Bengaluru Airport: ಜುಲೈನಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಲಿಕಾಪ್ಟರ್​​ನಲ್ಲೂ ಪ್ರಯಾಣಿಸಬಹುದು!

| Updated By: ಸುಷ್ಮಾ ಚಕ್ರೆ

Updated on: May 13, 2022 | 5:12 PM

ಇನ್ನುಮುಂದೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಲು ಬಸ್, ಟ್ಯಾಕ್ಸಿ, ಕ್ಯಾಬ್ ಮಾತ್ರವಲ್ಲದೆ ಹೆಲಿಕಾಪ್ಟರ್ ಮೂಲಕವೂ ಹೋಗಬಹುದು. ಈ ಹೆಲಿಕಾಪ್ಟರ್​ ಪ್ರಯಾಣಕ್ಕೆ ಒಂದು ಸೈಡ್​ಗೆ 4,000 ರೂ. ದರವನ್ನು ನಿಗದಿ ಮಾಡಲಾಗಿದೆ.

Bengaluru Airport: ಜುಲೈನಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಲಿಕಾಪ್ಟರ್​​ನಲ್ಲೂ ಪ್ರಯಾಣಿಸಬಹುದು!
ಬೆಂಗಳೂರು ಹೆಲಿಕಾಪ್ಟರ್​ ರೈಡ್
Follow us on

ಬೆಂಗಳೂರು: ಇನ್ನುಮುಂದೆ ಬೆಂಗಳೂರಿನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Kempegowda International Airport) ಪ್ರಯಾಣಿಸಲು ಹೆಚ್ಚು ಸಮಯ ಬೇಕಾಗಿಲ್ಲ. ಬೆಂಗಳೂರಿನ ಟ್ರಾಫಿಕ್ (Bangalore Traffic) ನಡುವೆ ಏರ್​ಪೋರ್ಟ್​ ತಲುಪಲು ಏನಿಲ್ಲವೆಂದರೂ ಒಂದೂವರೆಯಿಂದ ಎರಡು ಗಂಟೆ ಬೇಕಾಗುತ್ತಿತ್ತು. ಆದರೆ ಮುಂದಿನ ಜುಲೈ ತಿಂಗಳಿನಿಂದ ಈ ಅವಧಿ ಕಡಿಮೆಯಾಗಲಿದೆ. ಹೇಗೆ ಅಂತೀರಾ? ಇನ್ನುಮುಂದೆ ಬೆಂಗಳೂರಿನ ಏರ್​ಪೋರ್ಟ್​ಗೆ ಹೋಗುವವರು ಹೆಲಿಕಾಪ್ಟರ್​ ಮೂಲಕ ಹೋಗಬಹುದು. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ನಿಂದ ಎಲೆಕ್ಟ್ರಾನಿಕ್ಸ್ ಸಿಟಿ ಮತ್ತು ಹಳೆ ಎಚ್‌ಎಎಲ್ ಏರ್‌ಪೋರ್ಟ್‌ಗೆ ಬೆಳಗ್ಗೆ ಮತ್ತು ಸಂಜೆ ಎರಡು ಬಾರಿ ಹೆಲಿಪೋರ್ಟ್‌ನ ಸೇವೆ ಒದಗಿಸಲು ಬ್ಲೇಡ್ ಇಂಡಿಯಾ ನಿರ್ಧರಿಸಿದೆ. ಈ ಹೆಲಿಕಾಪ್ಟರ್​ ಪ್ರಯಾಣಕ್ಕೆ ಒಂದು ಸೈಡ್​ಗೆ 4,000 ರೂ. ದರವನ್ನು ನಿಗದಿ ಮಾಡಲಾಗಿದೆ ಎಂದು ಬ್ಲೇಡ್ ಇಂಡಿಯಾ ಕಂಪನಿಯ ವಾಣಿಜ್ಯ ನಿರ್ದೇಶಕ ಪಾಯಲ್ ಸತೀಶ್ ಹೇಳಿದ್ದಾರೆ.

