ಬೆಂಗಳೂರಿನಲ್ಲಿ ಡೆಡ್ಲಿ ಅಪಘಾತ: ಈ ಅಪಘಾತ ದೃಶ್ಯ ನೋಡಿದ್ರೆ ಎದೆ ಝಲ್ಲೆನ್ನುತ್ತೆ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಲಾರಿ ಮತ್ತು ಬೈಕ್ ಮಧ್ಯೆ ಡೆಡ್ಲಿ ಅಪಘಾತವೊಂದು ಸಂಭಿವಿಸಿದ್ದು, ಇದರ ದೃಶ್ಯಾವಳಿಯನ್ನು ನೋಡಿದರೆ ಎದೆ ಝಲ್ಲೆನ್ನುತ್ತೆ.
ಬೆಂಗಳೂರು: ಲಾರಿ ಮತ್ತು ಬೈಕ್ ನಡುವೆ ಡೆಡ್ಲಿ ಅಪಘಾತವೊಂದು ಸಂಭಿವಿಸಿದ್ದು, ಈ ಅಪಘಾತ ದೃಶ್ಯವನ್ನು ನೋಡಿದವರ ಎದೆ ಝಲ್ ಎನ್ನುವಂತಿದೆ. ಸದಾಶಿವನಗರ ಟ್ರಾಫಿಕ್ ಪೊಲೀಸ್ ಠಾಣೆ ವ್ಯಾಪ್ತಿಯ ಮೇಖ್ರಿ ವೃತ್ತ ಶೆಲ್ ಪೆಟ್ರೊಲ್ ಬಂಕ್ ಬಳಿ ಇಂದು ಮುಂಜಾನೆ ಘಟನೆ ಸಂಭವಿಸಿದ್ದು, ಬೈಕ್ ಸವಾರ ಸಾವನ್ನಪ್ಪಿದ್ದಾನೆ.
ಶುಕ್ರವಾರ ಮುಂಜಾನೆ ಬೈಕ್ ಪೆಟ್ರೋಲ್ ಮುಗಿದಿದೆ ಎಂದು ಬೈಕ್ ನಡುವೆ ಮೇಖ್ರಿ ವೃತ್ತ ಶೆಲ್ ಪೆಟ್ರೊಲ್ ಬಂಕ್ಗೆ ಬಂದು ಬಾಟಲಿಯಲ್ಲಿ ಪೆಟ್ರೋಲ್ ತುಂಬಿಸಿಕೊಂಡು ಒನ್ ವೇ ರಸ್ತೆಯಲ್ಲಿ ಸಂಚರಿಸಿದ್ದಾನೆ. ಈ ವೇಳೆ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್ ಲಾರಿಯ ಅಡಿಯಲ್ಲಿ ಸಿಲುಕಿಕೊಂಡಿದ್ದು, ಸುಮಾರು 300 ಮೀಟರ್ ದೂರಕ್ಕೆ ಬೈಕ್ ಅನ್ನು ಲಾರಿ ಎಳೆದುಕೊಂಡು ಹೋಗಿದೆ. ಬೈಕ್ ಲಾರಿಗೆ ಸಿಲುಕಿಕೊಂಡಾಗ ಸ್ಪಾರ್ಕ್ ಆಗಿದ್ದು, ಲಾರಿಗೂ ಬೆಂಕಿ ಹತ್ತಿಕೊಂಡಿದೆ. ಘಟನೆಯಲ್ಲಿ ಮೃತಪಟ್ಟ ಯುವಕನನ್ನು ಖಾಸಗಿ ಕಾಲೇಜಿನಲ್ಲಿ ಫಾರ್ಮಸಿ ವಿದ್ಯಾಭ್ಯಾಸ ಮಾಡುತ್ತಿದ್ದ ತ್ರಿಪುರ ಮೂಲದ ಸುಮನ್ ಎಂದು ಗುರುತಿಸಲಾಗಿದೆ.
