Republic Day
ಭಾರತದ ರಿಪಬ್ಲಿಕ್ ಡೇ ಅಥವಾ ಗಣತಂತ್ರ ದಿನ ಜನವರಿ 26ರಂದು ಆಚರಿಸಲಾಗುತ್ತದೆ. ಭಾರತಕ್ಕೆ 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ಘೋಷಣೆ ಆದರೂ, ಬ್ರಿಟಿಷರ ಕೊಂಡಿಯಿಂದ ಅಧಿಕೃತವಾಗಿ ಕಳಚಿಕೊಂಡಿದ್ದು 1950ರ ಜನವರಿ 26ರಂದು. ಅಂದು ಭಾರತಕ್ಕೆ ಸಂವಿಧಾನ ಅಳವಡಿಕೆ ಆಯಿತು. ಜನವರಿ 26ರ ದಿನಕ್ಕೆ ಮತ್ತೊಂದು ಮಹತ್ವ ಇದೆ. 1930ರ ವರ್ಷದ ಇದೇ ದಿನದಂದು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಸ್ವರಾಜ್ಯ ಘೋಷಣೆ ಮಾಡಿತು. ಜನವರಿ 26 ಅನ್ನು ಸ್ವರಾಜ್ಯ ದಿನವಾಗಿ ಆಚರಿಸುತ್ತಾ ಬರಲಾಗುತ್ತಿತ್ತು. ಕೊನೆಗೆ 1950ರಲ್ಲಿ ಸಂವಿಧಾನ ಅಳವಡಿಕೆಗೆ ಅದೇ ದಿನವನ್ನು ಸರ್ಕಾರ ಆಯ್ಕೆ ಮಾಡಿಕೊಂಡಿತು. ಗಣರಾಜ್ಯೋತ್ಸವ ದಿನವನ್ನು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಆಚರಿಸಲಾಗುತ್ತದೆ. ರಾಷ್ಟ್ರಪತಿ, ಪ್ರಧಾನಿ ಮತ್ತಿತರ ಗಣ್ಯರು ಉಪಸ್ಥಿತರಿರುತ್ತಾರೆ. ರಕ್ಷಣಾ ಪಡೆಗಳ ವಿವಿಧ ತಂಡಗಳು ನಡೆಸುವ ಪೆರೇಡ್ ಬಹಳ ಅಮೋಘವಾಗಿರುತ್ತದೆ. ವಿವಿಧ ರಾಜ್ಯಗಳ ಸ್ತಬ್ಧ ಚಿತ್ರಗಳ ಮೆರವಣಿಗೆಯೂ ನಡೆಯುತ್ತದೆ. ಇದೇ ಗಣತಂತ್ರ ದಿನದಂದು ರಾಷ್ಟ್ರಪತಿಗಳು ವಿವಿಧ ಪದ್ಮ ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಾರೆ.