ಬೆಂಗಳೂರಿನಲ್ಲಿ ರಸ್ತೆ ಅಗಲೀಕರಣ ಅಸಾಧ್ಯ, ಟ್ರಾಫಿಕ್ ಸಮಸ್ಯೆಗೆ ಸುರಂಗ ಮಾರ್ಗವೊಂದೇ ಪರಿಹಾರ: ಡಿಕೆ ಶಿವಕುಮಾರ್
ಬೆಂಗಳೂರಿನ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಸುರಂಗ ಮಾರ್ಗ ಏಕೈಕ ಪರಿಹಾರ ಎಂದಿರುವ ಡಿಸಿಎಂ ಡಿಕೆ ಶಿವಕುಮಾರ್, ಕಾಂಗ್ರೆಸ್ ಸರ್ಕಾರದ ಯೋಜನೆಯನ್ನು ವಿಧಾನ ಪರಿಷತ್‌ನಲ್ಲಿ ಸಮರ್ಥಿಸಿಕೊಂಡಿದ್ದಾರೆ. ರಸ್ತೆ ಅಗಲೀಕರಣ ಯಾಕೆ ಅಸಾಧ್ಯ ಎಂಬುದನ್ನು ವಿವರಿಸಿದ ಅವರು, ಸುರಂಗ ಮಾರ್ಗ ಯೋಜನೆಯ ಖರ್ಚುವೆಚ್ಚಗಳ ವಿವರ, ಯೋಜನೆ ಅನುಷ್ಠಾನ ಹೇಗೆ ಎಂಬುದನ್ನು ವಿವರಿಸಿದ್ದಾರೆ.

ಬೆಂಗಳೂರು, ಆಗಸ್ಟ್ 15: ಬೆಂಗಳೂರಿನ (Bengaluru) ಸಂಚಾರ ದಟ್ಟಣೆ ಸಮಸ್ಯೆಗೆ ಸುರಂಗ ಮಾರ್ಗವೊಂದೇ (Tunnel Road) ಪರಿಹಾರ ಎಂದು ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಪ್ರತಿಪಾದಿಸಿದ್ದಾರೆ. ವಿಧಾನ ಪರಿಷತ್ ಕಲಾಪದಲ್ಲಿ ಗುರುವಾರ ಬಿಜೆಪಿ ಸದಸ್ಯ ಸಿ.ಟಿ. ರವಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರಿನಲ್ಲಿ ರಸ್ತೆ ಅಗಲೀಕರಣ ಅಸಾಧ್ಯ. ಅದಕ್ಕೆ ಯಾರೂ ಸಿದ್ಧರಿಲ್ಲ. ಫ್ಲೈಓವರ್‌ಗಳು ಮತ್ತು ಮೆಟ್ರೋ ಮಾಡಲಾಗಿದೆ. ನಾವು ಸಂಚಾರ ಸಮೀಕ್ಷೆ ಮಾಡಿದ್ದೇವೆ. ಸುರಂಗ ಮಾರ್ಗವನ್ನು ಹೊರತುಪಡಿಸಿ ಬೇರೆ ದಾರಿಯಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಸರ್ಕಾರವು ಭೂಸ್ವಾಧೀನದ ಅತಿಯಾದ ವೆಚ್ಚವನ್ನು ಭರಿಸಲು ಸಾಧ್ಯವಿಲ್ಲ. ಆಸ್ತಿ ಮಾಲೀಕರಿಗೆ ಎರಡು ಪಟ್ಟು ದರವನ್ನು ಪಾವತಿಸಬೇಕಾಗುತ್ತದೆ ಎಂದೂ ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿರುವ ಹೆಚ್ಚಿನ ಆಸ್ತಿಗಳು ಪ್ರತಿ ಚದರ ಅಡಿಗೆ 10,000 ರೂ.ಗಿಂತ ಹೆಚ್ಚಿನ ಮೌಲ್ಯವನ್ನು ಹೊಂದಿವೆ ಎಂದು ಅವರು ಹೇಳಿದ್ದಾರೆ.
