ಹೊಸ ವರ್ಷಕ್ಕೆ ಆನ್‌ಲೈನ್ ಆಹಾರ ವಿತರಕರಿಗೆ ಭರ್ಜರಿ ಬಿಸಿನೆಸ್ ನಿರೀಕ್ಷೆ, ಆದರೆ ಡೆಲಿವರಿ ಬಾಯ್ಸ್ಗೆ ಸಂಕಷ್ಟ!
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಆನ್‌ಲೈನ್ ಆಹಾರ ವಿತರಣೆ ಬಿಸಿನೆಸ್ ಭರ್ಜರಿಯಾಗಿದ್ದರೂ, ಡೆಲಿವರಿ ಬಾಯ್‌ಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಸಂಚಾರ ದಟ್ಟಣೆ, ಹದಗೆಟ್ಟ ರಸ್ತೆಗಳು ಮತ್ತು ವಿತರಣಾ ಕಂಪನಿಗಳ ಸಮಯ ಮಿತಿಯಿಂದಾಗಿ ಅವರಿಗೆ ಆಹಾರ ತಲುಪಿಸುವುದು ಕಷ್ಟಕರವಾಗಿದೆ. ಇದರಿಂದ ಕಡಿಮೆ ವೇತನ ಮತ್ತು ಗ್ರಾಹಕರಿಂದ ಚೀಮಾರಿಗೂ ಒಳಗಾಗುತ್ತಿದ್ದಾರೆ.
ಬೆಂಗಳೂರು, ಡಿ.30: ಹೊಸ ವರ್ಷಾಚರಣೆಗೆ ಬೆಂಗಳೂರಿನಲ್ಲಿ ಆನ್‌ಲೈನ್ ಆಹಾರ ವಿತರಣೆ ಭರ್ಜರಿ ಬಿಸಿನೆಸ್ ನಡೆಸುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ. ಆದರೆ, ಈ ಅವಧಿಯಲ್ಲಿ ಆಹಾರ ತಲುಪಿಸುವ ಡೆಲಿವರಿ ಬಾಯ್‌ಗಳ ಸಂಕಷ್ಟಗಳು ಹೆಚ್ಚಾಗುತ್ತಿವೆ. ವಿತರಣಾ ಕಂಪನಿಗಳು ಗ್ರಾಹಕರಿಗೆ ತ್ವರಿತ ವಿತರಣೆಯ ಭರವಸೆ ನೀಡುವುದರಿಂದ, ಡೆಲಿವರಿ ಬಾಯ್‌ಗಳು ಕಠಿಣ ಸಮಯ ಮಿತಿಯ ಒತ್ತಡಕ್ಕೆ ಸಿಲುಕಿದ್ದಾರೆ. ಇದೀಗ ಹೊಸ ವರ್ಷಕ್ಕೂ ಮುನ್ನವೇ ಹೆಚ್ಚು ಹೆಚ್ಚು ಫುಡ್ ಆರ್ಡರ್ ಮಾಡಲು ಶುರುವಾಗಿದೆ. ಬೆಂಗಳೂರಿನಲ್ಲಿ ವಿಪರೀತ ಸಂಚಾರ ದಟ್ಟಣೆ ಮತ್ತು ಹದಗೆಟ್ಟ ರಸ್ತೆಗಳಿಂದಾಗಿ ನಿಗದಿತ ಸಮಯಕ್ಕೆ ಆಹಾರ ತಲುಪಿಸುವುದು ಅವರಿಗೆ ಅಸಾಧ್ಯವಾಗಿದೆ. 10-20 ನಿಮಿಷಗಳಲ್ಲಿ ಡೆಲಿವರಿ ಆಗಲ್ಲ, ರೆಸ್ಟೋರೆಂಟ್‌ಗಳಲ್ಲಿ ಕಾಯಬೇಕು, ಆದರೂ ಗ್ರಾಹಕರು ಬೇಗ ಬನ್ನಿ ಎಂದು ಒತ್ತಾಯಿಸುತ್ತಾರೆ ಎಂದು ಡೆಲಿವರಿ ಬಾಯ್‌ಗಳು ಹೇಳುತ್ತಾರೆ. ಕಡಿಮೆ ವೇತನಕ್ಕೆ ಹೆಚ್ಚು ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ. ಗ್ರಾಹಕರು ಮತ್ತು ರೆಸ್ಟೋರೆಂಟ್‌ಗಳಿಂದ ತಡವಾದರೆ, ಡೆಲಿವರಿ ಬಾಯ್‌ಗಳೇ ಬೈಸಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಪೊಲೀಸರ ರಸ್ತೆ ನಿಯಂತ್ರಣಗಳು ಮತ್ತು ಪಾರ್ಕಿಂಗ್ ಸಮಸ್ಯೆಗಳಿಂದಾಗಿ ರೆಸ್ಟೋರೆಂಟ್‌ಗಳಿಗೂ ವ್ಯಾಪಾರದಲ್ಲಿ ಹಿನ್ನಡೆಯಾಗಿದೆ. ಈ ಎಲ್ಲಾ ಅಂಶಗಳು ಡೆಲಿವರಿ ಬಾಯ್‌ಗಳ ಬದುಕನ್ನು ಮತ್ತಷ್ಟು ದುಸ್ತರಗೊಳಿಸಿವೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

