ನು ಹೊಂದಿರಲಿದೆ.
  • ವೃತ್ತಾಕಾರದ ಜಂಕ್ಷನ್‌ನಲ್ಲಿ ನಾಲ್ಕು ಲೇನ್‌ಗಳು, ಪ್ರತಿಯೊಂದೂ 3.5 ಮೀಟರ್ ಅಗಲ ಮತ್ತು 7.5 ಮೀಟರ್ ಅಗಲದ ಅಪ್ರೋಚ್ ರ‍್ಯಾಂಪ್‌ಗಳು ಇರಲಿವೆ.
  • ವಾಹನವು ನಿರ್ಗಮನವನ್ನು ತಪ್ಪಿಸಿಕೊಂಡರೆ, ನಿರ್ಗಮನ ರ‍್ಯಾಂಪ್ ತಲುಪಲು ಅದು ಪೂರ್ಣ ಸರ್ಕಲ್ ಸಂಚರಿಸಬೇಕಾಗುತ್ತದೆ.
  • ಈ ಮೇಲ್ಸೇತುವೆಯಲ್ಲಿ ವಾಹನದ ವೇಗ ಗಂಟೆಗೆ 30 ಕಿಮೀಗಿಂತ ಕಡಿಮೆ ಇರಲಿದೆ.
  • ರೋಟರಿ ಮೇಲ್ಸೇತುವೆಯ ವೃತ್ತಾಕಾರದ ಜಂಕ್ಷನ್ ಮುಕುಂದ ಥಿಯೇಟರ್ ಬಳಿ ಇದೆ ಮತ್ತು 95 ಮೀಟರ್ ವ್ಯಾಸವನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ಕೆಎಸ್​ಆರ್​ಟಿಸಿಯೂ ಇನ್ಮುಂದೆ ಕ್ಯಾಶ್​ಲೆಸ್: ಗೂಗಲ್ ಪೇ, ಫೋನ್ ಪೇ ಮೂಲಕ ಪಾವತಿಸುವ ವ್ಯವಸ್ಥೆ ಶೀಘ್ರ ಜಾರಿ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:02 am, Fri, 5 July 24