ಮಂಡ್ಯದಲ್ಲಿ ಜೋಡೆತ್ತು ಅಂತಾ ಕೈ ಎತ್ತಿದ್ದ ಡಿಕೆ ಶಿವಕುಮಾರ್​ಗೆ ಟಾಂಗ್ ಕೊಟ್ಟ ಹೆಚ್​ಡಿ ಕುಮಾರಸ್ವಾಮಿ

ಕಳೆದ ಲೋಕಸಭೆ ಚುನಾವಣೆ ವೇಳೆ ಪ್ರಚಾರ ನಡೆಸುತ್ತಿದ್ದಾಗ ಡಿ.ಕೆ.ಶಿವಕುಮಾರ್ ಅವರು ಹೆಚ್​.ಡಿ. ಕುಮಾರಸ್ವಾಮಿ ಅವರ ಕೈ ಎತ್ತಿ ಹಿಡಿದು ಜೋಡೆತ್ತು ಎಂದು ಹೇಳಿದ್ದರು. ಅದನ್ನ ಈಗ ಮೆಲಕು ಹಾಕುತ್ತಾ ಡಿಕೆ ಶಿವಕುಮಾರ್​ಗೆ ಟಾಂಗ್ ಕೊಟ್ಟ ಕುಮಾರಸ್ವಾಮಿ, ನನ್ನ ಅಣ್ಣಾ ಅನ್ನುವವರು ಮಂಡ್ಯದಲ್ಲಿ ಜೋಡೆತ್ತು ಅಂತಾ ನನ್ನ ಕೈ ಹಿಡಿದು ಎತ್ತಿದ್ದರು. ಈಗ ಹೊಸದಾಗಿ ಕೈ ಎತ್ತುತ್ತಿದ್ದಾರೆ. ಸ್ವಲ್ಪ ದಿನದಲ್ಲಿ ಆ ಕೈ ಏನೇನು ಆಗುತ್ತದೆ ಅಂತಾ ನೋಡೋಣ ಎಂದರು.

ಮಂಡ್ಯದಲ್ಲಿ ಜೋಡೆತ್ತು ಅಂತಾ ಕೈ ಎತ್ತಿದ್ದ ಡಿಕೆ ಶಿವಕುಮಾರ್​ಗೆ ಟಾಂಗ್ ಕೊಟ್ಟ ಹೆಚ್​ಡಿ ಕುಮಾರಸ್ವಾಮಿ
ಹೆಚ್​ಡಿ ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್
Follow us
ಕಿರಣ್​ ಹನಿಯಡ್ಕ
| Updated By: Rakesh Nayak Manchi

Updated on: Sep 10, 2023 | 5:29 PM

ಬೆಂಗಳೂರು, ಸೆ.10: ಕಳೆದ ಲೋಕಸಭೆ ಚುನಾವಣೆ ವೇಳೆ ಪ್ರಚಾರ ನಡೆಸುತ್ತಿದ್ದಾಗ ಡಿ.ಕೆ.ಶಿವಕುಮಾರ್ (D.K.Shivakumar) ಅವರು ಹೆಚ್​.ಡಿ. ಕುಮಾರಸ್ವಾಮಿ (H.D.Kumaraswamy) ಅವರ ಕೈ ಎತ್ತಿ ಹಿಡಿದು ಜೋಡೆತ್ತು ಎಂದು ಹೇಳಿದ್ದರು. ಅದನ್ನ ಈಗ ಮೆಲಕು ಹಾಕುತ್ತಾ ಡಿಕೆ ಶಿವಕುಮಾರ್​ಗೆ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.

