ಗದಗ: ಚಿನ್ನದ ನಿಧಿ ಒಪ್ಪಿಸಿದ ಲಕ್ಕುಂಡಿಯ ಕುಟುಂಬಕ್ಕೆ ಗಣರಾಜ್ಯೋತ್ಸವ ದಿನ ಭರ್ಜರಿ ಉಡುಗೊರೆ ನೀಡಿದ ಸರ್ಕಾರ
ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಮನೆ ಪಾಯ ಅಗೆಯುವಾಗ ಚಿನ್ನದ ನಿಧಿ ಪತ್ತೆಹಚ್ಚಿದ ಪ್ರಜ್ವಲ್ ರಿತ್ತಿ ಕುಟುಂಬಕ್ಕೆ ರಾಜ್ಯ ಸರ್ಕಾರ ಗಣರಾಜ್ಯೋತ್ಸವದ ದಿನ ಬಂಪರ್ ಉಡುಗೊರೆ ಘೋಷಿಸಿದೆ. ಪ್ರಾಮಾಣಿಕವಾಗಿ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ್ದಕ್ಕೆ ಗೌರವಿಸಿ, 30x40 ನಿವೇಶನ, 5 ಲಕ್ಷ ರೂ. ನಗದು, ಹಾಗೂ ತಾಯಿಗೆ ಸರ್ಕಾರಿ ಕೆಲಸ ನೀಡಲಾಗಿದೆ. ಸಚಿವ ಎಚ್.ಕೆ. ಪಾಟೀಲ್ ಈ ಘೋಷಣೆ ಮಾಡಿದರು.

ಗದಗ, ಜನವರಿ 26: ಗದಗ (Gadag) ಜಿಲ್ಲೆಯ ಲಕ್ಕುಂಡಿಯಲ್ಲಿ ಮನೆ ಪಾಯ ಅಗೆಯುವ ವೇಳೆ ಚಿನ್ನದ ನಿಧಿ ಪತ್ತೆಹಚ್ಚಿ ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿದ ಪ್ರಜ್ವಲ್ ರಿತ್ತಿ ಕುಟುಂಬಕ್ಕೆ ಗಣರಾಜ್ಯೋತ್ಸವದ ದಿನವೇ ರಾಜ್ಯ ಸರ್ಕಾರ ಬಂಪರ್ ಉಡುಗೊರೆ ಘೋಷಿಸಿದೆ. ಗದಗ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣದ ಬಳಿಕ ಸಚಿವ ಎಚ್ಕೆ ಪಾಟೀಲ್ ಈ ಮಹತ್ವದ ಘೋಷಣೆ ಮಾಡಿದ್ದಾರೆ.
ಪ್ರಜ್ವಲ್ ರಿತ್ತಿ ಕುಟುಂಬಕ್ಕೆ 30×40 ಅಳತೆಯ ನಿವೇಶನ, ಮನೆ ನಿರ್ಮಾಣಕ್ಕಾಗಿ 5 ಲಕ್ಷ ರೂ. ನಗದು ಸಹಾಯ ಹಾಗೂ ಪ್ರಜ್ವಲ್ ಅವರ ತಾಯಿ ಕಸ್ತೂರೆವ್ವ ರಿತ್ತಿಗೆ ಹೊರಗುತ್ತಿಗೆ ಆಧಾರದ ಸರ್ಕಾರಿ ಕೆಲಸ ನೀಡಲಾಗುತ್ತದೆ ಎಂದು ಸಚಿವರು ಘೋಷಣೆ ಮಾಡಿದರು. ಈ ವೇಳೆ ಬಾಲಕ ಪ್ರಜ್ವಲ್ ರಿತ್ತಿ ಮತ್ತು ಅವರ ತಾಯಿ ಕಸ್ತೂರೆವ್ವ ಅವರನ್ನು ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸಚಿವ ಪಾಟೀಲ್ ಅವರು ಕುಟುಂಬಕ್ಕೆ ನಿವೇಶನ ಪ್ರಮಾಣ ಪತ್ರ ಹಾಗೂ ಕಸ್ತೂರೆವ್ವ ಅವರಿಗೆ ಉದ್ಯೋಗದ ಆದೇಶ ಪತ್ರವನ್ನು ವಿತರಿಸಿದರು. ಸರ್ಕಾರದ ಈ ನಡೆ ಪ್ರಾಮಾಣಿಕತೆಗೆ ಸಿಕ್ಕ ಗೌರವ ಎಂದು ಸ್ಥಳೀಯರು ಪ್ರಶಂಸಿಸಿದ್ದಾರೆ.