ನಕಲಿ ಬಂಗಾರ ಇರಿಸಿ, ಅಸಲಿ ಬಂಗಾರದ ಒಡವೆ ಕಳ್ಳತನ
ಶಿವಮೊಗ್ಗ: ಆಭರಣದ ಅಂಗಡಿಯಲ್ಲಿ ಮಾಲೀಕನ ಗಮನ ಬೇರೆಡೆ ಸೆಳೆದು ನಕಲಿ ಬಂಗಾರ ಇರಿಸಿ, ಅಸಲಿ ಬಂಗಾರದ ಒಡವೆ ಕಳ್ಳತನ ಮಾಡಿದ ಘಟನೆ ಜಿಲ್ಲೆಯ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಗಾಂಧಿ ಬಜಾರ್ನ ಆಭರಣದ ಮಳಿಗೆಯಲ್ಲಿ ನಡೆದಿದೆ. ಬುರ್ಖಾ ಧರಿಸಿ ಬಂದಿದ್ದ ಇಬ್ಬರು ಮಹಿಳೆಯರು ಮತ್ತು ಅವರೊಂದಿಗೆ ಬಂದಿದ್ದ ಓರ್ವ ವ್ಯಕ್ತಿಯಿಂದ ಈ ಕೃತ್ಯ ಎಸಗಲಾಗಿದೆ.
ಅಂಗಡಿ ಮಾಲೀಕರು ಅಂಗಡಿಯಲ್ಲಿ ಪರಿಶೀಲನೆ ಮಾಡುತ್ತಿದ್ದಾಗ ಟ್ರೇನಲ್ಲಿ ನಕಲಿ ಬಂಗಾರದ ಒಡವೆಗಳಿರುವುದು ಪತ್ತೆಯಾಗಿದೆ. ಅನುಮಾನಗೊಂಡು ಸಿಸಿಟಿವಿಯನ್ನು ಪರಿಶೀಲನೆ ನಡೆಸಿದಾಗ ಕಳ್ಳತನ ದೃಶ್ಯ ಸೆರೆಯಾಗಿದೆ. ಅದರಂತೆ ಒಂದು ಚಿನ್ನದ ಉಂಗುರ ಮತ್ತು ಒಂದು ಜೊತೆ ಕವಿಯೋಲೆ ಖರೀದಿಸಲು ಬುರ್ಖಾ ಧರಿಸಿದ್ದ ಇಬ್ಬರು ಮಹಿಳೆಯರು ಮತ್ತು ಓರ್ವ ಪುರುಷ ಅಂಗಡಿಗೆ ಆಗಮಿಸಿದ್ದಾರೆ. ಈ ವೇಳೆ ಮಾಲೀಕನ ಗಮನ ಬೇರೆಡೆ ಸೆಳೆದು ಟ್ರೇನಲ್ಲಿದ್ದ ಚಿನ್ನದ ಉಂಗುರ ಮತ್ತು ಎರಡು ಜೊತೆ ಕಿವಿಯೋಲೆ ಕಳ್ಳತನ ಮಾಡಿದ್ದು, ಆ ಜಾಗಕ್ಕೆ ಅವರು ತಂದಿದ್ದ ನಕಲಿ ಬಂಗಾರ ಉಂಗುರ ಮತ್ತು ಕಿವಿಯೋಲೆಯನ್ನು ಇಟ್ಟು ವಾಪಸ್ ಆಗಿದ್ದಾರೆ.