ನನ್ನನ್ನು ಮಾಧ್ಯಮದ ಮುಂದೆ ಅಣ್ಣಾ ಅಂತಾ ಕರೆಯುತ್ತಾರೆ, ನಾನು ತಮ್ಮ ಇದ್ದ ಹಾಗೆ ಅಂತಾರೆ. ಅಂತಹ ತಮ್ಮ ನನಗೆ ಬೇಡ ಎಂದು ನಾನು ಹೇಳಿದ್ದೇನೆ. ನನ್ನನ್ನು ಅಣ್ಣಾ ಅನ್ನುವವರು ಮಂಡ್ಯದಲ್ಲಿ ಜೋಡೆತ್ತು ಅಂತಾ ನನ್ನ ಕೈ ಹಿಡಿದು ಎತ್ತಿದರು. ನಾನು ಅದಕ್ಕೆ ಮರುಳಾಗಿ ಈಗ ಬದಲಾಗಿರಬೇಕು ಅಂತಾ ಕೈ ಎತ್ತಿದೆ. ನನ್ನ ಎತ್ತಿನಗಾಡಿ ಸಮೇತ ರಸ್ತೆಯಲ್ಲಿ ನಿಲ್ಲಿಸಿ ಕೈ ಅಲ್ಲೇ ಇಟ್ಟುಕೋ ಅಂತಾ ಹೋದರು. ಈಗ ಹೊಸದಾಗಿ ಕೈ ಎತ್ತುತ್ತಿದ್ದಾರೆ. ಸ್ವಲ್ಪ ದಿನದಲ್ಲಿ ಆ ಕೈ ಏನೇನು ಆಗುತ್ತದೆ ಅಂತಾ ನೋಡೋಣ ಎಂದು ಕುಮಾರಸ್ವಾಮಿ ಹೇಳಿದರು.

ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಯಾರ ಮನೆ ಬಾಗಿಲಿಗೆ ಹೋಗಲಿಲ್ಲ. 2006 ರಲ್ಲಿ ಬಿಜೆಪಿ ಜೊತೆ ಕೈ ಜೋಡಿಸಿದ್ದು ಪಕ್ಷ ಉಳಿಸಲು. ಸಿದ್ದರಾಮಯ್ಯನವರೇ ನಾನು ಯಾವತ್ತೂ ನಾಡಿನ ಖಜಾನೆಗೆ ದರಿದ್ರ ಬರಲು ಬಿಟ್ಟಿರಲಿಲ್ಲ. ಮೈತ್ರಿ ಸರ್ಕಾರದಲ್ಲಿ ನನ್ನ ಇತಿಮಿತಿಯಲ್ಲಿ ಇಟ್ಟಿದ್ದಿರಿ. ನನ್ನ ಯಾವುದೇ ವೈಯಕ್ತಿಕ ತೀರ್ಮಾನ ಮಾಡಲು ಬಿಟ್ಟಿರಲಿಲ್ಲ ಎಂದರು.

ಇದನ್ನೂ ಓದಿ: ವಿಶೇಷ ಪೂಜೆ ವೇಳೆಯೇ ಕುಮಾರಸ್ವಾಮಿ ಕರೆ ಮಾಡಿ ಶುಭ ಸುದ್ದಿ ನೀಡಿದ್ದಾರೆ: ಸಂಚಲನ ಮೂಡಿಸಿದ ಈಶ್ವರಪ್ಪ ಹೇಳಿಕೆ

ನೈಸ್ ವಿಚಾರದಲ್ಲಿ ಅಂದು ಹೊಸದಾಗಿ ಕ್ಯಾಬಿನೆಟ್ ಮುಂದೆ ನಿರ್ಧಾರ ಮಾಡುವ ಬಗ್ಗೆ ಮಿತ್ರ ಪಕ್ಷ ಬಿಜೆಪಿ ಸಹಕಾರ ಕೊಡಲಿಲ್ಲ. ಬಿಜೆಪಿ ಮಿತ್ರರು ಈಗ ಅನ್ಯಥಾ ಭಾವಿಸುವುದು ಬೇಡ. ನಾಡಿನ ಸಂಪತ್ತು ಉಳಿಸಲು ಇಂದು ನಾವು ಒಂದಾಗಬೇಕಾಗಿದೆ.

