ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದಿಂದ ನಾಳೆ ಬೆಂಗಳೂರು ಬಂದ್ಗೆ ಕರೆ: ಪರ್ಯಾಯ ಮಾರ್ಗಗಳು ಹೀಗಿವೆ
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದಿಂದ ಸೋಮವಾರ ಬಂದ್ಗೆ ಕರೆ ನೀಡಿದ್ದಾರೆ. ಹಾಗಾಗಿ ವಾಹನ ಸವಾರರು ಬದಲಿ ರಸ್ತೆ ಬಳಸುವಂತೆ ಸಂಚಾರಿ ಪೊಲೀಸರು ಸೂಚನೆ ನೀಡಿದ್ದಾರೆ. ಬೆಂಗಳೂರು ನಗರದಾದ್ಯಂತ ಅದರಲ್ಲಿಯೂ ನಗರದ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಪೊಲೀಸ್ ಭದ್ರತೆಗೆ ನಿಯೋಜನೆ ಮಾಡಲಾಗಿದೆ.
ಬೆಂಗಳೂರು, ಸೆಪ್ಟೆಂಬರ್ 10: ಸಿಎಂ ಸಿದ್ದರಾಮಯ್ಯ (Siddaramaiah) ಸರ್ಕಾರದ ಶಕ್ತಿಯೋಜನೆ ಜಾರಿಗೆ ಬಂದಾಗಿನಿಂದ ಖಾಸಗಿ ಸಾರಿಗೆ ಒಕ್ಕೂಟ ಕಿಡಿಕಾರುತ್ತ ಬಂದಿತ್ತು. ಇದೀಗ ಆಟೋ, ಕ್ಯಾಬ್, ಟ್ಯಾಕ್ಸಿ ಚಾಲಕರು ಸಿಡಿದೆದ್ದಿದ್ದು, ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೋಮವಾರ ಬಂದ್ಗೆ ಕರೆ ನೀಡಿದ್ದಾರೆ. ಇವತ್ತು ಮಧ್ಯರಾತ್ರಿಯಿಂದಲೇ ಖಾಸಗಿ ವಾಹನಗಳ ಸೇವೆ ಸ್ಥಗಿತ ಮಾಡಿ ಬಂದ್ ನಡೆಸಲು ಒಕ್ಕೂಟ ಸಜ್ಜಾಗಿದೆ. ಹಾಗಾಗಿ ವಾಹನ ಸವಾರರು ಬದಲಿ ರಸ್ತೆ ಬಳಸುವಂತೆ ಸಂಚಾರಿ ಪೊಲೀಸರು ಸೂಚನೆ ನೀಡಿದ್ದಾರೆ.
ಬದಲಿ ರಸ್ತೆಗಳು ಹೀಗಿವೆ
- ಖೋಡೆ ಸರ್ಕಲ್‌ಗೆ ಬರುವ ವಾಹನಗಳು ಆರ್.ಆರ್. ಜಂಕ್ಷನ್ ಮೂಲಕ-ಕೃಷ್ಣ ಫ್ಲೋರ್ ಮಲ್ಲೇಶ್ವರಂ ಕಡೆ ತೆರಳುವುದು.
- ಗೂಡ್ ಶೆಡ್ ರಸ್ತೆ ಕಡೆಯಿಂದ ಬರುವ ವಾಹನಗಳು, ಜಿ.ಟಿ. ರಸ್ತೆ ಮುಖಾಂತರ ಸಂಗೊಳ್ಳಿ ರಾಯಣ್ಣ ಸರ್ಕಲ್- ಓಕಳಿಪುರಂ – ಸುಜಾತ ಮೂಲಕ ತೆರಳಲು ಅವಕಾಶ
- ಆನಂದರಾವ್ ಸರ್ಕಲ್ ಕಡೆಯಿಂದ ಬರುವ ವಾಹನಗಳು, ಹಳೇ ಜೆ.ಡಿ.ಎಸ್. ರಸ್ತೆ ಹಾಗೂ ಶೇಷಾದ್ರಿಪುರಂ ರಸ್ತೆ ಕಡೆಗೆ ಹೋಗುವುದು.
- ಮೈಸೂರು ಬ್ಯಾಂಕಿನಿಂದ ಬರುವ ವಾಹನಗಳು, ಪ್ಯಾಲೆಸ್ ರಸ್ತೆ- ಮಹಾರಾಣಿ ಅಂಡರ್‌ಪಾಸ್-ಬಸವೇಶ್ವರ ಸರ್ಕಲ್ ಮುಖಾಂತರ ಸಂಚರಿಸುವುದು.
