ಬೆಂಗಳೂರಿನಲ್ಲಿ ಪ್ರತಿ ದಿನ ರಸ್ತೆಗಿಳಿಯುತ್ತಿವೆ 2000 ಹೊಸ ವಾಹನ! ವಾಯು ಮಾಲಿನ್ಯದಲ್ಲಿ ದೆಹಲಿಯನ್ನೂ ಮೀರಿಸುವ ಆತಂಕ

| Updated By: ಗಣಪತಿ ಶರ್ಮ

Updated on: Aug 15, 2024 | 10:19 AM

ಬೆಂಗಳೂರಿನಲ್ಲಿ ಪ್ರತಿದಿನ ಎರಡು ಸಾವಿರ ಹೊಸ ಕಾರು, ಬೈಕ್​ಗಳು ರೋಡಿಗಿಳಿಯುತ್ತಿವೆ. ತಿಂಗಳಿಗೆ ಸರಾಸರಿ 54 ರಿಂದ 60 ಸಾವಿರ ಹೊಸ ವಾಹನಗಳು ನೋಂದಣಿಯಾಗುತ್ತಿವೆ. ಈಗಾಗಲೇ ಬೆಂಗಳೂರಲ್ಲಿ ವಾಹನ ಸವಾರರು ಒಂದು ಏರಿಯಾದಿಂದ ಮತ್ತೊಂದು ಪ್ರದೇಶಕ್ಕೆ ತೆರಳಬೇಕಿದ್ದರೆ ಗಂಟೆಗಟ್ಟಲೆ ಟ್ರಾಫಿಕ್​​ನಲ್ಲಿ ನಿಂತು ಪರದಾಡಬೇಕಾಗುತ್ತಿದೆ. ಪ್ರತಿದಿನ ಹೊಸದಾಗಿ ರಸ್ತೆಗಿಳಿಯುತ್ತಿರುವ ಹೊಸ ವಾಹನಗಳ ಸಂಖ್ಯೆಯನ್ನು ಗಮನಿಸಿದರೆ, ದೆಹಲಿಯನ್ನು ಬೆಂಗಳೂರು ಹಿಂದಿಕ್ಕಲಿದೆಯಾ ಎಂಬ ಆತಂಕ ಶುರುವಾಗಿದೆ.

ಬೆಂಗಳೂರಿನಲ್ಲಿ ಪ್ರತಿ ದಿನ ರಸ್ತೆಗಿಳಿಯುತ್ತಿವೆ 2000 ಹೊಸ ವಾಹನ! ವಾಯು ಮಾಲಿನ್ಯದಲ್ಲಿ ದೆಹಲಿಯನ್ನೂ ಮೀರಿಸುವ ಆತಂಕ
ಬೆಂಗಳೂರು ಟ್ರಾಫಿಕ್ (ಸಂಗ್ರಹ ಚಿತ್ರ)
Follow us on

ಬೆಂಗಳೂರು, ಆಗಸ್ಟ್ 15: ಪ್ರತಿದಿನ ಬೆಂಗಳೂರಿಗೆ ಒಂದು ಲಕ್ಷ ವಾಹನಗಳು ಬಂದು ಹೋಗುತ್ತಿವೆ. ಕಳೆದ ಎರಡು ತಿಂಗಳಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಶೇ 20 ರಷ್ಟು ಏರಿಕೆ ಆಗಿದೆ. ಹೀಗೆ ವಾಹನಗಳ ಸಂಖ್ಯೆ ಏರಿಕೆ ಆದರೆ ಬೆಂಗಳೂರಿನಲ್ಲಿ ಚಿಕ್ಕ ಸಿಗ್ನಲ್ ದಾಟಲು 15 ನಿಮಿಷ ಬೇಕಾಗಬಹುದು. ದೊಡ್ಡ ಸಿಗ್ನಲ್ ದಾಟಲು 22 ನಿಮಿಷಗಳು ಬೇಕಾಗುತ್ತದೆ ಎಂದು ಐಐಎಸ್ಸಿ ತಜ್ಞರು ವರದಿ ತಯಾರು ಮಾಡಿದ್ದಾರೆ. ಬೆಂಗಳೂರಿನ ರಸ್ತೆಗಳ ಸಾಮರ್ಥ್ಯಕ್ಕೂ ಮೀರಿ ವಾಹನಗಳ ಸಂಖ್ಯೆ ಹೆಚ್ಚಳವಾಗುತ್ತಿದೆ‌.

