ಲಾಲ್​ಬಾಗ್​​ನಲ್ಲಿ ಸುರಂಗ ರಸ್ತೆ ವಿವಾದ; ಕೇಂದ್ರ ಸಚಿವ ಕಿಶನ್ ರೆಡ್ಡಿಗೆ ಪತ್ರ ಬರೆದ ತೇಜಸ್ವಿ ಸೂರ್ಯ

ಬೆಂಗಳೂರಿನಲ್ಲಿ ಸುರಂಗ ರಸ್ತೆಗಾಗಿ ಲಾಲ್​ಬಾಗ್​ ಬಂಡೆಯ ಪಕ್ಕದ ಜಾಗವನ್ನು ಬಳಕೆ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಇದಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಖುದ್ದು ಲಾಲ್​ಬಾಗ್​ಗೆ ಹೋಗಿ ಪರಿಶೀಲಿಸಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಲಾಲ್​ಬಾಗ್​ನ 6 ಎಕರೆಯಲ್ಲ, 6 ಇಂಚು ಜಾಗವನ್ನೂ ಸುರಂಗ ಮಾರ್ಗಕ್ಕೆ ಬಿಟ್ಟುಕೊಡುವುದಿಲ್ಲ ಎಂದಿದ್ದರು.

ಲಾಲ್​ಬಾಗ್​​ನಲ್ಲಿ ಸುರಂಗ ರಸ್ತೆ ವಿವಾದ; ಕೇಂದ್ರ ಸಚಿವ ಕಿಶನ್ ರೆಡ್ಡಿಗೆ ಪತ್ರ ಬರೆದ ತೇಜಸ್ವಿ ಸೂರ್ಯ
Tejasvi Surya

Updated on: Oct 15, 2025 | 10:19 PM

ಬೆಂಗಳೂರು, ಅಕ್ಟೋಬರ್ 15: ಬೆಂಗಳೂರಿನಲ್ಲಿ ಸುರಂಗ ರಸ್ತೆ (Bengaluru Tunnel Road) ನಿರ್ಮಾಣಕ್ಕೆ ಲಾಲ್​ಬಾಗ್​ನ ಸ್ವಲ್ಪ ಜಾಗವನ್ನು ಬಳಕೆ ಮಾಡುವುದಾಗಿ ಸಿದ್ದರಾಮಯ್ಯನವರ ಸರ್ಕಾರ ಹೇಳಿತ್ತು. ಆದರೆ, ಅದಾದ ನಂತರ ಸ್ಪಷ್ಟೀಕರಣ ನೀಡಿದ್ದ ಡಿಸಿಎಂ ಡಿಕೆ ಶಿವಕುಮಾರ್ ಸುರಂಗ ರಸ್ತೆಯ ಸಾಮಗ್ರಿಗಳನ್ನು ಶೇಖರಿಸಿಡಲು ಮಾತ್ರ ಲಾಲ್​ಬಾಗ್​ನ ಜಾಗವನ್ನು ಬಳಕೆ ಮಾಡುತ್ತೇವೆ. ಕಾಮಗಾರಿ ಮುಗಿದ ನಂತರ ಆ ಜಾಗವನ್ನು ಖಾಲಿ ಮಾಡುತ್ತೇವೆ ಎಂದಿದ್ದರು. ಆದರೆ, ಸುರಂಗ ಮಾರ್ಗ ಲಾಲ್​ಬಾಗ್​ನ ಕೆಳಗೆ ಹಾದುಹೋಗುವುದು ಖಚಿತವಾಗಿರುವುದರಿಂದ ಇದರ ಸಾಧಕಬಾಧಕಗಳ ಬಗ್ಗೆ ಸಮೀಕ್ಷೆ ನಡೆಸಲು ಕೇಂದ್ರ ಗಣಿ ಸಚಿವ ಕಿಶನ್ ರೆಡ್ಡಿಯವರಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ (Tejasvi Surya) ಪತ್ರ ಬರೆದಿದ್ದಾರೆ.