ಬೆಂಗಳೂರು ನಗರದಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್
ಬಂದ್ಗೆ ಕರೆ ಹಿನ್ನೆಲೆ ಬೆಂಗಳೂರು ನಗರದಾದ್ಯಂತ ಅದರಲ್ಲಿಯೂ ನಗರದ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಎಸಿಪಿ, ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಭದ್ರತೆ ನಿಯೋಜನೆ ಮಾಡಲಾಗಿದೆ. ಶಾಂತಿನಗರ, ಮೌರ್ಯ ಸರ್ಕಲ್, ಕೋರಮಂಗಲ, ಫ್ರೀಡಂಪಾರ್ಕ್, ಶಿವಾನಂದ ಸರ್ಕಲ್, ಕಲಾಸಿಪಾಳ್ಯ, ಪೀಣ್ಯ, ಮೈಸೂರು ರಸ್ತೆ ಸ್ಯಾಟ್ಲೈಟ್ ಬಸ್ ನಿಲ್ದಾಣ, ಹೆಬ್ಬಾಳ, ಯಲಹಂಕ, ಕೆ.ಆರ್.ಪುರಂ, ಕೆಂಗೇರಿ ಸೇರಿದಂತೆ ಬೆಂಗಳೂರು ನಗರದ ಪ್ರಮುಖ ಸ್ಥಳಗಳಲ್ಲಿ ಭದ್ರತೆ ನಿಯೋಜಿಸಲಾಗಿದೆ.
ಕಾನೂನು ಬಾಹಿರ ಕೃತ್ಯಕ್ಕೆ, ಶಾಂತಿ ಕದಡುವ ಯತ್ನ ಮಾಡಿದರೆ ಕ್ರಮ: ಪೊಲೀಸ್ ಆಯುಕ್ತ ಬಿ.ದಯಾನಂದ್
ಇನ್ ಪ್ಯಾಂಟರಿ ರಸ್ತೆಯ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸೂಕ್ತ ಭದ್ರತೆ ಕೈಗೊಳ್ಳಲಿದ್ದೇವೆ. ಕೆಎಸ್.ಆರ್.ಪಿ, ಸಿಎಆರ್ ಸೇರಿದಂತೆ ಪೊಲೀಸ್ ಭದ್ರತೆಗೆ ಕ್ರಮ ಕೈಗೊಳ್ಳಲಾಗುವುದು.
ಇದನ್ನೂ ಓದಿ: ಸೋಮವಾರ ಬೆಂಗಳೂರು ಬಂದ್, ಪ್ರಯಾಣಿಕರಿಗೆ ತೊಂದರೆಯಾಗದಂತೆ ಬಿಎಂಟಿಸಿಯಿಂದ ಹೆಚ್ಚುವರಿ ಟ್ರಿಪ್
ನಗರದಲ್ಲಿ ಯಾವುದೇ ರ‍್ಯಾಲಿಗೆ ಅವಕಾಶವಿಲ್ಲ. ಕಾನೂನು ಬಾಹಿರ ಕೃತ್ಯಕ್ಕೆ, ಶಾಂತಿ ಕದಡುವ ಯತ್ನ ಮಾಡಿದರೆ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.
ಆಟೋ ಚಾಲಕರ ಬೇಡಿಕೆಗಳು
- ಆಟೋ ಚಾಲಕರಿಗೆ 10 ಸಾವಿರ ರೂ. ಮಾಸಿಕ ಪರಿಹಾರ
- ಅಸಂಘಟಿತ ಚಾಲಕರಿಗೆ ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪನೆ
- ರಾಜ್ಯ ಸರ್ಕಾರದಿಂದಲೇ ಅಗ್ರಿಗೇಟರ್ ಆ್ಯಪ್ ಸಿದ್ಧಪಡಿಸಬೇಕು
- ಕೆಂಪೇಗೌಡ ಏರ್ಪೋರ್ಟ್ನಲ್ಲಿ ಇಂದಿರಾ ಕ್ಯಾಂಟೀನ್ ಬೇಕು
- ಎಲೆಕ್ಟ್ರಿಕ್ ಆಟೋಗಳಿಗೆ ಸಹ ರಹದಾರಿ ನೀಡಬೇಕು
ಟ್ಯಾಕ್ಸಿ ಚಾಲಕರ ಬೇಡಿಕೆಗಳು
- ಜೀವಾವಧಿ ತೆರಿಗೆ ಕಂತುಗಳಲ್ಲಿ ಪಾವತಿಸುವ ಅವಕಾಶ ಕಲ್ಪಿಸಿ
- ಟ್ಯಾಕ್ಸಿ ಚಾಲಕರಿಗೆ ವಸತಿ ಯೋಜನೆಯನ್ನು ಕಲ್ಪಿಸಬೇಕು
- ಮಕ್ಕಳಿಗೆ ವಿದ್ಯಾರ್ಥಿ ವೇತನ, ವಿದ್ಯಾಭ್ಯಾಸಕ್ಕೆ ಧನಸಹಾಯ
ಖಾಸಗಿ ಬಸ್ ಚಾಲಕರ ಬೇಡಿಕೆಗಳು
- ಖಾಸಗಿ ಬಸ್ಗಳಿಗೂ ‘ಶಕ್ತಿ’ ಯೋಜನೆಯನ್ನು ವಿಸ್ತರಿಸಬೇಕು
- ರಸ್ತೆ ತೆರಿಗೆಯನ್ನು ಸಂಪೂರ್ಣ ರದ್ದು ಮಾಡಬೇಕು
- ಕಿ.ಮೀ. ಆಧಾರದಲ್ಲಿ ಸರ್ಕಾರವೇ ಬಾಡಿಗೆಗೆ ಪಡೆಯಬೇಕು
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:30 pm, Sun, 10 September 23