ಗಣರಾಜ್ಯೋತ್ಸವಕ್ಕೆ ಮಾಣಿಕ್ ಷಾ ಮೈದಾನ ಸಜ್ಜು: ಬಿಗಿ ಪೊಲೀಸ್ ಬಂದೋಬಸ್ತ್, ಇ–ಪಾಸ್​ ವ್ಯವಸ್ಥೆ

Republic Day: 77ನೇ ಗಣರಾಜ್ಯೋತ್ಸವಕ್ಕೆ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನ ಸಜ್ಜಾಗಿದೆ. ರಾಜ್ಯಪಾಲರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಹೀಗಾಗಿ ಸಾರ್ವಜನಿಕ ದೃಷ್ಟಿಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಪಾಸ್ ವ್ಯವಸ್ಥೆ ಕೂಡ ಮಾಡಲಾಗಿದೆ. ವಾಹನ ಸಂಚಾರದಲ್ಲೂ ಬದಲಾವಣೆ ಮಾಡಲಾಗಿದೆ.

ಗಣರಾಜ್ಯೋತ್ಸವಕ್ಕೆ ಮಾಣಿಕ್ ಷಾ ಮೈದಾನ ಸಜ್ಜು: ಬಿಗಿ ಪೊಲೀಸ್ ಬಂದೋಬಸ್ತ್, ಇ–ಪಾಸ್​ ವ್ಯವಸ್ಥೆ
ಮಾಣಿಕ್ ಷಾ ಮೈದಾನ (ಸಂಗ್ರಹ ಚಿತ್ರ)

Updated on: Jan 25, 2026 | 6:44 AM

ಬೆಂಗಳೂರು, ಜನವರಿ 26: 77ನೇ ಗಣರಾಜ್ಯೋತ್ಸವಕ್ಕೆ (Republic Day) ಕ್ಷಣಗಣನೆ ಶುರುವಾಗಿದೆ. ಐತಿಹಾಸಿಕ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ (Manekshaw Parade ground) ಗಣರಾಜ್ಯೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಾರ್ವಜನಿಕ ದೃಷ್ಟಿಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಈ ಸಂಬಂಧ ತಾಲೀಮು ಕೂಡ ನಡೆದಿದೆ.

ಜನವರಿ 26ರಂದು ಭಾರತ ಸಂವಿಧಾನ ಜಾರಿಗೆ ಬಂದ ದಿನವನ್ನಾಗಿ ಸ್ಮರಿಸುತ್ತೇವೆ. ಇದರ ಅಂಗವಾಗಿ ಇಡೀ ದೇಶಾದ್ಯಂತ ಗಣರಾಜ್ಯೋತ್ಸವ ದಿನವನ್ನಾಗಿ ಆಚರಿಸಲಾಗುತ್ತದೆ. ದೇಶವು ಗಣರಾಜ್ಯವಾಗಿರುವುದನ್ನು ಆಚರಿಸುವುದು, ಅಂದರೆ ಜನರಿಂದಲೇ ಆಡಳಿತ ನಡೆಯುವ ವ್ಯವಸ್ಥೆ ದೇಶದಲ್ಲಿ ಜಾರಿಯಾಗಿ 77 ವರ್ಷ ಪೂರೈಸಿದೆ. ಹೀಗಾಗಿ ಜನವರಿ 26 ರಂದು ಗಣರಾಜ್ಯೋತ್ಸವವನ್ನಾಗಿ ಆಚರಿಸುತ್ತಿದ್ದು, ಇದಕ್ಕಾಗಿ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನ ಸಜ್ಜಾಗಿದೆ.

ಇದನ್ನೂ ಓದಿ: ಗಣರಾಜ್ಯೋತ್ಸವ ಪೆರೇಡ್‌ಗೆ ಭಾರೀ ಭದ್ರತೆ; ಕಮಿಷನರ್ ಸಿಮಂತ್ ಕುಮಾರ್ ಸಿಂಗ್ ಹೇಳಿದ್ದೇನು?