ಸಿದ್ದರಾಮಯ್ಯನವರೇ ನೈಸ್ ಕಂಪನಿ ವಿಷಯದಲ್ಲಿ ನಮ್ಮ ಬಗ್ಗೆ ಕೈ ತೋರಿಸಬೇಡಿ. ನನಗೆ ಜನ ಧಮ್ ತಾಕತ್ ಕೊಟ್ಟಿರುತ್ತಿದ್ದರೆ ಆ ಕಂಪನಿಯ ಮಾಲೀಕರನ್ನು ಒಳಗೆ ಹಾಕುತ್ತಿದ್ದೆ. ಜನ ಕೊಟ್ಟ ಪೆನ್ ಪೇಪರನ್ನು ಹಿಡಿದುಕೊಂಡು ಸಿದ್ದರಾಮಯ್ಯ ಸರ್ಕಾರದಲ್ಲಿರುವವರೇ ಅವರ ಜೊತೆ ಶಾಮೀಲಾಗಿದ್ದಾರೆ. ಕಸದಲ್ಲಿ ತಿನ್ನಲು, ಎಲ್ಲದರಲ್ಲೂ ತಿನ್ನಲು ಪೇಪರ್ ಪೆನ್ ಇಟ್ಟುಕೊಂಡಿದ್ದಾರೆ ಎಂದರು.

ಎಲ್ಲಿದೆಯಪ್ಪಾ 200 ಯುನಿಟ್ ಫ್ರೀ ವಿದ್ಯುತ್?

ಐಎನ್​ಡಿಐಎ (ಇಂಡಿಯಾ ಮೈತ್ರಿ ಕೂಟ) ಮಾಡಿರುವುದು ಕರ್ನಾಟಕದ ಸಂಪತ್ತು ಲೂಟಿ ಮಾಡಿ ಕಾಂಗ್ರೆಸ್ ಕಟ್ಟಲು. ವಿದ್ಯುತ್ ಖರೀದಿಯಲ್ಲಿ ಎಷ್ಟು ಕಿಕ್ ಬ್ಯಾಕ್ ತೆಗೆದುಕೊಳ್ಳುತ್ತೀರಿ? ಎಲ್ಲಿದೆಯಪ್ಪಾ ಶಿವಕುಮಾರ್ 200 ಯುನಿಟ್ ಫ್ರೀ ವಿದ್ಯುತ್? ಪಾಪಾ ಜೋಡೆತ್ತುಗಳು ಈಗ ನುಡಿದಂತೆ ನಡೆದಿದ್ದೇವೆ ಅಂತಾ ಕೈ ಎತ್ತುತ್ತಿದ್ದಾರೆ. ಇನ್ನೂ ಏನೇನು ನಡೆಯುತ್ತದೆಯೋ ನಾಟಕ ಎಂದು ಕುಮಾರಸ್ವಾಮಿ ಹೇಳಿದರು.

ನಾಡಿನ‌ ಜನತೆಯ ಜೊತೆ ಚೆಲ್ಲಾಟ ಆಡಿದ್ದಕ್ಕೆ ಎರಡೂ ರಾಷ್ಟ್ರೀಯ ಪಕ್ಷಗಳ‌ ಬಗ್ಗೆ ನನಗೆ ನೋವಿದೆ. ಸಿದ್ದರಾಮಯ್ಯನವರೇ ನಿಮ್ಮ ಪಕ್ಷದ ನಾಯಕ ಬಿಕೆ ಹರಿಪ್ರಸಾದ್ ಏನು ಹೇಳಿದ್ದಾರೆ? ಬಿಜೆಪಿ ಸೇರಲು ಅಡ್ವಾಣಿ ಭೇಟಿ ಮಾಡಿ ಯಾರ್ಯಾರನ್ನು ಕರೆದುಕೊಂಡು ಹೋಗಿ ಆಪರೇಟ್ ಮಾಡಿದ್ದೀರಿ? ಜನರ ಮುಂದೆ ಸತ್ಯ ಹೇಳಿ ಎಂದು ಕುಮಾರಸ್ವಾಮಿ ಹೇಳಿದರು.

