Darshan Arrest: ನಟ ದರ್ಶನ್ ಬಂಧನ: ರೇಣುಕಾಸ್ವಾಮಿ ಹತ್ಯೆ ಕೇಸಲ್ಲಿ ಮತ್ತೆ ಜೈಲು ವಾಸ
ನಟ ದರ್ಶನ್ ತೂಗುದೀಪ ಅವರಿಗೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದೆ. ಇದರಿಂದ ಅವರಿಗೆ ಮತ್ತೆ ಸಂಕಷ್ಟು ಎದುರಾಗಿದೆ. ಕೋರ್ಟ್ ಆದೇಶದ ಬೆನ್ನಲ್ಲೇ ದರ್ಶನ್ ಅವರನ್ನು ಬಂಧಿಸಲಾಗಿದೆ. ಇಷ್ಟು ದಿನ ಪ್ರವಾಸ, ಶೂಟಿಂಗ್ ಎಂದು ಸುತ್ತಾಡುತ್ತಿದ್ದ ಡಿ ಬಾಸ್ ಇನ್ಮುಂದೆ ಜೈಲಿನಲ್ಲಿ ಕಾಲ ಕಳೆಯಬೇಕಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ 7 ಪ್ರಮುಖ ಆರೋಪಿಗಳ ಜಾಮೀನು ರದ್ದು ಮಾಡಲಾಗಿದೆ. ದರ್ಶನ್ (Darshan Thoogudeepa), ಪವಿತ್ರಾ ಗೌಡ, ಲಕ್ಷಣ್, ಪ್ರದೋಷ್ ಮುಂತಾದವರು ಮತ್ತೆ ಈಗ ಜೈಲು ಸೇರಬೇಕಾಗಿದೆ. ಸುಪ್ರೀಂ ಕೋರ್ಟ್ನಲ್ಲಿ ಜಾಮೀನು (Darshan Bail) ರದ್ದಾದ ಬೆನ್ನಲ್ಲೇ ದರ್ಶನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪವಿತ್ರಾ ಗೌಡ (Pavithra Gowda) ಅವರನ್ನು ಕೂಡ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇಷ್ಟು ದಿನಗಳ ಕಾಲ ಸಿನಿಮಾ ಕೆಲಸ ಹಾಗೂ ಫ್ಯಾಮಿಲಿ ಜೊತೆಯಲ್ಲಿ ಬ್ಯುಸಿ ಆಗಿದ್ದ ದರ್ಶನ್ ಅವರಿಗೆ ಇನ್ಮುಂದೆ ಜೈಲೇ ಗತಿಯಾಗಿದೆ.
ಸುಪ್ರೀಂ ಕೋರ್ಟ್ ಆದೇಶ ಬಂದಾಗ ದರ್ಶನ್ ಬೆಂಗಳೂರಿನಲ್ಲಿ ಇರಲಿಲ್ಲ. ಸತ್ಯಮಂಗಲದ ಅಂದೂರು ಬಳಿ ಜಾತ್ರೆಯಲ್ಲಿ ಭಾಗಿಯಾಗಿ ಫಾರ್ಮ್‌ಹೌಸ್‌ಗೆ ಕುದುರೆ ಖರೀದಿಸಲು ಅವರು ತೆರಳಿದ್ದರು. ಜಾತ್ರೆಯಲ್ಲಿ ಎರಡು ಕುದುರೆಗಳನ್ನು ಫೈನಲ್ ಮಾಡಿದ್ದರು. ಜಾತ್ರೆಯಲ್ಲಿರುವಾಗಲೇ ಸ್ನೇಹಿತ ಧನ್ವೀರ್ ದೂರವಾಣಿ ಕರೆ ಮಾಡಿ ಸುಪ್ರೀಂಕೋರ್ಟ್‌ನ ತೀರ್ಪಿನ ಬಗ್ಗೆ ಮಾಹಿತಿ ನೀಡಿದ್ದರು. ಬಳಿಕ ದರ್ಶನ್ ಅವರು ಬೆಂಗಳೂರಿಗೆ ಆಗಮಿಸಿದರು.
ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ಅಪಾರ್ಟ್ಮೆಂಟ್ಗೆ ದರ್ಶನ್ ಬಂದರು. ಪತ್ನಿ ವಿಜಯಲಕ್ಷ್ಮೀಯ ಫ್ಲ್ಯಾಟ್ನಲ್ಲಿ ದರ್ಶನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅವರಿಗೆ ಈಗ ಮತ್ತೆ ಸಂಕಷ್ಟದ ದಿನಗಳು ಆರಂಭ ಆಗಿವೆ. ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಎಂಬ ಹಾಡನ್ನು ಬಿಡುಗಡೆ ಮಾಡಲು ಸಕಲ ಸಿದ್ಧತೆ ಮಾಡಿಕೊಂಡಿದ್ದ ದರ್ಶನ್ ಅವರಿಗೆ ಕೋರ್ಟ್ ತೀರ್ಪಿನಿಂದ ನೆಮ್ಮದಿ ಕಳೆದುಹೋಗುವಂತಾಗಿದೆ.
ಹೊಸಕೆರೆಹಳ್ಳಿಯಲ್ಲಿರುವ ಪ್ರೆಸ್ಟೀಜ್ ಸೌತ್ ರಿಡ್ಜ್ ಅಪಾರ್ಟ್ಮೆಂಟ್ನ 15ನೇ ಮಹಡಿಯಲ್ಲಿರುವ ವಿಜಯಲಕ್ಷ್ಮೀ ಫ್ಲ್ಯಾಟ್ ನಂ.4154ರಲ್ಲಿ ಬಂಧನ ಆಗಿದೆ. ಇನ್ನೋವಾ ಕಾರಿನಲ್ಲಿ ಬಂದ ದರ್ಶನ್ ಅವರು ವಿಜಯಲಕ್ಷ್ಮೀ ಫ್ಲ್ಯಾಟ್ಗೆ ಹಿಂಬದಿ ಗೇಟ್ನಿಂದ ಆಗಮಿಸಿದ್ದರು. ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ನಾಗೇಶ್, ಗೋವಿಂದರಾಜನಗರ ಠಾಣೆ ಇನ್ಸ್‌ಪೆಕ್ಟರ್ ಸುಬ್ರಹ್ಮಣ್ಯ ನೇತೃತ್ವದಲ್ಲಿ ದರ್ಶನ್ ಅವರನ್ನು ಅರೆಸ್ಟ್ ಮಾಡಲಾಗಿದೆ.
ಇದನ್ನೂ ನೋಡಿ: ಪವಿತ್ರಾ ಗೌಡ ಬಂಧನ; ಮುಖದಲ್ಲಿದ್ದ ನಗು ಮಾಯ
ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ದರ್ಶನ್ ಅವರಿಗೆ ಹೈಕೋರ್ಟ್ನಲ್ಲಿ ಬೇಲ್ ಸಿಕ್ಕಾಗ ನಮಗೆ ಸ್ವಲ್ಪ ಆತಂಕವಾಗಿತ್ತು. ಆದರೆ ಸರ್ಕಾರದವರು ದೊಡ್ಡ ಮನಸ್ಸು ಮಾಡಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈಗ ಬೇಲ್ ರದ್ದಾಗಿದೆ. ಯಾವುದೇ ಅಪರಾಧಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಸುಪ್ರೀಂ ಕೋರ್ಟ್ ಎಲ್ಲರಿಗೂ ತಿಳಿಸಿಕೊಟ್ಟಂತಾಗಿದೆ’ ಎಂದು ಕಾಶಿನಾಥಯ್ಯ ಅವರು ಹೇಳಿದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 4:06 pm, Thu, 14 August 25