ಗಣರಾಜ್ಯೋತ್ಸವ ದಿನ ಬೆಳಗ್ಗೆ 9 ಗಂಟೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಧ್ವಜಾರೋಹಣ ನೆರವೇರಿಸಲಿದ್ದು, ಈ ಕುರಿತ ಪೂರ್ವಭಾವಿ ಪ್ರದರ್ಶನ ನಿನ್ನೆ ಆಯೋಜಿಸಲಾಗಿತ್ತು. ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಹಾಗೂ ಬೆಂಗಳೂರು ನಗರ ಪೊಲೀಸ್  ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅಂತಿಮ ಹಂತದ ಸಿದ್ಧತೆಗಳನ್ನ ಪರಿಶೀಲಿಸಿದ್ದಾರೆ.

ಇನ್ನು ಗಣರಾಜ್ಯೋತ್ಸವದ ದಿನದಂದು ಆಫ್ ಲೈನ್ ಹಾಗೂ ಆನ್ ಲೈನ್​ನಲ್ಲಿ ಪಾಸ್ ನೀಡುವ ವ್ಯವಸ್ಥೆ ಮಾಡಲಾಗಿದೆ. ಪಾಸ್ ಇದ್ದವರಿಗೆ ಮಾತ್ರ ಪರೇಡ್ ಮೈದಾನದೊಳಗೆ ಪ್ರವೇಶ ನೀಡಲಾಗುವುದು. ಹಾಗೆಯೇ ಬೆಳಗ್ಗೆ 8.30 ರಿಂದ 10.30ರವರೆಗೂ ಮಾಣಿಕ್ ಷಾ ಪರೇಡ್ ಮೈದಾನದ ಸುತ್ತಮುತ್ತ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲಾಗುತ್ತಿದೆ.

ಬಿಗಿ ಪೊಲೀಸ್ ಬಂದೋಬಸ್ತ್

ಗಣರಾಜ್ಯೋತ್ಸವ ದಿನದಂದು ಬಂದೋಬಸ್ತ್​​ಗಾಗಿ 2000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ಅಧಿಕಾರಿಗಳಿಗೆ 2000, ವಿವಿಐಪಿಗೆ 3000 ಪಾಸ್ ನೀಡಲಾಗಿದೆ. ಬೆಳಗ್ಗೆ 9 ಗಂಟೆಗೆ ರಾಜ್ಯಪಾಲರು ಧ್ವಜಾರೋಹಣ ಮಾಡಲಿದ್ದಾರೆ. 2000 ಇ–ಪಾಸ್ ವಿತರಣೆ ಮಾಡಲಾಗಿದೆ. ಹಾಗೆಯೇ ಭದ್ರತೆಗಾಗಿ 100 ಸಿಸಿಟಿವಿ, ಬ್ಯಾಗೇಜ್ ಸ್ಕ್ಯಾನರ್ 4 ಅಳವಡಿಕೆ ಮಾಡಲಾಗಿದೆ. ಅನಿಲ್‌ ಕುಂಬ್ಳೆ ವೃತ್ತದಿಂದ ಶಿವಾಜಿ ನಗರ ಬಸ್‌ ನಿಲ್ದಾಣದವರೆಗೂ ನೋ ಪಾರ್ಕಿಂಗ್ ವ್ಯವಸ್ಥೆ ಇರಲಿದೆ.

ಇದನ್ನೂ ಓದಿ: ಈ ಬಾರಿ ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಸ್ತಬ್ಧಚಿತ್ರಕ್ಕಿಲ್ಲ ಅವಕಾಶ, ಭುಗಿಲೆದ್ದ ಆಕ್ರೋಶ

ಒಟ್ಟಾರೆ 77ನೇ ಗಣರಾಜ್ಯೋತ್ಸವಕ್ಕೆ ಮಾಣಿಕ್ ಷಾ ಮೈದಾನ ಈಗಾಗಲೇ ಸಿದ್ಧತೆ ಪೂರ್ಣಗೊಂಡಿದ್ದು, ಬೆಳಗ್ಗೆ 8 ಗಂಟೆಯೊಳಗೆ ಕಾರ್ಯಕ್ರಮ ವೀಕ್ಷಣೆಗೆ ಆಗಮಿಸುವವರು ಹಾಜರಿರಬೇಕೆಂದು ಜಿಲ್ಲಾಡಳಿತ ಮನವಿ ಮಾಡಿಕೊಂಡಿದೆ. ಇನ್ನು ಧ್ವಜಾರೋಹಣದ ಬಳಿಕ ಸಾಂಸ್ಕೃತಿ ಕಾರ್ಯಕ್ರಮಗಳು ಜರುಗಲಿವೆ.

ವರದಿ: ನಟರಾಜ್ ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.