
ಬೆಂಗಳೂರು, ನವೆಂಬರ್ 29: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (Bangalore Airport) ಪ್ರಯಾಣಿಸುವ ಪ್ರಯಾಣಿಕರಿಗೆ ವಿಮಾನಯಾನ ಸಂಸ್ಥೆಗಳು ಪ್ರಮುಖ ಸೂಚನೆ ನೀಡಿವೆ. ಏರ್ಬಸ್ ಸಂಸ್ಥೆಯು ತನ್ನ A320 ವಿಮಾನಗಳಿಗೆ ಜಾಗತಿಕ ಮಟ್ಟದಲ್ಲಿ ಸುರಕ್ಷತಾ ಸಂಬಂಧಿತ ಸಾಫ್ಟ್‌ವೇರ್ ಅಪ್‌ಗ್ರೇಡ್ ಮಾಡುವಂತೆ ಸೂಚಿಸಿರುವ ಕಾರಣ ಆ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಹೀಗಾಗಿ A320 ವಿಮಾನಗಳ ಸಂಚಾರದ ವೇಳಾಪಟ್ಟಿಯಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇದೆ. ಪ್ರಯಾಣಿಕರು ವಿಳಂಬ ಅಥವಾ ವೇಳಾಪಟ್ಟಿ ಪರಿಷ್ಕರಣೆಗಳನ್ನು ಎದುರಿಸಬೇಕಾದ ಸಂದರ್ಭ ಬರಬಹುದು ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಡಳಿತ ಎಕ್ಸ್ ಮೂಲಕ ಮಾಹಿತಿ ನೀಡಿದೆ.
ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ತೆರಳುವ ಮುನ್ನ ಟಿಕೆಟ್ ಕಾಯ್ದಿರಿಸಿದ ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸಿ ಕಡ್ಡಾಯವಾಗಿ ಪರಿಶೀಲಿಸುಕೊಳ್ಳುವಂತೆ ವಿಮಾನ ನಿಲ್ದಾಣ ಆಡಳಿತ ಮನವಿ ಮಾಡಿವೆ. ಪ್ರಯಾಣ ಸಂಬಂಧಿತ ಯಾವುದೇ ತೊಂದರೆಗಳನ್ನು ತಪ್ಪಿಸಲು ಪ್ರಯಾಣದ ಮುನ್ನ ವಿಮಾನಗಳ ಸಂಚಾರದ ಸ್ಥಿತಿ ಮತ್ತು ವೇಳಾಪಟ್ಟಿಯನ್ನು ದೃಢಪಡಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ.
‘ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಿಂದ ಪ್ರಯಾಣಿಕರಿಗೆ ಸಲಹೆ; ಹೆಚ್ಚಿನ ಮಾಹಿತಿಗಾಗಿ, ತಾವು ಪ್ರಯಾಣ ಮಾಡಲಿರುವ ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸುವಂತೆ ಕೋರುತ್ತೇವೆ. ನಿಮ್ಮ ಪ್ರಯಾಣ ಸುಖಕರವಾಗಿರಲಿ’ ಎಂದು ಎಕ್ಸ್ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಿಂದ ಪ್ರಯಾಣಿಕರಿಗೆ ಸಲಹೆ:
ಹೆಚ್ಚಿನ ಮಾಹಿತಿಗಾಗಿ, ತಾವು ಪ್ರಯಾಣ ಮಾಡಲಿರುವ ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸುವಂತೆ ಕೋರುತ್ತೇವೆ.
ನಿಮ್ಮ ಪ್ರಯಾಣ ಸುಖಕರವಾಗಿರಲಿ!#ಪ್ರಯಾಣಸಲಹೆ#ಕೆಂಪೇಗೌಡಅಂತಾರಾಷ್ಟ್ರೀಯವಿಮಾನನಿಲ್ದಾಣಬೆಂಗಳೂರು #ಬೆಂಗಳೂರುವಿಮಾನನಿಲ್ದಾಣ #ವಿಮಾನ pic.twitter.com/Khnd1Ape6F
— ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು (@blrairport_kn) November 29, 2025
ಪ್ರಸ್ತುತ ಸಾಫ್ಟ್‌ವೇರ್ ಅಪ್‌ಗ್ರೇಡ್ ಕಾರ್ಯಗಳ ಹಿನ್ನೆಲೆ, ವಿಮಾನ ನಿಲ್ದಾಣದಲ್ಲಿ ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಪ್ರಯಾಣಿಕರಿಗೆ ಸಹಾಯ ಮಾಡಲು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದೂ ವಿಮಾನ ನಿಲ್ದಾಣ ಆಡಳಿತ ತಿಳಿಸಿದೆ.
A320 ವಿಮಾನಗಳ ಸಾಫ್ಟ್‌ವೇರ್ ಅಪ್‌ಗ್ರೇಡ್ ಪ್ರಕ್ರಿಯೆಯ ಕಾರಣ ದೇಶದಾದ್ಯಂತ ಇಂಡಿಗೋ, ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳ ಹಾರಾಟದ ಸಮಯದಲ್ಲಿ ವ್ಯತ್ಯವಾಗಲಿದೆ. ಈ ಬಗ್ಗೆ ಈ ವಿಮಾನಯಾನ ಸಂಸ್ಥೆಗಳು ಈಗಾಗಲೇ ಪ್ರಕಟಣೆ ಹೊರಡಿಸಿವೆ.
ಇದನ್ನೂ ಓದಿ: ಮಂಜು ಮುಸುಕಿದ ವಾತಾವರಣ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ 81 ವಿಮಾನಗಳ ಸಂಚಾರದಲ್ಲಿ ವ್ಯತ್ಯಯ
ಭಾರತದ ವಿಮಾನಯಾನ ಸಂಸ್ಥೆಗಳು ಸುಮಾರು 560 ರಷ್ಟು A320 ಮಾಡೆಲ್ ವಿಮಾನಗಳನ್ನು ಹೊಂದಿದ್ದು, ಅವುಗಳಲ್ಲಿ 200-250 ವಿಮಾನಗಳಿಗೆ ಸಾಫ್ಟ್‌ವೇರ್ ಅಪ್‌ಗ್ರೇಡ್ ಅಗತ್ಯವಿದೆ ಎಂದು ವರದಿಯಾಗಿದೆ. ದೇಶದಲ್ಲಿ ಒಟ್ಟಾರೆಯಾಗಿ 200-250 ವಿಮಾನಗಳ ವೇಳಾಪಟ್ಟಿಯ ಮೇಲೆ ಸಾಫ್ಟ್‌ವೇರ್ ಅಪ್‌ಗ್ರೇಡ್ ಪ್ರಕ್ರಿಯೆ ಪರಿಣಾಮ ಬೀರಲಿದೆ ಎಂದು ಮೂಲಗಳು ತಿಳಿಸಿವೆ.