ವಾಯುಮಾಲಿನ್ಯ ಹೆಚ್ಚಳದ ಆತಂಕ

ಬೆಂಗಳೂರು ದೇಶದ 2ನೇ ಅತಿದೊಡ್ಡ ವಾಹನ ದಟ್ಟಣೆ ಇರುವ ನಗರ. ವಾಹನಗಳ ಸಂಖ್ಯೆ ಇನ್ನಷ್ಟು ಹೆಚ್ಚಾದರೆ ದೆಹಲಿಯಂತೆ ಬೆಂಗಳೂರು ಕೂಡ ವಾಯುಮಾಲಿನ್ಯ ನಗರವಾಗಲಿದೆ. ಬೆಂಗಳೂರಿನ ಈಗಿನ ರಸ್ತೆಗಳು ಕೇವಲ 50 ಲಕ್ಷ ವಾಹನಗಳ ಓಡಾಟಕ್ಕೆ ಯೋಗ್ಯವಾಗಿವೆ. ಆದರೆ ಈಗ ರಾಜಧಾನಿಯಲ್ಲಿ ವಾಹನಗಳ ಸಂಖ್ಯೆ ಮಿತಿ ಮೀರಿದೆ. ಮುಂದಿನ ನಾಲ್ಕು ತಿಂಗಳಲ್ಲಿ 2 ಲಕ್ಷ ಹೊಸ ವಾಹನಗಳು ನಗರಕ್ಕೆ ಸೇರ್ಪಡೆಯಾಗಲಿವೆ.

ಬೆಂಗಳೂರಲ್ಲಿ 31-03-24 ರ ವರೆಗೆ 25,13,294 ಲಕ್ಷ ಕಾರುಗಳು, 78,33,390 ಲಕ್ಷ ಬೈಕ್​ಗಳು ರೋಡಿಗಿಳಿದಿದ್ರೆ ಒಟ್ಟು 1,03,46,684 ಕೋಟಿ ಕಾರುಗಳು ರಿಜಿಸ್ಟ್ರೇಷನ್ ಆಗಿವೆ. 01-04-23 ರಿಂದ 31-03-24 ರ ವರೆಗೆ ರೋಡಿಗಿಳಿದ ಹೊಸ ಕಾರುಗಳ ಸಂಖ್ಯೆ 1,59,239 ಲಕ್ಷ. 47,80,98 ಲಕ್ಷ ಬೈಕ್​​ಗಳು ಹೊಸದಾಗಿ ರಿಜಿಸ್ಟ್ರೇಷನ್ ಆಗಿವೆ. ಒಟ್ಟು ಕಳೆದ ಆರ್ಥಿಕ ವರ್ಷದಲ್ಲಿ 6,37,337 ಲಕ್ಷ ಹೊಸ ಕಾರುಗಳು, ಬೈಕ್​ಗಳು ನೋಂದಣಿ ಆಗಿದೆ ಎಂದು ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಮಲ್ಲಿಕಾರ್ಜುನ ಮಾಹಿತಿ ನೀಡಿದ್ದಾರೆ.