ಒಟ್ಟು 11 ಸಾವಿರ ಮೌಲ್ಯದ ಬಂಗಾರ ಖರೀದಿಸಿದ ಕಳ್ಳರು ಸುಮಾರು 85 ಸಾವಿರ ಮೌಲ್ಯದ ಚಿನ್ನಾಭರಣ ಕದ್ದೊಯ್ದಿದ್ದಾರೆ. ಘಟನೆ ಸಂಬಂಧ ಆಭರಣ ಅಂಗಡಿ ಮಾಲೀಕರು ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅತ್ಯಾಚಾರದ ದೂರಿನಿಂದ ಮನನೊಂದು ಯುವಕ ಆತ್ಮಹತ್ಯೆ
ಶಿವಮೊಗ್ಗ: ಭಗ್ನ ಪ್ರೇಮ ಪ್ರಕರಣ ಹಾಗೂ ಅತ್ಯಾಚಾರದ ದೂರಿನಿಂದ ಮನನೊಂದು ಯುವಕನೋರ್ವ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿ ನಡೆದಿದೆ. ಹಿತ್ತಲ ಗ್ರಾಮದ ಯುವಕ ಮದನ ಕುಮಾರ (24) ಮತ್ತು ಅದೇ ಗ್ರಾಮದ ಯುವತಿಯೊಬ್ಬಳು ಪರಸ್ಪರ ಪ್ರೀತಿಸುತ್ತಿದ್ದರು. ನಂತರ ಯುವತಿ ಕುಟುಂಬಸ್ಥರು ಯವಕನಿಗೆ ಕಿರುಕುಳ ನೀಡಲು ಆರಂಭಿಸಿದ್ದು, ಅತ್ಯಾಚಾರದ ಸುಳ್ಳು ಆರೋಪ ಹೊರಿಸಿದ್ದಾರೆ. ಈ ಬಗ್ಗೆ ಯುವಕ ಆತ್ಮಹತ್ಯೆಗೂ ಮುನ್ನ ಬರೆದಿಟ್ಟ ಡೆತ್ ನೋಟ್ನಲ್ಲಿ ಉಲ್ಲೇಖಿಸಿದ್ದಾನೆ. ಅಲ್ಲದೆ ತನ್ನ ಅಂಗಾಂಗ ದಾನ ಮಾಡುವಂತೆಯೂ ಮನವಿ ಮಾಡಿಕೊಂಡಿದ್ದಾನೆ.
ವೈರಿಂಗ್ ಕೆಲಸ ಮಾಡಿಕೊಂಡಿದ್ದ ಮದನ್ ಕುಮಾರ, ಅದೇ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದ. ಹಲವು ವರ್ಷಗಳಿಂದ ಇಬ್ಬರ ನಡುವೆ ಪ್ರೀತಿಯಿತ್ತು ಎಂದು ಯುವಕನ ಕುಟುಂಬಸ್ಥರು ಹೇಳಿದ್ದಾರೆ. ಅಲ್ಲದೆ ಯುವತಿ ಮನೆಯವರಿಂದ ಈತನ ಮೇಲೆ ಕಿರುಕುಳ ನಡೆಯುತ್ತಿತ್ತು. ಮದನ್ ಕುಮಾರ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿತ್ತು. ಈ ನಡುವೆ ಯುವತಿ ಮನೆಯವರು 25 ಲಕ್ಷ ರೂ. ನೀಡಲು ಒತ್ತಡ ಹಾಕಿದ್ದರು ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಸಾವಿಗೆ ಕಾರಣ ಆದವರ ವಿರುದ್ಧ ಕ್ರಮಕ್ಕೆ ಡೆತ್ ನೋಟ್ನಲ್ಲಿ ಉಲ್ಲೇಖಿಸಿದ ಯುವಕ, ಯುವತಿಯ ತಂದೆ ಮಂಜಪ್ಪ, ಅವರ ಪತ್ನಿ ಮತ್ತು ಮಗಳು ಕೊಲೆ ಬೆದರಿಕೆ ಒಡ್ಡಿದ್ದಾರೆ. ನನ್ನ ಫೋನ್‌ನಲ್ಲಿ ಕೊಲೆ ಬೆದರಿಕೆ ರೆಕಾರ್ಡಿಂಗ್ ಇದೆ. ಅತ್ಯಾಚಾರದ ಸುಳ್ಳು ಆರೋಪ ಹೊರಿಸಿ ಕಿರುಕುಳ ನೀಡಿದ್ದಾರೆ. ಅಪಹರಣ ಮಾಡಿಯೂ ಕೊಲೆಗೆ ಯತ್ನಿಸಿದ್ದರು. ನನ್ನ ಸಾವಿಗೆ ಮಂಜಪ್ಪ, ಗೀತಮ್ಮ, ಗುರುರಾಜ್, ಕಿರಣ್, ಶಿವಪ್ಪ ತನ್ನ ಸಾವಿಗೆ ಕಾರಣ ಎಂದು ಡೆತ್ ನೋಟ್ನಲ್ಲಿ ಬರೆದಿಟ್ಟಿದ್ದಾನೆ. ಘಟನೆ ಸಂಬಂಧ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವವಿವಾಹಿತೆಯ ಬರ್ಬರ ಹತ್ಯೆ
ಬೆಂಗಳೂರು ಗ್ರಾಮಾಂತರ: ಚಾಕುವಿನಿಂದ ಇರಿದು ನವವಿವಾಹಿತೆಯ ಬರ್ಬರ ಹತ್ಯೆ ಮಾಡಿದ ಘಟನೆ ದೇವನಹಳ್ಳಿ ತಾಲೂಕಿನ ಆವತಿ ಗ್ರಾಮದಲ್ಲಿ ನಡೆದಿದೆ. ಪ್ರೀತಿ ನಿರಾಕರಿಸಿ ಬೇರೊಬ್ಬನ ಜೊತೆ ವಿವಾಹವಾಗಿದ್ದಕ್ಕೆ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಕೊಲೆ ಗೈಯಲಾಗಿದೆ. ಪಾಗಲ್ ಪ್ರೇಮಿ ಸುಬ್ರಹ್ಮಣ್ಯ ಎಂಬುವನಿಂದ ಸೌಮ್ಯಾ(23) ಕೊಲೆಯಾದ ದುರ್ದೈವಿ.
ಬೆಂಗಳೂರಿನ ನಾಗವಾರದ ಕಾಫಿ ಡೆನಲ್ಲಿ ಕೆಲಸ ಮಾಡಿಕೊಂಡಿದ್ದ ಸೌಮ್ಯ ಹಾಗೂ ಅಲ್ಲೆ ಕೆಲಸ ಮಾಡಿಕೊಂಡಿದ್ದ ಸುಬ್ರಮಣ್ಯ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಕೆಲವು ತಿಂಗಳ ಹಿಂದೆ ಸೌಮ್ಯ ಕೆಲಸ ಬಿಟ್ಟಿದ್ದು, ಹದಿನೈದು ದಿನಗಳ ಹಿಂದೆ ಬೆರೊಬ್ಬನ ಜೊತೆ ಮದುವೆಯಾಗಿದ್ದಳು. ಮದುವೆ ವಿಚಾರ ತಿಳಿದ ಸುಬ್ರಮಣ್ಯ ಕೊಲೆ ಮಾಡಲು ನಿರ್ಧರಿಸಿದ್ದಾನೆ. ಅದರಂತೆ ರಾತ್ರಿ ಮನೆಯವರು ಗಣೇಶನ ಪೂಜೆಗೆ ಹೋಗಿದ್ದ ಹಿನ್ನೆಲೆ ಸೌಮ್ಯ ಮನೆಯಲ್ಲಿ ಒಂಟಿಯಾಗಿದ್ದಳು. ಈ ವೇಳೆ ಮನೆಗೆ ನುಗ್ಗಿದ ಸುಬ್ರಮಣ್ಯ ಎರಡು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.
ಬೆಂಗಳೂರು ಡೆಡ್ಲಿ ಅಪಘಾತದ ದೃಶ್ಯಾವಳಿ:
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:26 am, Fri, 16 September 22