ಬೆಂಗಳೂರು: ನಗರದಲ್ಲಿವೆ 180 ಡೆಡ್ಲಿ ಸ್ಪಾಟ್, ಬಿಬಿಎಂಪಿಗೆ ವರದಿ ಸಲ್ಲಿಸಿದ ಟ್ರಾಫಿಕ್ ಪೊಲೀಸರು
ಬೆಂಗಳೂರಿನ ಮಳೆ ಅವಾಂತರಗಳ ಬಗ್ಗೆ ಎಷ್ಟೇ ವಿರೋಧ ವ್ಯಕ್ತವಾದರೂ ಎಚ್ಚೆತ್ತುಕೊಳ್ಳದೇ ನಿದ್ದೆಗೆ ಜಾರಿದ್ದ ಪಾಲಿಕೆ ಡಿಸಿಎಂ ಡಿಕೆ ಶಿವಕುಮಾರ್ ಸಿಟಿರೌಂಡ್ಸ್ ಬಳಿಕ ಇದೀಗ ನಿಧಾನಕ್ಕೆ ಕಣ್ಣುತೆರೆಯುತ್ತಿದೆ. ಬೆಂಗಳೂರಲ್ಲಿ ಏನೇ ಅವಾಂತರ ಸೃಷ್ಟಿಯಾದರೂ ಪಾಲಿಕೆಗಿಂತ ಮೊದಲೇ ಧಾವಿಸುವ ಟ್ರಾಫಿಕ್ ಪೊಲೀಸರು ಇದೀಗ ಬಿಬಿಎಂಪಿಗೆ ಬೆಂಗಳೂರಿನ 180 ಡೆಡ್ಲಿಸ್ಪಾಟ್ಗಳ ವರದಿ ಸಲ್ಲಿಸಿದ್ದಾರೆ. ಮಳೆ ಬಂದಾಗ ಅವಾಂತರ ಸೃಷ್ಟಿಯಾಗುವ ಜಾಗಗಳ ಬಗ್ಗೆ ಫೋಟೋ ಸಮೇತ ದಾಖಲೆ ಕೊಟ್ಟರೂ ಮೌನವಾಗಿದ್ದ ಪಾಲಿಕೆ, ಇದೀಗ ಪೊಲೀಸರ ರಿಪೋರ್ಟ್ ಪರಿಶೀಲಿಸಿ ಕೆಲಸ ಶುರುಮಾಡಲು ಸಜ್ಜಾಗಿದೆ.
ಬೆಂಗಳೂರು, ಆಗಸ್ಟ್ 15: ರಾಜಧಾನಿ ಬೆಂಗಳೂರಲ್ಲಿ ಎರಡು ದಿನ ಹಿಂದಷ್ಟೇ ರಾತ್ರಿ ಸುರಿದ ಭಾರಿ ಮಳೆ ಅವಾಂತರ ಸೃಷ್ಟಿಸಿತ್ತು. ಬೆಂಗಳೂರಿನ ರಸ್ತೆಗಳು, ಅಂಡರ್ ಪಾಸ್ಗಳು ಜಲಾವೃತವಾಗಿದ್ದವು. ಮಳೆ ಅವಾಂತರ ಸೃಷ್ಟಿಸಿದ್ದರಿಂದ ಡಿಸಿಎಂ ಡಿಕೆ ಶಿವಕುಮಾರ್ ಸಿಟಿ ರೌಂಡ್ಸ್ ಕೂಡ ಮಾಡಿದ್ದರು. ಇದೀಗ ಇದೇ ವಿಚಾರದ ಬಗ್ಗೆ ಪಾಲಿಕೆಗೆ ಪೊಲೀಸ್ ಇಲಾಖೆ ವರದಿ ನೀಡಿದೆ. ಸದ್ಯ ಮಳೆ ಬಂದು ಅವಾಂತರ ಸೃಷ್ಟಿಯಾದರೂ, ಮರ ಬಿದ್ದು ರಸ್ತೆ ಜಾಮ್ ಆದರೂ ಬಿಬಿಎಂಪಿಗಿಂತ ಮೊದಲೇ ಸ್ಥಳಕ್ಕೆ ಬರುವ ಪೊಲೀಸರು ಇದೀಗ ಬೆಂಗಳೂರಲ್ಲಿ ಪದೇ ಪದೇ ಸಮಸ್ಯೆ ತಂದಿಡುವ ಸ್ಥಳಗಳ ಬಗ್ಗೆ ಪಾಲಿಕೆಗೆ ರಿಪೋರ್ಟ್ ಕೊಟ್ಟಿದ್ದಾರೆ.
