ಬೆಂಗಳೂರಿನಲ್ಲಿ ನಾಳೆ ಹೆಚ್ಚುವರಿ ಬಸ್​ಗಳ ಸಂಚಾರ, ಶಾಲಾ ಕಾಲೇಜುಗಳ ಕತೆ ಏನು? ರಾಮಲಿಂಗಾರೆಡ್ಡಿ ಹೇಳುವುದೇನು?

| Updated By: Rakesh Nayak Manchi

Updated on: Sep 10, 2023 | 8:40 PM

ಶಕ್ತಿ ಯೋಜನೆ ಹಿಂಪಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಾಳೆ (ಸೆ.11) ಬೆಂಗಳೂರಿನಲ್ಲಿ ಖಾಸಗಿ ಸಾರಿಗೆ ಒಕ್ಕೂಟಗಳು ಮುಷ್ಕರ ನಡೆಸಲಿವೆ. ಇದರಿಂದಾಗಿ ನಗರವಾಸಿಗಳಿಗೆ ಸಮಸ್ಯೆ ಎದುರಾಗಲಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಹೆಚ್ಚುವರಿ ಬಸ್​ಗಳು ರಸ್ತೆಗೆ ಇಳಿಯುವುದರಿಂದ ಸಮಸ್ಯೆಯಾಗಲ್ಲ ಎಂದಿದ್ದಾರೆ.

ಬೆಂಗಳೂರಿನಲ್ಲಿ ನಾಳೆ ಹೆಚ್ಚುವರಿ ಬಸ್​ಗಳ ಸಂಚಾರ, ಶಾಲಾ ಕಾಲೇಜುಗಳ ಕತೆ ಏನು? ರಾಮಲಿಂಗಾರೆಡ್ಡಿ ಹೇಳುವುದೇನು?
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
Follow us on

ಬೆಂಗಳೂರು, ಸೆ.10: ಶಕ್ತಿ ಯೋಜನೆ ಹಿಂಪಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಾಳೆ (ಸೆ.11) ಬೆಂಗಳೂರಿನಲ್ಲಿ (Bengaluru) ಖಾಸಗಿ ಸಾರಿಗೆ ಒಕ್ಕೂಟಗಳು ಮುಷ್ಕರ ನಡೆಸಲಿವೆ. ಇದರಿಂದಾಗಿ ನಗರವಾಸಿಗಳಿಗೆ ಸಮಸ್ಯೆ ಎದುರಾಗಲಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy), ಹೆಚ್ಚುವರಿ ಬಸ್​ಗಳು ರಸ್ತೆಗೆ ಇಳಿಯುವುದರಿಂದ ಸಮಸ್ಯೆಯಾಗಲ್ಲ ಎಂದಿದ್ದಾರೆ.

ಮುಷ್ಕರ ಹಿನ್ನೆಲೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಮಲಿಂಗಾರೆಡ್ಡಿ, ಸಾರಿಗೆ ಸಂಘಟನೆಗಳ ಜೊತೆ ಈ ಹಿಂದೆಯೂ ಮಾತನಾಡಿದ್ದೆವು. ಸಿಎಂ ಸಿದ್ದರಾಮಯ್ಯ ತ್ತು ನಾನು ಕೂಡ ಎರಡು ಬಾರಿ ಸಭೆ ನಡೆಸಿದ್ದೆವು. ಆದರೆ ಸಭೆಗೆ ಹಾಜರಾಗದ ಕೆಲವು ಸಂಘಟನೆಗಳು ಬಂದ್​ಗೆ ಕರೆ ನೀಡಿವೆ. ಅವರು ಎಷ್ಟು ಸಂಘ ಆದರೂ ಇಟ್ಟುಕೊಳ್ಳಲಿ. ಮುಷ್ಕರ ಮಾಡೆ ಮಾಡುತ್ತೇವೆ ಅನ್ನೋರ ಬಗ್ಗೆ ಏನು ಹೇಳಲಿ ಎಂದರು.

ಬೆಂಗಳೂರಿನಲ್ಲಿ ನಾಳೆ ಹೆಚ್ಚುವರಿ ನಾಲ್ಕು ಸಾವಿರ ಬಸ್​ಗಳು ರಸ್ತೆಗೆ ಇಳಿಯಲಿವೆ. ಈ ಬಗ್ಗೆ ಬಿಎಂಟಿಸಿ, ಕೆಎಸ್​ಆರ್​ಟಿಸಿ ಎಂಡಿಗಳ ಜೊತೆ ಮಾತನಾಡಿದ್ದೇನೆ. ವಿಮಾನ ನಿಲ್ದಾಣ, ಆಸ್ಪತ್ರೆಗಳ ಬಳಿ ಹೆಚ್ಚಿನ ಟ್ರಿಪ್​ಗೆ ಸೂಚಿಸಿದ್ದೇವೆ. ಶಾಲಾ ಕಾಲೇಜು, ಕಚೇರಿಗೆ ತೆರಳುವವರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಸಾರಿಗೆ ಸಚಿವರು ತಿಳಿಸಿದರು.