ಸುರಂಗ ರಸ್ತೆಗಾಗಿ ಲಾಲ್‌ಬಾಗ್ ಬಂಡೆಯ ಪಕ್ಕದಲ್ಲಿ ಭೂಮಿಯನ್ನು ಗುರುತಿಸುವ ಕಾಂಗ್ರೆಸ್ ಸರ್ಕಾರದ ಕ್ರಮದ ನಂತರ, ನಾನು ಕೇಂದ್ರ ಗಣಿ ಸಚಿವ ಕಿಶನ್ ರೆಡ್ಡಿ ಅವರಿಗೆ ಪತ್ರ ಬರೆದಿದ್ದೇನೆ, ಯೋಜನೆಯ ಸಮಗ್ರ ಭೂವೈಜ್ಞಾನಿಕ ಪರಿಣಾಮದ ಮೌಲ್ಯಮಾಪನವನ್ನು ನಡೆಸುವಂತೆ ಭಾರತೀಯ ಭೂವೈಜ್ಞಾನಿಕ ಸಮೀಕ್ಷೆಗೆ ನಿರ್ದೇಶಿಸಲು ಕೋರಿದ್ದೇನೆ ಎಂದು ತೇಜಸ್ವಿ ಸೂರ್ಯ ತಿಳಿಸಿದ್ದಾರೆ.

ಇದನ್ನೂ ಓದಿ: ಲಾಲ್​ಬಾಗ್​​ನಲ್ಲಿ 6 ಎಕರೆ ಅಲ್ಲ 6 ಇಂಚು ಜಾಗವನ್ನೂ ಬಿಡೋದಿಲ್ಲ; ತೇಜಸ್ವಿ ಸೂರ್ಯ

ಸುರಂಗ ರಸ್ತೆಯ ಪ್ರಸ್ತುತ ಜೋಡಣೆ ಲಾಲ್‌ಬಾಗ್ ಮೂಲಕ ಹಾದುಹೋಗುತ್ತದೆ ಮತ್ತು ಬೆಂಗಳೂರಿನ ಅತಿದೊಡ್ಡ ಪರಿಸರ ಮತ್ತು ಪರಂಪರೆಯ ತಾಣಗಳಲ್ಲಿ ಒಂದಕ್ಕೆ ಗಂಭೀರ ಬೆದರಿಕೆಯನ್ನು ಒಡ್ಡುತ್ತದೆ. ಸುರಂಗ ಮಾರ್ಗವು 3,000 ದಶಲಕ್ಷ ವರ್ಷಗಳ ಹಿಂದಿನ ಮತ್ತು ರಾಷ್ಟ್ರೀಯ ಭೂ-ಪರಂಪರೆ ತಾಣವೆಂದು ಗುರುತಿಸಲ್ಪಟ್ಟ ಪೆನಿನ್ಸುಲರ್ ಗ್ನೀಸ್ ಅಥವಾ ಲಾಲ್‌ಬಾಗ್ ಬಂಡೆಯ ಪಕ್ಕದಲ್ಲಿ ಬರಲಿದೆ.


ಇದನ್ನೂ ಓದಿ: ಬೆಂಗಳೂರಿನಲ್ಲಿ ರಸ್ತೆ ಅಗಲೀಕರಣ ಅಸಾಧ್ಯ, ಟ್ರಾಫಿಕ್ ಸಮಸ್ಯೆಗೆ ಸುರಂಗ ಮಾರ್ಗವೊಂದೇ ಪರಿಹಾರ: ಡಿಕೆ ಶಿವಕುಮಾರ್

ಹೀಗಾಗಿ, ಲಾಲ್‌ಬಾಗ್‌ನ ಯಾವುದೇ ಭಾಗವನ್ನು ಕೈಗೆತ್ತಿಕೊಳ್ಳುವ ಮೊದಲು, ಲಾಲ್‌ಬಾಗ್ ಬಂಡೆಯ ರಚನೆಯ ಮೇಲೆ ದೀರ್ಘಕಾಲೀನ ಭೂಕಂಪ ಮತ್ತು ಜಲವಿಜ್ಞಾನದ ಪರಿಣಾಮಗಳನ್ನು ಒಳಗೊಂಡಂತೆ ಪೂರ್ಣ ಅಧ್ಯಯನ ಅತ್ಯಗತ್ಯ. ಬೆಂಗಳೂರು ಖಾಸಗಿ ವಾಹನಗಳಿಗೆ ಸುರಂಗ ರಸ್ತೆ ಕಲ್ಪನೆಯನ್ನು ಒಗ್ಗಟ್ಟಿನಿಂದ ವಿರೋಧಿಸುತ್ತದೆ ಮತ್ತು ಅದನ್ನು ಸಂಪೂರ್ಣವಾಗಿ ವಿರೋಧಿಸುತ್ತದೆ. ನಮಗೆ ಬೇಕಾಗಿರುವುದು ಸಮಗ್ರ, ವಿಶ್ವಾಸಾರ್ಹ ಮತ್ತು ಕೈಗೆಟುಕುವ ಸಾರ್ವಜನಿಕ ಸಾರಿಗೆ ಜಾಲ ಎಂದು ತೇಜಸ್ವಿ ಸೂರ್ಯ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