ಸುರಂಗ ಮಾರ್ಗ ಕಾಮಗಾರಿಯ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಹಲವರು ಆಸಕ್ತಿ ವ್ಯಕ್ತಪಡಿಸಿರುವುದರಿಂದ, ಟೆಂಡರ್‌ನಲ್ಲಿ ಭಾಗವಹಿಸುವ ಗಡುವನ್ನು ಸಹ ಮುಂದೂಡುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ.
ಸರ್ಕಾರ ಸುಮಾರು ಒಂದೂವರೆ ವರ್ಷಗಳಿಂದ ಈ ಯೋಜನೆಗಾಗಿ ಕೆಲಸ ಮಾಡುತ್ತಿದೆ. ಯೋಜನೆಯು 60:40 ಆಧಾರದ ಮೇಲೆ ನಡೆಯಲಿದೆ. ಸರ್ಕಾರವು ವೆಚ್ಚದ ಶೇ 40 ಅನ್ನು ಒದಗಿಸುತ್ತದೆ ಮತ್ತು (ಟೆಂಡರ್‌ನಲ್ಲಿ ಭಾಗವಹಿಸುವ) ಕಂಪನಿಯು ವೆಚ್ಚದ ಶೇ 60 ಅನ್ನು ಭರಿಸಲಿದೆ. ಕಂಪನಿಗೆ ಟೋಲ್ ಶುಲ್ಕವನ್ನು ಸಂಗ್ರಹಿಸಲು ಅನುಮತಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಕಡಿಮೆ ವೆಚ್ಚದಲ್ಲೇ ದೊಡ್ಡ ಸುರಂಗ ಮಾರ್ಗ: ಡಿಕೆ ಶಿವಕುಮಾರ್
ಬೆಂಗಳೂರು ಸುರಂಗ ರಸ್ತೆಯೇ ದೇಶದಲ್ಲಿ ಅತಿ ದೊಡ್ಡದಾಗಿರುತ್ತದೆ ಎಂದು ಹೇಳಿಕೊಂಡ ಶಿವಕುಮಾರ್, ಇದನ್ನು ಇತರ ನಗರಗಳಲ್ಲಿನ ಸುರಂಗ ರಸ್ತೆಗಳೊಂದಿಗೆ ಹೋಲಿಸುವ ಅಗತ್ಯವಿಲ್ಲ. ಗೈಮುಖ್ ಸುರಂಗ, ಮುಂಬೈನ ಆರೆಂಜ್ ಗೇಟ್ ಸುರಂಗದಂತಹ ಇತರ ಪ್ರಮುಖ ಸುರಂಗ ಯೋಜನೆಗಳೊಂದಿಗೆ ಹೋಲಿಸಿದರೆ, ನಮ್ಮ ಸುರಂಗ ಮಾರ್ಗದ ವೆಚ್ಚವು ತುಂಬಾ ಅಗ್ಗವಾಗಿದೆ. ಈ ಎರಡೂ ಸುರಂಗಗಳಲ್ಲಿ, ಪ್ರತಿ ಕಿಲೋಮೀಟರಿಗೆ 1,316 ಕೋಟಿ ರೂ. ವೆಚ್ಚವಾಗಿದ್ದರೆ, ನಮ್ಮ ಸುರಂಗ ರಸ್ತೆಯ ವೆಚ್ಚವು ಪ್ರತಿ ಕಿಲೋಮೀಟರಿಗೆ 770 ಕೋಟಿ ರೂ. ಮಾತ್ರ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಮುಜರಾಯಿ ದೇವಾಲಯಗಳಲ್ಲಿ ಸಂಸ್ಕೃತ ಬದಲು ಕನ್ನಡದಲ್ಲೇ ಶ್ಲೋಕ
ಈ ಮೂಲಕ, ಸುರಂಗ ಮಾರ್ಗಕ್ಕೆ ಸರ್ಕಾರ ಅತಿಯಾದ ವೆಚ್ಚ ಮಾಡುತ್ತಿದೆ ಎಂಬ ಆರೋಪಗಳನ್ನು ಡಿಕೆ ಶಿವಕುಮಾರ್ ಅಲ್ಲಗಳೆದಿದ್ದಾರೆ.