ದೆಹಲಿಯಲ್ಲಿ 31-03-24 ರ ವರೆಗೆ ಕಾರುಗಳ ಸಂಖ್ಯೆ 41,82,834 ಲಕ್ಷ ಇದ್ದರೆ, ಬೈಕ್​​ಗಳ ಸಂಖ್ಯೆ- 94,96,069 ಲಕ್ಷವಿದೆ. ಒಟ್ಟು 1,36,78,903 ಕೋಟಿ ಕಾರು ಹಾಗೂ ಬೈಕ್​​ಗಳಿವೆ. 01-04-23 ರಿಂದ 31-04-24 ರಲ್ಲಿ 1,93,548 ಲಕ್ಷ ಕಾರುಗಳು 4,02,610 ಲಕ್ಷ ಹೊಸ ಬೈಕ್ ಗಳು ರೋಡಿಗಿಳಿದಿವೆ. ಒಟ್ಟು ಕಳೆದ ಆರ್ಥಿಕ ವರ್ಷದಲ್ಲಿ 5,96,158 ಲಕ್ಷ ಹೊಸ ಕಾರು, ಬೈಕ್​ಗಳು ರಿಜಿಸ್ಟ್ರೇಷನ್ ಆಗಿವೆ.

ದೆಹಲಿ, ಬೆಂಗಳೂರು ವಾಹನ ಸಂಖ್ಯೆ ಹೋಲಿಕೆ

ದೆಹಲಿ ಮತ್ತು ಬೆಂಗಳೂರು ವಾಹನಗಳ ಸಂಖ್ಯೆಗೆ ಹೋಲಿಕೆ ಮಾಡಿದರೆ ದೆಹಲಿಯಲ್ಲಿ 41,82,834 ಲಕ್ಷ ಕಾರುಗಳಿದ್ದರೆ, ಬೆಂಗಳೂರಲ್ಲಿ 25,13,294 ಲಕ್ಷ ಕಾರುಗಳಿವೆ. ದೆಹಲಿಗೂ ಬೆಂಗಳೂರಿಗೂ 16,69,570 ಲಕ್ಷ ಕಾರುಗಳ ವ್ಯತ್ಯಾಸವಿದ್ದರೆ, ದೆಹಲಿಯಲ್ಲಿ 94,96,069 ಲಕ್ಷ ಬೈಕ್​​ಗಳಿದ್ರೆ ಬೆಂಗಳೂರಲ್ಲಿ 78,33,390 ಲಕ್ಷ ಬೈಕ್​​ಗಳಿವೆ. ದೆಹಲಿಗೂ ಬೆಂಗಳೂರಿಗೂ 16,62,679 ಲಕ್ಷ ಬೈಕ್​ಗಳ ವ್ಯತ್ಯಾಸವಿದೆ ಅಷ್ಟೇ.

ಕರ್ನಾಟಕ ರಾಜ್ಯದಲ್ಲಿ ಇಲ್ಲಿಯವರೆಗೆ ರಿಜಿಸ್ಟ್ರೇಷನ್ ಆಗಿರುವ ಕಾರುಗಳ ಸಂಖ್ಯೆ 46,76,959 ಲಕ್ಷ ಆಗಿದ್ದರೆ, 2,25,30,213 ಕೋಟಿ ಬೈಕ್​ಗಳಿವೆ. ಇದೇ ರೀತಿಯಲ್ಲಿ ರಾಜಧಾನಿಯಲ್ಲಿ ಹೊಸ ಕಾರು ಬೈಕ್​​ಗಳು ರೋಡಿಗಿಳಿದರೆ, ದೆಹಲಿಯನ್ನು ಹಿಂದಿಕ್ಕಿ ಮುನ್ನುಗ್ಗುವುದು ಬಹುತೇಕ ಖಚಿತ.

