AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಗೆ ಬರ್ತಾನೆಂದು ಮಗನ ದಾರಿ ಕಾಯುತ್ತಿದ್ದ ತಾಯಿಗೆ ಬರಸಿಡಿಲು: 10 ದಿನದ ಬಳಿಕ ಪುತ್ರ ಶವವಾಗಿ ಪತ್ತೆ

ಕಳೆದ 10 ದಿನಗಳಿಂದ ಕಾಣೆಯಾಗಿದ್ದ ಮಗ ಈಗ ಬರ್ತಾನೆ, ಆಗ ಬರ್ತಾನೆ ಅಂತ ಮನೆ ಬಾಗಿಲಲ್ಲೇ ಕಾದು ಕುಳಿತ್ತಿದ್ದ ತಾಯಿಗೆ ಇದೀಗ ನಿರಾಸೆ ಉಂಟಾಗಿದೆ. ಕಾಣೆಯಾಗಿದ್ದ ಪಿಯು ವಿದ್ಯಾರ್ಥಿ ಶವವಾಗಿ ಪತ್ತೆಯಾಗಿದ್ದು, ಅತ್ತ ಮಗ ಸಾವನ್ನಪ್ಪಿರುವ ಸುದ್ದಿ ತಿಳಿದ ತಾಯಿಗೆ ಬರ ಸಿಡಿಲು ಬಡಿದಂತೆ ಆಗಿದೆ.

ಮನೆಗೆ ಬರ್ತಾನೆಂದು ಮಗನ ದಾರಿ ಕಾಯುತ್ತಿದ್ದ ತಾಯಿಗೆ ಬರಸಿಡಿಲು: 10 ದಿನದ ಬಳಿಕ ಪುತ್ರ ಶವವಾಗಿ ಪತ್ತೆ
ಮೃತ ವಿದ್ಯಾರ್ಥಿ
ನವೀನ್ ಕುಮಾರ್ ಟಿ
| Edited By: |

Updated on: Dec 26, 2025 | 8:04 PM

Share

ದೇವನಹಳ್ಳಿ, ಡಿಸೆಂಬರ್​ 26: ಆತನದು ಹದಿಹರಿಯದ ವಯಸ್ಸು. ಈಗಷ್ಟೇ ಕಾಲೇಜು ಮೆಟ್ಟಿಲೇರಿದ್ದ. ಪ್ರಥಮ ಪಿಯುಸಿ ಓದುತ್ತಾ, ಜಾಲಿಯಾಗೆ ಊರ ತುಂಬಾ ಓಡಾಡುತ್ತಿದ್ದ. ಡಿಸೆಂಬರ್​ 15ರಂದು ಮನೆಯಿಂದ ಸ್ನೇಹಿತನ ಬೈಕ್ ತೆಗೆದುಕೊಂಡು ಹೋದವನು 10 ದಿನಗಳ ಬಳಿಕ ರಸ್ತೆ ಮೋರಿಯಲ್ಲಿ ಶವವಾಗಿ (Deadbody) ಪತ್ತೆಯಾಗಿದ್ದಾನೆ. ಪ್ರೀತಿ (Love) ವಿಚಾರಕ್ಕೆ ಯುವತಿ ಕಡೆಯವರಿಂದ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಯುವಕನ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದುಕೊಂಡಿದೆ.

ನಡೆದದ್ದೇನು?

ಅಂದಹಾಗೆ ರಸ್ತೆ ಬದಿಯ ಮೋರಿಯಲ್ಲಿ ಬಿದ್ದು ದುರಂತ ಅಂತ್ಯ ಕಂಡಿರುವ ದುರ್ದೈವಿಯ ಹೆಸರು ನಿಶಾಂಕ್. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡರಾಯಪ್ಪನಹಳ್ಳಿ ನಿವಾಸಿ ನಿಶಾಂಕ್, ಡಿ. 15ರಂದು ಪಕ್ಕದ ಮನೆಯವನ ಬಳಿ ಎನ್ಎಸ್ ಪಲ್ಸರ್ ಬೈಕ್ ಪಡೆದು ಒಂದು ರೌಂಡ್ ಅಂತ ಹೊರಟ್ಟಿದ್ದ. ಆದರೆ ಬೆಳಗ್ಗೆ ಮನೆಯಿಂದ ಹೊರಗಡೆ ಹೋದ ನಿಶಾಂಕ್, ಸುಮಾರು ಗಂಟೆಯಾದರು ವಾಪಸ್ ಬಂದಿಲ್ಲ. ಹೀಗಾಗಿ ಎಲ್ಲೆಡೆ ಹುಡುಕಾಡಿದ ಕುಟುಂಬಸ್ಥರು ಕೊನೆಗೆ ಪೊಲೀಸ್ ಠಾಣೆಗೆ ಮಗನ ನಾಪತ್ತೆ ಬಗ್ಗೆ ದೂರು ನೀಡಿ ಕಾದು ಕುಳಿತಿದ್ದರು.

