ಐವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದ ನ್ಯಾಯಾಧೀಶರು: ದರ್ಶನ್ ಯಾವ ಜೈಲಿಗೆ ಗೊತ್ತಾ?
ರೇಣುಕಾಸ್ವಾಮಿ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ಜಾಮೀನು ರದ್ದು ಮಾಡಿದೆ. ಇದರ ಬೆನ್ನಲ್ಲೇ ನಟ ದರ್ಶನ್ ಹಾಗೂ ಪವಿತ್ರಗೌಡ ಸೇರಿದಂತೆ 7 ಆರೋಪಿಗಳನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ. ಹೊಸಕೆರೆಹಳ್ಳಿಯಲ್ಲಿರುವ ಪತ್ನಿ ವಿಜಯಲಕ್ಷ್ಮೀ ನಿವಾಸದಲ್ಲಿ ದರ್ಶನ್ ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಜಡ್ಜ್ ಐವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಹಾಗಾದ್ರೆ, ದರ್ಶನ್ ಯಾಬ ಜೈಲು ಹಕ್ಕಿಯಾಗಲಿದ್ದಾರೆ ಎನ್ನುವ ಚರ್ಚೆಗಳಿಗೆ ತೆರೆ ಬಿದ್ದಿದೆ.

ಬೆಂಗಳೂರು, (ಆಗಸ್ಟ್ 14): ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ (Renukaswamy Murder Case) ದರ್ಶನ್ (darshan)ಸೇರಿದಂತೆ ಏಳು ಆರೋಪಿಗಳ ಜಾಮೀನು ರದ್ದುಗೊಂಡಿದೆ. ಇದರ ಬೆನ್ನಲ್ಲೇ ಪೊಲಿಸರು ದರ್ಶನ್, ಪವಿತ್ರಗೌಡ ಸೇರಿದಂತೆ ಐವರು ಆರೋಪಿಗಳನ್ನು ಮತ್ತೆ ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಇದೀಗ ಜಡ್ಜ್, ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಸಿಸಿಹೆಚ್ 64ರ ಜಡ್ಜ್ ಈರಪ್ಪಣ್ಣ ಪವಡಿ ನಾಯ್ಕ್ ಆದೇಶದಂತೆ ಐವರು ಆರೋಪಿಗಳನ್ನು ಪೊಲೀಸರು, ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ದಿದ್ದಾರೆ. ಈ ಹಿಂದೆ ಬಳ್ಳಾರಿ ಜೈಲಿನಲ್ಲಿದ್ದ ದಾಸನಿಗೆ ಈ ಬಾರಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲೇ (Bengaluru parappana agrahara Jail) ಗತಿ.
ದರ್ಶನ್ ಪರಪ್ಪನ ಅಗ್ರಹಾರ ಜೈಲಿಗೆ
ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣದ A1 ಪವಿತ್ರಾಗೌಡ, A2 ದರ್ಶನ್, A11 ನಾಗರಾಜು, A12 ಲಕ್ಷ್ಮಣ, A14 ಪ್ರದೋಶ್ ನನ್ನು ಪರಪ್ಪನ ಅಗ್ರಹಾರ ಜೈಲಿಗೆ ಕರೆದುಕೊಂಡು ಹೋಗಿದ್ದು, ಕಾರಾಗೃಹದ ಕ್ವಾರಂಟೈನ್ ಜೈಲಿಗೆ ಹಾಕಿದ್ದಾರೆ. ಇನ್ನು ಪವಿತ್ರ ಗೌಡ ಮಾತ್ರ ಪ್ರಮುಖ ಜೈಲಿನ ಮಹಿಳಾ ಬ್ಯಾರಕ್ ಗೆ ರವಾನೆ ಮಾಡಲಾಗಿದೆ. ಜೈಲು ವೈದ್ಯರಿಂದ ಆರೋಗ್ಯ ತಪಾಸಣೆ ಬಳಿಕ ಆರೋಪಿಗಳಿಗೆ ಕೈದಿ ನಂಬರ್ ನೀಡಲಾಗುತ್ತದೆ.