ಇದನ್ನೂ ಓದಿ: ನಾಳೆ ಸಂಪೂರ್ಣ ಸ್ತಬ್ಧವಾಗುತ್ತಾ ಬೆಂಗಳೂರು? ಏನಿರುತ್ತೆ? ಏನಿರಲ್ಲ?

ಖಾಸಗಿ ಸಾರಿಗೆ ಒಕ್ಕೂಟದ ಬೇಡಿಕೆ ಈಡೇರಿಕೆ ಬಗ್ಗೆ ಗಮನಿಸುತ್ತೇವೆ. 2016 ರಿಂದ ಱಪಿಡೋ ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ನಡೆಸುತ್ತಿದೆ. ಶಕ್ತಿ ಯೋಜನೆ ಜಾರಿಯಾದ ನಂತರ ಹೆಚ್ಚಿನ ಸಮಸ್ಯೆಯಾಗಿಲ್ಲ. ಹಾಗಾಗಿ ಖಾಸಗಿ ಸಾರಿಗೆ ಒಕ್ಕೂಟದ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ. ನಮ್ಮ ಸರ್ಕಾರ ಬಂದ ಮೇಲೆ ವಾಹನ ತೆರಿಗೆ ಹೆಚ್ಚಳ ಮಾಡಿಲ್ಲ. ಕಳೆದ 4-5 ವರ್ಷಗಳಿಂದ ತೆರಿಗೆ ಹೆಚ್ಚಳ ವಿಚಾರ ಚರ್ಚೆಯಲ್ಲಿತ್ತು. ನಮ್ಮ ಸರ್ಕಾರ ಬಂದ ಬಳಿಕ ತೆರಿಗೆ ಹೆಚ್ಚಳ ಆದೇಶ ಜಾರಿಗೆ ಬಂದಿದೆ ಎಂದರು.

ಖಾಸಗಿ ವಾಹನ ಚಾಲಕರ ಇತರೆ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನ ಮಾಡುತ್ತಿದ್ದೇನೆ. ನಮ್ಮ ಸರ್ಕಾರ ಬಂದ ಮೇಲೆ ಪ್ರಮುಖವಾಗಿ ಎರಡು ಸಮಸ್ಯೆಯಾಗಿದೆ. ಒಂದು ಶಕ್ತಿ ಯೋಜನೆ ಪರಿಣಾಮ ಹಾಗೂ ಇನ್ನೊಂದು ಲೈಫ್ ಟೈಮ್ ಟ್ಯಾಕ್ಸ್ ಎಂದರು.

ನಾಳೆ ಯಾವುದೇ ಶಾಲಾ ಕಾಲೇಜಿಗೆ ರಜೆ ಇಲ್ಲ

ಬೆಂಗಳೂರಿನಲ್ಲಿ ನಾಳೆ ಯಾವುದೇ ಶಾಲಾ ಕಾಲೇಜಿಗೆ ರಜೆ ಇಲ್ಲ ಎಂದು ಸ್ಪಷ್ಟಪಡಿಸಿದ ರಾಮಲಿಂಗಾರೆಡ್ಡಿ, ಖಾಸಗಿ ಸಾರಿಗೆ ಬಂದ್​ಗೆ ಕರೆ ನೀಡಿರುವವರು ಕಾನೂನು ಪಾಲಿಸಲಿ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಅವರು ಪ್ರತಿಭಟನೆ ನಡೆಸಲಿ. ಪ್ರತಿಭಟನೆ ಮಾಡುವವರಿಗೂ ಸರ್ಕಾರದಿಂದ ರಕ್ಷಣೆ ನೀಡುತ್ತೇವೆ ಎಂದರು.

ಖಾಸಗಿ ಸಾರಿಗೆ ಒಕ್ಕೂಟಗಳ ಬೇಡಿಕೆ ಅನುಸಾರ ಅನುಪಾಲನಾ ವರದಿ ಸಹ ಮಾಡಿದ್ದೇವೆ. ಅವರ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಐದು ಸಾವಿರ ಕೋಟಿ ಹೆಚ್ಚುವರಿ ಹಣ ಬೇಕಾಗುತ್ತದೆ. ಅವರಿಗೆ ಸಮಸ್ಯೆ ಆಗುತ್ತೆ ಅಂತ ತೆರಿಗೆ ಹೆಚ್ಚಳ ಕ್ರಮ ಸಹ ಬಾಕಿ ಇಟ್ಟಿದ್ದೇವೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:33 pm, Sun, 10 September 23