ಜನವರಿ 10ರಂದು ಲಕ್ಕುಂಡಿಯಲ್ಲಿ ಪ್ರಜ್ವಲ್ ರಿತ್ತಿ ಕುಟುಂಬ ಮನೆ ನಿರ್ಮಾಣಕ್ಕಾಗಿ ಪಾಯ ಅಗೆಯುವ ವೇಳೆ 466 ಗ್ರಾಂ ತೂಕದ ಪುರಾತನ ಚಿನ್ನದ ಆಭರಣಗಳ ತಂಬಿಗೆ ಪತ್ತೆಯಾಗಿತ್ತು. ಚಿನ್ನ ನಿಧಿ ರೂಪದಲ್ಲಿ ಸಿಕ್ಕಿದ್ದರೂ ಯಾವುದೇ ಲಾಲಸೆಗೆ ಒಳಗಾಗದೆ ಕುಟುಂಬವು ಅದನ್ನು ಸರ್ಕಾರಕ್ಕೆ ಹಸ್ತಾಂತರಿಸಿದ್ದು ರಾಜ್ಯಾದ್ಯಂತ ಮೆಚ್ಚುಗೆಗೆ ಪಾತ್ರವಾಗಿತ್ತು.
ಲಕ್ಕುಂಡಿ ಗದಗ ಜಿಲ್ಲೆಯ ಐತಿಹಾಸಿಕ ಗ್ರಾಮವಾಗಿದ್ದು, ಚಾಲುಕ್ಯರ ಕಾಲದ ದೇವಾಲಯಗಳು, ಕೆರೆಗಳು ಹಾಗೂ ಪುರಾತತ್ವ ಮಹತ್ವದ ಸ್ಮಾರಕಗಳಿಗೆ ಹೆಸರುವಾಸಿಯಾಗಿದೆ. ಈ ಪ್ರದೇಶದಲ್ಲಿ ಹಿಂದೆಯೂ ಅನೇಕ ಬಾರಿ ಪುರಾತನ ವಸ್ತುಗಳು ಮತ್ತು ಅವಶೇಷಗಳು ಪತ್ತೆಯಾಗಿರುವ ದಾಖಲೆಗಳಿವೆ. ಪುರಾತತ್ವ ತಜ್ಞರ ಪ್ರಕಾರ, ಲಕ್ಕುಂಡಿ ಮಧ್ಯಯುಗೀನ ಕಾಲದಲ್ಲಿ ಪ್ರಮುಖ ವಾಣಿಜ್ಯ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿದ್ದ ಕಾರಣ ಇಲ್ಲಿ ಚಿನ್ನ, ನಾಣ್ಯಗಳು ಮತ್ತು ಆಭರಣಗಳನ್ನು ನೆಲದಲ್ಲಿ ಸಂಗ್ರಹಿಸುವ ಪದ್ಧತಿ ಇದ್ದಿರಬಹುದೆಂದು ಅಂದಾಜಿಸಲಾಗಿದೆ. ಪ್ರಜ್ವಲ್ ರಿತ್ತಿ ಕುಟುಂಬ ಪತ್ತೆಹಚ್ಚಿದ ಚಿನ್ನದ ನಿಧಿಯೂ ಈ ಐತಿಹಾಸಿಕ ಹಿನ್ನೆಲೆಗೆ ಸಾಕ್ಷಿಯಾಗಿದೆ.
ಇದನ್ನೂ ಓದಿ: ಲಕ್ಕುಂಡಿ ಸಂಪತ್ತು ಕಾಯ್ತಾ ಇದೆಯಾ ಘಟಸರ್ಪ? ಬೃಹತ್ ಘಟಸರ್ಪ ಮೂರ್ತಿ ಪತ್ತೆ!
ಒಟ್ಟಿನಲ್ಲಿ, ರಿತ್ತಿ ಕುಟುಂಬಕ್ಕೆ ಚಿನ್ನದ ನಿಧಿ ಸಿಕ್ಕ ಬಳಿಕ ಲಕ್ಕುಂಡಿಯಲ್ಲಿ ಆರಂಭವಾದ ಉತ್ಖನನ ಕಾರ್ಯ ಅನೇಕ ರಹಸ್ಯಗಳನ್ನು ಬಯಲಿಗೆಳೆಯುತ್ತಿದೆ.