ಸುಮಾರು ಮೂರೂವರೆ ವರ್ಷಗಳ ಹಿಂದೆ ಥಂಬಿ ಏವಿಯೇಷನ್ ಈ ಸೇವೆಯನ್ನು ನಿಲ್ಲಿಸಿದಾಗ ಬೆಂಗಳೂರು ವಿಮಾನ ನಿಲ್ದಾಣದೊಂದಿಗೆ ಹೆಲಿಕಾಪ್ಟರ್​ ಸಂಪರ್ಕವನ್ನು ಕಳೆದುಕೊಂಡಿತ್ತು. ಆ ಹೆಲಿಕಾಪ್ಟರ್ ಸೇವೆ ಒದಗಿಸುವುದಕ್ಕೆ ಹಲವಾರು ರೀತಿಯ ಸಮಸ್ಯೆಗಳು ಎದುರಾಗಿದ್ದವು. ವಿಮಾನಗಳ ಹಾರಾಟದಿಂದಾಗಿ ಹೆಲಿಕಾಪ್ಟರ್​ ಸಂಚಾರ ಮತ್ತು ನಿರ್ವಹಣೆಗೆ ಅಗತ್ಯವಾದ ಪ್ರೋತ್ಸಾಹದ ಕೊರತೆ ಉಂಟಾಗಿತ್ತು. ಈ ಚಾಪರ್ ಸಂಚಾರಕ್ಕಾಗಿ ದೀರ್ಘಕಾಲದವರೆಗೂ ಕಾಯಬೇಕಾದ ಪರಿಸ್ಥಿತಿಯಿತ್ತು ಎಂದು ಟೈಮ್ಸ್​ ಆಫ್ ಇಂಡಿಯಾ ವರದಿ ಮಾಡಿದೆ.

ಬ್ಲೇಡ್ ಇಂಡಿಯಾ ಸಂಸ್ಥೆಯು ಪ್ರಸ್ತುತ ನಾಲ್ಕು ಚಾಪರ್‌ಗಳನ್ನು ಬಳಸುತ್ತಿದೆ. ಇದು ಮುಂಬೈ ಮತ್ತು ಪುಣೆ, ಅಂಬಿ ವ್ಯಾಲಿ, ಶಿಲ್ಲಿಮ್ ಮತ್ತು ಶಿರಡಿ ನಡುವೆ ಸಂಚಾರ ಮಾಡಲಿದೆ. ಬ್ಲೇಡ್ ಇಂಡಿಯಾ ಕಂಪನಿಯ ಅಮೆರಿಕಾದ ಪಾಲುದಾರ, ಬ್ಲೇಡ್ ಯುಎಸ್​, ಡೌನ್‌ಟೌನ್ ಮ್ಯಾನ್‌ಹ್ಯಾಟನ್ ಮತ್ತು ಜೆಎಫ್​ಕೆ ಏರ್‌ಪೋರ್ಟ್ ನಡುವೆ ಬ್ಲೇಡ್ ಇಂಡಿಯಾ ಏರ್‌ಪೋರ್ಟ್ ಹೆಲಿಕಾಪ್ಟರ್ ಸೇವೆಯನ್ನು ಕೆಲವು ವರ್ಷಗಳಿಂದ ನಿರ್ವಹಿಸುತ್ತಿದೆ.

ಇದರ ಜೊತೆಗೆ ವಾರದಲ್ಲಿ 6 ಬಾರಿ ಬೆಂಗಳೂರಿನ ಜಕ್ಕೂರು ಏರೋಡ್ರೋಮ್​ನಿಂದ ಕೊಡಗು ಅಥವಾ ಕಬಿನಿಗೆ ಹೆಲಿಕಾಪ್ಟರ್ ಟ್ರಿಪ್ ಆಯೋಜಿಸುತ್ತಿದ್ದೇವೆ. ಬೆಂಗಳೂರಿನಿಂದ ಕೊಡಗಿಗೆ ಹೆಲಿಕಾಪ್ಟರ್​ನಲ್ಲಿ ಸಂಚರಿಸಲು ಒಂದು ಸೈಡ್​ಗೆ 16,000 ರೂ. ತಗುಲುತ್ತದೆ. ಇದೀಗ ನಾವು ಪ್ರಸ್ತಾಪಿಸಿರುವ ಬ್ಲೇಡ್ ಏರ್​ಪೋರ್ಟ್​ ಶಟಲ್​ ವಾರದಲ್ಲಿ 5 ದಿನ ಅಂದರೆ ಸೋಮವಾರದಿಂದ ಶುಕ್ರವಾರದವರೆಗೆ ಕಾರ್ಯ ನಿರ್ವಹಿಸಲಿದೆ. ಈ ಟ್ರಿಪ್​ ಜೊತೆಗೆ ನಾವು ಮೈಸೂರು ಟ್ರಿಪ್ ಅನ್ನು ಕೂಡ ನಾವು ಸೇರಿಸುತ್ತಿದ್ದೇವೆ. ಇದಕ್ಕೆ 12,000 ರೂ. ತಗುಲುತ್ತದೆ ಎಂದು ಪಾಯಲ್ ಸತೀಶ್ ಹೇಳಿದ್ದಾರೆ.

ಇನ್ನಷ್ಟು ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