
ಬೆಂಗಳೂರು, ಡಿಸೆಂಬರ್ 30: ಎಲೆಕ್ಟ್ರಾನಿಕ್ ಸಿಟಿ 2ನೇ ಹಂತದಲ್ಲಿರುವ ಬಯೋಕಾನ್ ಕಂಪನಿಯ (biocon company) ಉದ್ಯೋಗಿ 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ (suicide) ಮಾಡಿಕೊಂಡಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಅನಂತ್ ಕುಮಾರ್(35) ಆತ್ಮಹತ್ಯೆ ಮಾಡಿಕೊಂಡ ಉದ್ಯೋಗಿ. ಆತ್ಮಹತ್ಯೆಗೆ ನಿಖರ ಮಾಹಿತಿ ತಿಳಿದುಬಂದಿಲ್ಲ. ಸದ್ಯ ಅನಂತ್ ಮೃತದೇಹವನ್ನು ಎಲೆಕ್ಟ್ರಾನಿಕ್ ಸಿಟಿಯ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬನಶಂಕರಿ ಮೂಲದ ಅನಂತ್ ಕುಮಾರ್, ಕಳೆದ ಎರಡು ತಿಂಗಳಿನಿಂದ ಕೆಲಸ ಮಾಡುತ್ತಿದ್ದರು. ಇಂದು ಮಧ್ಯಾಹ್ನ 2.30ರ ಸುಮಾರಿಗೆ ಐದನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಪರಪ್ಪನ ಅಗ್ರಹಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಅನಾರೋಗ್ಯದ ಹಿನ್ನೆಲೆ ಮನನೊಂದು ಆಟೋ ಡ್ರೈವರ್ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ನಗರದ ಜಯನಗರ ಬಡಾವಣೆ ನಿವಾಸಿ ಚಂದ್ರಶೇಖರ್ (45) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇದನ್ನೂ ಓದಿ: ಮನೆಗೆ ಬರ್ತಾನೆಂದು ಮಗನ ದಾರಿ ಕಾಯುತ್ತಿದ್ದ ತಾಯಿಗೆ ಬರಸಿಡಿಲು: 10 ದಿನದ ಬಳಿಕ ಪುತ್ರ ಶವವಾಗಿ ಪತ್ತೆ
ಕಳೆದ ಹಲವು ವರ್ಷಗಳಿಂದ ಆಟೋ ಚಾಲಕ ಚಂದ್ರಶೇಖರ್‌ಗೆ ಅಸ್ತಮಾ ಖಾಯಿಲೆಯಿಂದ ಬಳಲುತ್ತಿದ್ದರು. ಆಟೋ ಚಾಲಕನಾಗಿರುವ ಇವರಿಗೆ ಆರೋಗ್ಯ ಕಾಪಾಡಿಕೊಳ್ಳಲು ಬೇಕಾದ ಹಣಕಾಸು ಕೊರತೆ ಎದುರಾಗಿದ್ದು, ಇತ್ತೀಚೆಗೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಇನ್ನೂ ಸ್ಥಳಕ್ಕೆ ಕೋಲಾರ ನಗರ ಠಾಣಾ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.
ಗೀಸರ್ ಸೋರಿಕೆ ಆಗಿ ಉಸಿರುಗಟ್ಟಿ ಯುವತಿ ಸಾವನ್ನಪ್ಪಿರುವಂತಹ ಘಟನೆ ಚಿತ್ರದುರ್ಗದ ವಿನಾಯಕ ಕಲ್ಯಾಣ ಮಂಟಪದ ಬಳಿ ಮನೆಯಲ್ಲಿ ನಡೆದಿದೆ. ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ನೂತನ(20) ಮೃತ ಯುವತಿ. ಚಿತ್ರದುರ್ಗದ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾದ ಯುವಕನಿಂದ ಯುವತಿಯ ಮೇಲೆ ಹಲ್ಲೆ; ಆರೋಪಿ ಅರೆಸ್ಟ್
ವೈದ್ಯರು ಸಾವು ಖಚಿತ ಪಡಿಸಿ ಮೃತದೇಹವನ್ನು ಶವಾಗಾರಕ್ಕೆ ಸ್ಥಳಾಂತರಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆಗೆ ವಿರೋಧಿಸಿ ಸಂಬಂಧಿಕರು ಯುವತಿಯ ಮೃತದೇಹವನ್ನು ಬೈಕ್ನಲ್ಲೇ ತೆಗೆದುಕೊಂಡು ಹೋಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:55 pm, Tue, 30 December 25