ಇದನ್ನೂ ಓದಿ: ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಬೆಚ್ಚಿಬೀಳಿಸುವ ಕೃತ್ಯ; ನರ್ಸ್‌ಗಳು ಬಟ್ಟೆ ಬದಲಿಸುವ ವಿಡಿಯೋ ಮಾಡುತ್ತಿದ್ದ ಸೈಕೋ ಅಂದರ್!

ಎಷ್ಟು ಹುಡುಕಾಡಿದರು ಮನೆಯಿಂದ ಹೊರಗಡೆ ಹೋಗಿದ್ದ ಯುವಕ ವಾಪಸ್ ಬಂದಿಲ್ಲ. ಇಂದು ಬೆಳಗ್ಗೆ ಊರ ಆಚೆ ಶವವಾಗಿ ಪತ್ತೆಯಾಗಿದ್ದಾನೆ. ದೊಡ್ಡಬಳ್ಳಾಫುರ ಚಿಕ್ಕಬಳ್ಳಾಫುರ ರಸ್ತೆಯ ಕಾಲುವೆಯ ಮೋರಿಯಲ್ಲಿ ಬೈಕ್ ಸಮೇತ ಯುವಕನ ಮೃತದೇಹ ಕಂಡುಬಂದಿದೆ. ಮೃತದೇಹ ಕಂಡ ಸ್ಥಳಿಯರು ತಕ್ಷಣ ಪೋಷಕರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸಹಪಾಠಿ ಜೊತೆ ಚಿಗುರೊಡೆದಿದ್ದ ಪ್ರೀತಿ

ಪ್ರಥಮ ಪಿಯುಸಿ ಓದುತ್ತಿದ್ದ ನಿಶಾಂಕ್​ ನಿತ್ಯ ಬಸ್​ನಲ್ಲಿ ಚಿಕ್ಕಬಳ್ಳಾಪುರಕ್ಕೆ ಕಾಲೇಜಿಗೆ ಹೋಗಿ ಬರುತ್ತಿದ್ದ. ಊರಿನಲ್ಲಿ ಜಾಲಿಯಾಗಿ ಓಡಾಡಿಕೊಂಡಿದ್ದ. ಜೊತೆಗೆ ಇತ್ತೀಚೆಗೆ ಕಾಲೇಜಿಗೆ ಹೋಗುತ್ತಿದ್ದ ಸಹಪಾಠಿ ಜೊತೆ ನಿಶಾಂಕ್​ಗೆ ಪ್ರೀತಿ ಚಿಗುರೊಡೆದಿದ್ದು, ಕಾಲೇಜು ಬಳಿ ಹುಡುಗಿ ಕಡೆಯವರು ವಾರ್ನಿಂಗ್ ನೀಡಿದ್ದರು ಎನ್ನಲಾಗಿದೆ.

ಅಲ್ಲದೆ ನಿಶಾಂಕ್ ನಾಪತ್ತೆಯಾದ ಹಿಂದಿನ ದಿನ ಹುಡುಗಿ ಜೊತೆಯಾಗಿರುವ ಫೋಟೋವನ್ನು ಇನ್ಸ್ಟಾಗ್ರಾಮ್​ನಲ್ಲಿ ಹಾಕಿ ಆಕೆಯ ಹುಟ್ಟುಹಬ್ಬಕ್ಕೆ ಶುಭಾಶಯ ಸಹ ಕೋರಿದ್ದನಂತೆ. ಹೀಗಾಗಿ ಹುಡುಗಿ ಮನೆ ಕಡೆಯವರೆ ನಮ್ಮ ಹುಡುಗನನ್ನ ಕೊಲೆ ಮಾಡಿರಬಹುದು ಅಂತ ಮೃತನ ಮನೆಯವರು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ನಾಪತ್ತೆಯಾದ 10 ದಿನಗಳ ಬಳಿಕ ನಿಶಾಂಕ್ ನನ್ನ ಕೊಲೆ ಮಾಡಿ ತಂದು ಮೋರಿ ಕೆಳಗಡೆ ಬಿಸಾಡಿದ್ದು, ಇದು ಅಪಘಾತವಲ್ಲ ಕೊಲೆ ಅಂತ ನಿಶಾಂಕ್ ಮನೆಯವರು ಶಂಕೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನೆಲಮಂಗಲ: ಮದುವೆಯಾಗಿ ತಿಂಗಳು ಕಳೆಯುವುದರೊಳಗೆ ನಿಗೂಢವಾಗಿ ನವ ವಿವಾಹಿತೆ ಸಾವು

ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಫುರ ಗ್ರಾಮಾಂತರ ಪೊಲೀಸರು ಮತ್ತು ಸೊಕೋ ಟೀಂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಅಲ್ಲದೆ ಮೃತನ ಪೋಷಕರ ಆರೋಪದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದು, ವಿದ್ಯಾರ್ಥಿಯದ್ದು ಆಕಸ್ಮಿಕ ಸಾವೋ ಅಥವಾ ಕೊಲೆಯೋ ಎನ್ನುವುದನ್ನು ಪೊಲೀಸರ ತನಿಖೆಯಿಂದ ಹೊರಬರಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.