ಬೆಂಗಳೂರು: ನಗರದ ಅಭಿವೃದ್ಧಿಗಾಗಿ ಸ್ಥಾಪನೆಯಾದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (Bengaluru Development Authority – BDA) ನಗರದ ಹಲವು ಕೆರೆಗಳನ್ನು ಒತ್ತುವರಿ ಮಾಡಿಕೊಂಡಿದೆ. ಕೆರೆಗಳ ಅಂಗಳದಲ್ಲಿಯೇ ಬಡಾವಣೆಗಳನ್ನು ನಿರ್ಮಿಸುವ ಮೂಲಕ ಒತ್ತುವರಿಗೆ ಮುನ್ನುಡಿ ಬರೆದಿರುವುದೂ ಅಲ್ಲದೆ, ನೀರು ಹರಿವಿನ ನೈಸರ್ಗಿಕ ಕಾಲುವೆಗಳನ್ನು ಮುಚ್ಚಿಹಾಕಿ ರಸ್ತೆಗಳ ಮೇಲೆ ನೀರು ಹರಿಯಲು ಕಾರಣವಾಗಿದೆ ಎಂದು ಗಂಭೀರ ಅರೋಪ ಕೇಳಿಬಂದಿದೆ.
2013-14ರ ಅವಧಿಯಲ್ಲಿ 23 ಕೆರೆಗಳನ್ನು ಸಂಪೂರ್ಣವಾಗಿ ಒತ್ತುವರಿ ಮಾಡಿರುವ ಬಿಡಿಎ ಲೇಔಟ್ ನಿರ್ಮಿಸಿತ್ತು. ಒತ್ತುವರಿಯನ್ನು ಕಾನೂನು ಬದ್ಧಗೊಳಿಸುವಂತೆ ಕೋರಿ 2015ರಲ್ಲಿ ಬಿಡಿಎ ಸರ್ಕಾರಕ್ಕೆ ಪತ್ರ ಬರೆದಿತ್ತು. ನಗರದಲ್ಲಿ ಜೀವಂತವಾಗಿದ್ದ 23 ಕೆರೆಗಳಿಗೆ ಮಣ್ಣು ತುಂಬಿದ್ದ ಬಿಡಿಎ ಅದರ ಮೇಲೆ ಬಡಾವಣೆ ನಿರ್ಮಿಸಿ, 3,530 ನಿವೇಶನಗಳನ್ನು ನಿರ್ಮಿಸಿತ್ತು. ಈ ಸಂಬಂಧ ಸರ್ಕಾರಕ್ಕೆ ಬಿಡಿಎ ಬರೆದಿರುವ ಪತ್ರವು ಇದೀಗ ಬಹಿರಂಗವಾಗಿದೆ.
23 ಕೆರೆಗಳು ತಮ್ಮ ಮೂಲ ಸ್ವರೂಪ ಕಳೆದುಕೊಂಡಿದೆ ಎಂಬ ನೆಪ ಹೇಳಿದ್ದ ಬಿಡಿಎ ಕೆರೆಯನ್ನು ಸಂಪೂರ್ಣ ಮುಚ್ಚಿಹಾಕಿತ್ತು. 1985ರಲ್ಲಿ ನಡೆದ ಲಕ್ಷ್ಮಣ ರಾವ್ ಸಮಿತಿ ನಡೆಸಿದ ಕೆರೆಗಳ ಸರ್ವೇ ವರದಿ ಆಧಾರದ ಮೇರೆಗೆ ಬಡಾವಣೆ ನಿರ್ಮಿಸಲಾಗಿತ್ತು. ಇದೀಗ ಈ ಕೆರೆಗಳಿದ್ದ ಭಾಗದಲ್ಲಿ ಸಣ್ಣ ಮಳೆಗೂ ಜನರು ಪ್ರವಾಹದ ಭೀತಿ ಎದುರಿಸುವಂತಾಗಿದೆ.
ಒತ್ತುವರಿಯಾಗಿರುವ ಕೆರೆಗಳ ವಿವರ
ಗೆದ್ದಲಹಳ್ಳಿ ಕೆರೆ (126 ನಿವೇಶನ), ಚಿಕ್ಕಮಾರನಹಳ್ಳಿ ಕೆರೆ (115 ನಿವೇಶನ), ಬಾಣಸವಾಡಿ ಕೆರೆ (67 ನಿವೇಶನ), ಚನ್ನಸಂದ್ರ ಕೆರೆ (222 ನಿವೇಶನ), ಶಿನಿವಾಗಿಲು ಅಮಾನಿಕೆರೆ (486 ನಿವೇಶನ), ಬಿಳೇಕಹಳ್ಳಿ ಕೆರೆ (312 ನಿವೇಶನ), ನಾಗಸಂದ್ರ ಚೆನ್ನಮ್ಮಕರೆ (328 ನಿವೇಶನ), ತಿಪ್ಪಸಂದ್ರ ಕೆರೆ 3ನೇ ಹಂತ (234 ನಿವೇಶನ), ತಿಪ್ಪಸಂದ್ರ ಕೆರೆ 2ನೇ ಹಂತ (13 ನಿವೇಶನ), ಅಗರ ಕೆರೆ (113 ನಿವೇಶನ), ಎಳ್ಳುಕುಂಟೆ ಕೆರೆ (161 ನಿವೇಶನ), ಕಾಚರಕನಹಳ್ಳಿ ಕೆರೆ (126 ನಿವೇಶನ), ಹುಳಿಮಾವುಕೆರೆ (153 ನಿವೇಶನ), ವೆಂಕಟರಾಯನಕೆರೆ (130 ನಿವೇಶನ), ನಾಗರಬಾವಿ ಕೆರೆ (37 ನಿವೇಶನ), ಚಳ್ಳಕೆರೆ (71 ನಿವೇಶನ), ದೊಮ್ಮಲೂರು ಕೆರೆ (10 ನಿವೇಶನ), ಮೇಸ್ತ್ರಿ ಪಾಳ್ಯ ಕೆರೆ (23 ನಿವೇಶನ), ಬೆನ್ನಿಗಾನಹಳ್ಳಿ ಕೆರೆ (18 ನಿವೇಶನ), ಹೆಣ್ಣೂರು ಕೆರೆ (434 ನಿವೇಶನ) ತಲಘಟ್ಟಪುರ ಕೆರೆ (94 ನಿವೇಶನ), ಕೇತಮಾರನಹಳ್ಳಿ ಕೆರೆ (230 ನಿವೇಶನ), ಮಂಗನಹಳ್ಳಿ ಕೆರೆ (27 ನಿವೇಶನ).