ಇನ್ನು ಮಳೆ ಬಂದಾಗ ಅಂಡರ್ಪಾಸ್ಗಳು, ರಸ್ತೆಗಳು ಜಲಾವೃತವಾಗಿ ಅವಾಂತರ ಸೃಷ್ಟಿಯಾಗುವುದರ ಜೊತೆಗೆ ಟ್ರಾಫಿಕ್ ಜಾಮ್ ಕೂಡ ಉಂಟಾಗುತ್ತಿದೆ. ಈ ಹಿನ್ನೆಲೆ ಪ್ರತಿ ಬಾರಿ ಮಳೆ ಬಂದಾಗ ಸ್ಥಳಕ್ಕೆ ಧಾವಿಸಿ ಪರದಾಡುವ ಪೊಲೀಸರು 180 ಅಪಾಯಕರ ಸ್ಥಳಗಳನ್ನು ಗುರುತಿಸಿದ್ದಾರೆ. ಮಳೆ ಬಂದ ವೇಳೆ ಆಗುವ ಅವಾಂತರಗಳನ್ನು ಫೋಟೋ ಸಮೇತ ಬಿಬಿಎಂಪಿಗೆ ನೀಡಿದ್ದಾರೆ. ಜತಗೆ, ಸಮಸ್ಯೆ ಬಗೆಹರಿಸಲು ಸಲಹೆ ಕೊಟ್ಟಿದ್ದಾರೆ.
ಸದ್ಯ ಮಳೆ ಅವಾಂತರಗಳ ಬಗ್ಗೆ ಪೊಲೀಸರು ಕೊಟ್ಟಿದ್ದ ಜಾಗಗಳ ಪರಿಶೀಲನೆಗೆ ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ. ಮಳೆ ಬಂದರೆ ಸಮಸ್ಯೆಯಾಗುವ ಜಾಗಗಳ ಬಗ್ಗೆ ಪರಿಶೀಲನೆ ನಡೆಸಲು ಹೊರಟಿರುವ ಪಾಲಿಕೆ ಕೆಲವೆಡೆ ಕೆಲಸ ಆರಂಭಿಸಿದೆ. ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸಾಲು ಸಾಲು ರಜೆ; ಊರುಗಳತ್ತ ಮುಖ ಮಾಡಿದ ಸಿಲಿಕಾನ್ ಸಿಟಿ ಮಂದಿ
ಒಟ್ಟಿನಲ್ಲಿ ಊರೆಲ್ಲ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕೊಂಡರು ಎಂಬ ಹಾಗೆ ಮಳೆ ಬಂದು ಅವಾಂತರ ಸೃಷ್ಟಿಯಾದ ನಂತರ ಬಳಿಕ ಇದೀಗ ಡೆಡ್ಲಿ ಸ್ಪಾಟ್ಗಳ ಮೇಲೆ ಪಾಲಿಕೆ ನಿಗಾ ಇಡಲು ಹೊರಟಿದೆ. ಸದ್ಯ ಬೆಂಗಳೂರಿನ ಜನರಿಗೆ ಇನ್ನಾದರೂ ಮಳೆ ಸಂಕಷ್ಟದಿಂದ ಮುಕ್ತಿ ಸಿಗುತ್ತಾ ಎಂಬುದನ್ನು ಕಾದುನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