ನನ್ನ ಪಕ್ಷವನ್ನು ಬಿಜೆಪಿ ಬಿ ಟೀಮ್ ಅಂತೀರಾ? ಯಾವ ನೈತಿಕತೆ‌ ಇದೆ ನಿಮಗೆ ಎಂದು ಸಿದ್ದರಾಮಯ್ಯರನ್ನು ಪ್ರಶ್ನಿಸಿದ ಕುಮಾರಸ್ವಾಮಿ, ನಮಗಿಂತ ಮೊದಲು ಹೋಗಿ ಅರ್ಜಿ ಹಾಕಿಕೊಂಡು ನಿಂತಿದ್ದವರು ನೀವು. ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಮುಖ ತೋರಿಸಿ ದಲಿತ ಸಮುದಾಯದ ಮತ ಪಡೆದಿದ್ದೀರಿ. ಮಲ್ಲಿಕಾರ್ಜುನ ಖರ್ಗೆ 2009 ರಲ್ಲಿ ಲೋಕಸಭೆಗೆ ಹೋಗಲು ನಮ್ಮ ಪಕ್ಷದ ಕೊಡುಗೆ ಇದೆ. ಅಂದು ನಾವು ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿರುತ್ತಿದ್ದರೆ ಖರ್ಗೆ ಸೋತು ಇಲ್ಲೇ ವಿಪಕ್ಷ ನಾಯಕರಾಗಿರುತ್ತಿದ್ದರು. ಸಿದ್ದರಾಮಯ್ಯ ಎಲ್ಲಿರುತ್ತಿದ್ದರು? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಬಿಜೆಪಿಯೊಂದಿಗಿನ ಮೈತ್ರಿ ಬಗ್ಗೆ ​ಅಧ್ಯಕ್ಷ ಇಬ್ರಾಹಿಂ ಸೇರಿದಂತೆ ಜೆಡಿಎಸ್ ಇತರೆ ನಾಯಕರ ಭಿನ್ನ ಅಭಿಪ್ರಾಯ

ಕಾಂಗ್ರೆಸ್ 24 ಸೀಟು ಗೆದ್ದಾಯ್ತು ಅಂತಾ ದುರಹಂಕಾರದಿಂದ ಹೊರಟಿರುವುದಕ್ಕೆ ಬ್ರೇಕ್ ಹಾಕುವುದಕ್ಕೆ ನಮ್ಮ ನಾಯಕರು ಒಕ್ಕೂರಲಿನ ಸಂದೇಶ ಕೊಟ್ಟಿದ್ದಾರೆ ಎಂದ ಕುಮಾರಸ್ವಾಮಿ, ಸಿ.ಎಂ. ಇಬ್ರಾಹಿಂ ಅವರೇ ನಿಮಗೆ ಪಕ್ಷ ಯಾವತ್ತೂ ಮೋಸ ಮಾಡುವುದಿಲ್ಲ. ಜಯಪ್ರಕಾಶ್ ನಾರಾಯಣ್ ನೇತೃತ್ವದಲ್ಲಿ ಹುಟ್ಟುಹಾಕಿದ ಜನತಾ ಪಕ್ಷದ ಒಂದು ತುಣುಕು ಬಿಜೆಪಿ. ಐಎನ್​ಡಿಐಎ ಮಿತ್ರಪಕ್ಷಗಳು ಸೌಜನ್ಯಕ್ಕಾದರೂ ದೇವೇಗೌಡರನ್ನು ನೆನೆಸಿಕೊಳ್ಳಲಿಲ್ಲ. ನಿಮಗೆ ದೇವೇಗೌಡರ ಸಿದ್ಧಾಂತದ ಬಗ್ಗೆ ಮಾತಾಡಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ಲೋಕಸಭೆಗೆ ಪಕ್ಷ ಸಂಘಟನೆಗೆ ರಾಷ್ಟ್ರೀಯ ಅಧ್ಯಕ್ಷರು ಮಾಡುವ ತೀರ್ಮಾನಕ್ಕೆ ಬದ್ಧರಿದ್ದೇವೆ ಅಂತಾ ನೀವೆಲ್ಲರೂ ಬಂದಿದ್ದೀರಿ. ವಿಧಾನಸಭಾ ಚುನಾವಣೆಯಲ್ಲಿ ಸೋತವರು ಯಾರಿದ್ದೀರಿ ಅವರು ಯಾರನ್ನೂ ಕೈ ಬಿಡುವ ಪ್ರಶ್ನೆ ಇಲ್ಲ. ಕಾಂಗ್ರೆಸ್ ಆಮಿಷಕ್ಕೆ ಮರುಳಾಗಬೇಡಿ. ಈ ಸರ್ಕಾರದ ಭವಿಷ್ಯ ಗೊತ್ತಿದೆ, ತಾತ್ಕಾಲಿಕ ಸರ್ಕಾರ ಇದು. ಯಾವ ಸಮಯದಲ್ಲಿ ಏನು ಸ್ಫೋಟ ಆಗುತ್ತದೆ ಅಂತಾ ಈಗ ಬೇಡ ಎಂದರು.