ಮಧ್ಯಂತರ ಜಾಮೀನು ಪಡೆದಾಗ ದರ್ಶನ್ ಬಳ್ಳಾರಿ ಜೈಲಿನಲ್ಲಿದ್ದರು. ಬೆಂಗಳೂರು ಜೈಲಿನಲ್ಲಿ ರಾಜಾತಿಥ್ಯ ಸ್ವೀಕರಿಸಿದ ಕಾರಣ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು. ಆರೋಪಿಗಳು ಜಾಮೀನು ಪಡೆಯುವಾಗ ಯಾವ ಜೈಲಿನಲ್ಲಿದ್ದರೋ, ಜಾಮೀನು ರದ್ದಾದಾಗಲೂ ಅದೇ ಜೈಲಿಗೆ ಹಾಕಲಾಗುತ್ತೆ. ಹೀಗಾಗಿ ದರ್ಶನ್ ಬಳ್ಳಾರಿ ಜೈಲಿಗೆ ಹೋಗುತ್ತಾರೆ ಎನ್ನಲಾಗಿತ್ತು. ಆದ್ರೆ, ಜಡ್ಜ್ ಆದೇಶದ ಮೇರೆಗೆ ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.
ಇದನ್ನೂ ಓದಿ: ಜಾಮೀನು ರದ್ದಾಗಿ ದರ್ಶನ್ ನೆಮ್ಮದಿ ಮಾಯ: ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹಾಡು ಬಿಡುಗಡೆ ಮುಂದಕ್ಕೆ
ರೇಣುಕಾಸ್ವಾಮಿ ಕುಟುಂಬದ ಸಂತಸ
ಸುಪ್ರೀಂ ಕೋರ್ಟ್ ತೀರ್ಪಿನ ಬೆನ್ನಲ್ಲೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ರೇಣುಕಾಸ್ವಾಮಿ ತಂದೆ ಕಾಶಿನಾಥ್ ಶಿವನಗೌಡರ್ ಸಂತಸ ವ್ಯಕ್ತಪಡಿಸಿದ್ದಾರೆ. ʼʼದರ್ಶನ್ ಅವರ ಬೇಲ್ ಸುಪ್ರೀಂ ಕೋರ್ಟ್‌ನಲ್ಲಿ ರದ್ದಾಗಿದೆ. ಆರೆಸ್ಟ್ ಮಾಡಲು ಆದೇಶ ಆಗಿದೆ. ನ್ಯಾಯಾಂಗದ ಮೇಲೆ ನಂಬಿಕೆ ಹೆಚ್ಚಾಗಿದೆ. ಹೈಕೋರ್ಟ್ ಬೇಲ್ ಕೊಟ್ಟಾಗ ಆತಂಕ ಆಗಿತ್ತು. ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅಪೀಲ್ ಮಾಡಿದ್ದರು. ಯಾವುದೇ ಅಪರಾಧಿ ತಪ್ಪಿಸಿಕೊಳ್ಳಲು ಅಸಾಧ್ಯ ಎಂದು ಈ ತೀರ್ಪು ಬಂದಿದೆ. ಸರ್ಕಾರ ಮತ್ತು ನ್ಯಾಯಾಂಗದ ಬಗ್ಗೆ ಹೆಚ್ಚು ನಂಬಿಕೆ ಹುಟ್ಟಿದೆ, ಈ ಕೇಸ್‌ನಲ್ಲಿ ನ್ಯಾಯ ಸಿಗುತ್ತೆ ಎಂಬ ನಂಬಿಕೆ ಇದೆʼʼ ಎಂದು ಹೇಳಿದ್ದಾರೆ.
ರೇಣುಕಾಸ್ವಾಮಿ ತಾಯಿ ರತ್ನಪ್ರಭ ಮಾತನಾಡಿ, ʼʼಕೋರ್ಟಿಗೆ ತಲೆ ಬಾಗಲೇ ಬೇಕು. ನಮಗೆ ನ್ಯಾಯ ಸಿಕ್ಕಿದೆ. ಟ್ರಯಲ್ ಇನ್ನೂ ಕೂಡಾ ನಡೆಯಬೇಕಿದೆ. ನಮ್ಮ ಮನೆಯವರು ಪೂಜೆಗೆ ಕೂತಾಗ ಹೇಳಿದ್ದೇನೆ. ನಮಗೆ ಇದೀಗ ಸಂತೋಷವಾಗಿದೆ. ಕಾನೂನಿನಲ್ಲಿ ಏನು ತೀರ್ಪು ಬರುತ್ತೋ ಅದರ ಬಗ್ಗೆ ನಂಬಿಕೆ ಇದೆ. ಇವತ್ತಿನ ಕೋರ್ಟ್ ತೀರ್ಪಿನಿಂದ ನಂಬಿಕೆ ಬಂದಿದೆʼʼ ಎಂದಿದ್ದಾರೆ.
Published On - 8:48 pm, Thu, 14 August 25