ಸೃಷ್ಟಿಯಾಗಲಿದೆ ದೆಹಲಿ ಮಾದರಿ ವಾಹನ ನಿಯಂತ್ರಣದ ಅನಿವಾರ್ಯತೆ

ಆದರೆ ಎನ್​ಜಿಟಿ ಆದೇಶದ ಪ್ರಕಾರ ದೆಹಲಿಯಲ್ಲಿ 15 ವರ್ಷ ಮೇಲ್ಪಟ್ಟ ಪೆಟ್ರೋಲ್ ವಾಹನಗಳು, ಹತ್ತು ವರ್ಷ ಮೇಲ್ಪಟ್ಟ ಡಿಸೇಲ್ ವಾಹನಗಳು ಸಂಚಾರ ಮಾಡುವಂತಿಲ್ಲ. ಆದರೆ, ರಾಜ್ಯದಲ್ಲಿ ಹದಿನೈದು ವರ್ಷ ಮೇಲ್ಪಟ್ಟ ಸರ್ಕಾರದ, ಸರ್ಕಾರಿ ಸ್ವಾಮ್ಯದ ನಿಗಮ ಮಂಡಳಿ, ಕಾರ್ಪೋರೇಷನ್ ವಾಹನಗಳನ್ನು ಮಾತ್ರ ಕಡ್ಡಾಯವಾಗಿ ಗುಜರಿಗೆ ಹಾಕಬೇಕು ಎಂಬ ನಿಯಮವಿದೆ. ಆದರೆ ರಾಜಧಾನಿಯಲ್ಲಿ ಪ್ರತಿದಿನ ಹೊಸದಾಗಿ ರೋಡಿಗಿಳಿಯುತ್ತಿರುವ ವಾಹನಗಳ ಸಂಖ್ಯೆಯನ್ನು ಗಮನಿಸಿದರೆ, ಇಲ್ಲೂ ದೆಹಲಿ ಮಾದರಿಯಲ್ಲಿ ನಿಯಮ ಜಾರಿ ಮಾಡಬೇಕಿದೆ. ಕಾರಣ, ವಾಹನಗಳ ಸಂಖ್ಯೆ ಹೆಚ್ಚಳವಾದ ಮೇಲೆ ವಾಯುಮಾಲಿನ್ಯ ಹೆಚ್ಚಾಯಿತು. ಈ ಸ್ಥಿತಿಯಲ್ಲಿ ಜನರು ಉಸಿರಾಡಲು ಆಗುತ್ತಿಲ್ಲ ಎಂದು ಕೂಗಾಡಿದರೆ ಯಾವುದೇ ಪ್ರಯೋಜನವಿಲ್ಲ ಎಂದು ಟ್ರಾಫಿಕ್ ತಜ್ಞ ಶ್ರೀ ಹರಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ನಗರದಲ್ಲಿವೆ 180 ಡೆಡ್ಲಿ ಸ್ಪಾಟ್, ಬಿಬಿಎಂಪಿಗೆ ವರದಿ ಸಲ್ಲಿಸಿದ ಟ್ರಾಫಿಕ್ ಪೊಲೀಸರು

ಒಟ್ಟಿನಲ್ಲಿ ದಿನದಿಂದ ದಿನಕ್ಕೆ ಬೆಂಗಳೂರಲ್ಲಿ ಸಾವಿರಾರು ಹೊಸ ಕಾರು ಬೈಕ್​ಗಳು ರಸ್ತೆಗಿಳಿಯುತ್ತಿವೆ. ಕೆಲವೇ ಕೆಲವು ವರ್ಷಗಳಲ್ಲಿ ದೆಹಲಿಯನ್ನು ಹಿಂದಿಕ್ಕಿ ಬೆಂಗಳೂರು ವಾಹನಗಳ ಸಂಖ್ಯೆಯಲ್ಲಿ ಹೆಚ್ಚಾಗಬಹುದು. ಹಾಗಾಗಿ ಈಗಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲಾಂದ್ರೆ ದೆಹಲಿ ಮಾದರಿಯಲ್ಲಿ ಜನರು ಉಸಿರಾಟದ ಸಮಸ್ಯೆಯಿಂದ ಬಳಸಬಹುದು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:49 am, Thu, 15 August 24