ಬೆಂಗಳೂರು, ಮೇ 10: ಬಿಸಿಲಿನಿಂದ ಬಳಲಿದ್ದ ಬೆಂಗಳೂರಿನಲ್ಲಿ (Bengaluru) ಕೊನೆಗೂ ಮಳೆಯಾಗಲು (Rain) ಆರಂಭವಾಗಿದೆ. 6 ತಿಂಗಳಿಂದ ಮರೆಯಾಗಿದ್ದ ಮಳೆರಾಯನ ಆಗಮನದ ಜೊತೆ ಜೊತೆಗೆ ರಾಜಧಾನಿಯ ರಾಜಕಾಲುವೆಗಳಿಂದಾಗುವ (Rajakaluve) ಅವಾಂತರಗಳನ್ನು ತಪ್ಪಿಸಲು ಬಿಬಿಎಂಪಿ ಅಲರ್ಟ್ ಆಗಿದೆ. ಈಗಾಗಲೇ ರಾಜಕಾಲುವೆ ಕ್ಲೀನಿಂಗ್ ನಡೆಸುತ್ತಿರುವ ಪಾಲಿಕೆ, ರಾಜಕಾಲುವೆಗೆ ಕಸ, ಘನತ್ಯಾಜ್ಯ ಎಸೆಯುವವರಿಗೆ ಬಿಸಿ ಮುಟ್ಟಿಸಲು ಮುಂದಾಗಿದೆ.
ಮಳೆ ಬರುತ್ತಿದ್ದಂತೆ ರಾಜಕಾಲುವೆಗಳಿಂದ ಭೀತಿ ಎದುರಾಗಿದೆ. ಅತ್ತ ರಾಜಕಾಲುವೆಗಳ ಕ್ಲೀನಿಂಗ್ಗೆ ಇಳಿದಿರುವ ಪಾಲಿಕೆಗೆ ಮತ್ತೊಂದು ಸವಾಲು ಎದುರಾಗಿದೆ. ಅದೆಷ್ಟೇ ಬೇಲಿ ಹಾಕಿದರೂ, ರಾಜಕಾಲುವೆ ಸುತ್ತ ಎತ್ತರದ ಜಾಲರಿ ಅಳವಡಿಸಿದ್ದರೂ ರಾಜಕಾಲುವೆಗೆ ಕಸ ಎಸೆಯುವವರನ್ನು ತಡೆಯುವುದು ಪಾಲಿಕೆಗೆ ಸವಾಲಾಗಿ ಪರಿಣಮಿಸಿದೆ.
ಈಗಾಗಲೇ ಕೆಲ ರಾಜಕಾಲುವೆಗಳ ಬಳಿ ಗೋಡೆಗಳು ಒಡೆದು ಹೋಗಿರುವ ಕಡೆ ಜನರು ಡಪಿಂಗ್ ಯಾರ್ಡ್ಗಳಂತೆ ಕಸ ಸುರಿಯಲು ಶುರುಮಾಡಿದ್ದಾರೆ. ಕಸ ಅಲ್ಲದೇ ಕಟ್ಟಡದ ಅವಶೇಷಗಳು, ಘನತ್ಯಾಜ್ಯಗಳನ್ನು ರಾಜಕಾಲುವೆಗೆ ಎಸೆಯುತ್ತಿದ್ದವರಿಗೆ ಬಿಸಿ ಮುಟ್ಟಿಸಲು ಪಾಲಿಕೆ ಸಜ್ಜಾಗಿದೆ. ಮಾರ್ಷಲ್ಗಳ ಮೂಲಕ ನಿಗಾ ಇಡುವುದರ ಜೊತೆಗೆ ರಾಜಕಾಲುವೆಗೆ ಕಸ ಎಸೆದವರಿಗೆ ದಂಡ ವಿಧಿಸಲು ಪಾಲಿಕೆ ಸಜ್ಜಾಗಿದೆ.
ಇದನ್ನೂ ಓದಿ: ಮೇ 12ರ ವರೆಗೂ ಬೆಂಗಳೂರಿನಲ್ಲಿ ಭಾರಿ ಮಳೆ ಮುನ್ಸೂಚನೆ, ಗುರುವಾರದ ಮಳೆಗೆ ಎಲ್ಲೆಲ್ಲಿ ಏನೇನಾಯ್ತು?
ಸದ್ಯ ರಾಜಕಾಲುವೆಗಳ ಸ್ವಚ್ಛತೆಗೆ ಅಭಿಯಾನ ನಡೆಸುತ್ತಿರುವ ಪಾಲಿಕೆ, ರಾಜಕಾಲುವೆಗೆ ಕಸ ಎಸೆಯದಂತೆ ಮನವಿ ಮಾಡುತ್ತಿದೆ. ಆದರೆ, ಕೆಲ ಭಾಗಗಳಲ್ಲಿ ಪ್ಲಾಸ್ಟಿಕ್, ಕಟ್ಟಡದ ಅವಶೇಷಗಳು ರಾಜಕಾಲುವೆ ಒಡಲು ಸೇರುತ್ತಿದ್ದು, ಸದ್ಯ ದಂಡಾಸ್ತ್ರ ಪ್ರಯೋಗಿಸಲು ಹೊರಟಿರುವ ಪಾಲಿಕೆ ಎಷ್ಟರಮಟ್ಟಿಗೆ ಕಡಿವಾಣ ಹಾಕುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