ಏನು ಕಿಸಿದಿದ್ದೀರಿ ಅಂತಾ ಬಿಜೆಪಿ ಮತ್ತು ಜೆಡಿಎಸ್​ನಿಂದ ಕಾಂಗ್ರೆಸ್ ಪಕ್ಷಕ್ಕೆ ಬರುತ್ತಾರೆ? 135 ಸೀಟು ಗೆದ್ದಿದ್ದರೂ ಇನ್ನೂ ಅವರಿವರ ಮನೆ ಬಾಗಿಲು ತಟ್ಟಿಕೊಂಡು ಕೂತಿದ್ದೀರಲ್ಲಾ ನಾಚಿಕೆಯಾಗಲ್ವಾ ನಿಮಗೆ? ಬಿಜೆಪಿ, ಜೆಡಿಎಸ್​ನಲ್ಲಿ ಇರುವವರನ್ನು ಎಳೆದುಕೊಂಡು ನೀವು ನಮಗೆ ಕೋ ಆಪರೇಷನ್ ಕೊಡುವುದು ಬೇಡ. ಚಕ್ರ ಉರುಳುತ್ತದೆ. ಎಲ್ಲದಕ್ಕೂ ಅಂತಿಮ‌ ತೆರೆ ಎಳೆಯುವ ಕಾಲ ಹತ್ತಿರ ಬರುತ್ತಿದೆ ಎಂದರು.

ಮಾಧ್ಯಮದಲ್ಲಿ ಜಿ20 ಗಿಂತ ಹೆಚ್ಚು ಪ್ರಚಾರ ಮೈತ್ರಿಗೆ ಸಿಗುತ್ತಿದೆ. ಇಬ್ರಾಹಿಂ ಅವರಿಗೆ ಕೂಡಾ ಚುನಾವಣೆಯಲ್ಲಿ ನೋವು ಕೊಟ್ಟಿದ್ದೇವೆ. ಇಬ್ರಾಹಿಂ ಅವರೇ ಅಲ್ಪಸಂಖ್ಯಾತರನ್ನು ರಕ್ಷಣೆ ಮಾಡುವ ಹೊಣೆ ಕೊನೆಗೆ ನಿಮ್ಮ ಹೆಗಲಿಗೆ ಬರುತ್ತದೆ. 2006ರಲ್ಲಿ ನಾನು ಬಿಜೆಪಿ ಜೊತೆಗೆ ಹೋದಾಗ ಕಾಂಗ್ರೆಸ್​ನವರು ತಂದೆಯ (ದೇವೇಗೌಡ) ತಲೆ ಕೆಡಿಸಿದರು. ಅಂದು ನಾನು ಅಧಿಕಾರ ಕೊಡಬೇಕು ಅಂತಾನೇ ಇದ್ದೆ. ಆದರೆ ಬಿಜೆಪಿಯಲ್ಲಿದ್ದ ಕೆಲವರಿಗೇ ಸರ್ಕಾರ ಬೇಕಿರಲಿಲ್ಲ ಎಂದರು.

ಅಲ್ಪಸಂಖ್ಯಾತರಿಗೆ ಜೆಡಿಎಸ್ ಪಕ್ಷವೇ ರಕ್ಷಣೆ ಕೊಡುವ ದಿನ ಬರುತ್ತದೆ. ಕಾರ್ಯಕರ್ತರ ವಿಶ್ವಾಸಕ್ಕೆ ಧಕ್ಕೆ ಬರದಂತೆ ಕೆಲವು ತೀರ್ಮಾನ ಮಾಡಲು ನಿಮ್ಮ ಒಪ್ಪಿಗೆ ಇದೆ ಎಂದು ಭಾವಿಸುತ್ತೇನೆ. ನಿಮ್ಮೆಲ್ಲರ ಸಹಕಾರ ಇದೆ ಎಂಬ ನಂಬಿಕೆ‌ ಇದೆ ಎಂದು ಕುಮಾರಸ್ವಾಮಿ ಹೇಳಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