‘20 ಕೋಟಿ ರೂಪಾಯಿ ಕೊಟ್ಟರು ಎಂಬುದೆಲ್ಲ ಸುಳ್ಳು’: ರೇಣುಕಾಸ್ವಾಮಿ ತಂದೆ ಖಡಕ್ ಮಾತು
ರೇಣುಕಾಸ್ವಾಮಿ ಹತ್ಯೆ ಮಾಡಿದವರಿಗೆ ಖಂಡಿತಾ ಶಿಕ್ಷೆ ಆಗುತ್ತದೆ ಎಂದು ಕುಟುಂಬದವರು ನಂಬಿದ್ದಾರೆ. ದರ್ಶನ್, ಪವಿತ್ರಾ ಗೌಡ ಮುಂತಾದವರು ಬೇಲ್ ರದ್ದಾದ ಬಳಿಕ ಕಾನೂನಿನ ಮೇಲೆ ನಂಬಿಕೆ ಬಲವಾಗಿದೆ. ಈ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಹಬ್ಬಿರುವ ವದಂತಿಗಳ ಬಗ್ಗೆ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಮಾತಾಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ (Darshan), ಪವಿತ್ರಾ ಗೌಡ ಸೇರಿದಂತೆ 7 ಆರೋಪಿಗಳ ಜಾಮೀನು ರದ್ದು ಮಾಡಲಾಗಿದೆ. ಸುಪ್ರೀಂ ಕೋರ್ಟ್ ತೀರ್ಪು ಬರುತ್ತಿದ್ದಂತೆಯೇ ರೇಣುಕಾಸ್ವಾಮಿ (Renukaswamy) ಕುಟುಂಬದವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಪ್ರಕರಣದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವದಂತಿಗಳು ಹರಿದಾಡಿವೆ. ಆ ಬಗ್ಗೆ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ (Renukaswamy Father Kashinathayya) ಅವರು ಮಾತನಾಡಿದ್ದಾರೆ. ತಾವು ದರ್ಶನ್ ಕಡೆಯವರಿಂದ ಹಣ ಪಡೆದಿಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ. ಜಾಮೀನು ರದ್ದಾಗಿದ್ದಕ್ಕೆ ನ್ಯಾಯದ ಮೇಲೆ ನಂಬಿಕೆ ಮೂಡಿದೆ ಎಂದು ಕಾಶಿನಾಥಯ್ಯ ಅವರು ಹೇಳಿದ್ದಾರೆ.
‘ಫೇಸ್ಬುಕ್ನಲ್ಲಿ ಏನೇನೋ ಬರುತ್ತಿದೆ. ಅಷ್ಟು ಕೋಟಿ ಕೊಟ್ಟರು, ಇಷ್ಟು ಕೋಟಿ ಕೊಟ್ಟರು ಎಂಬುದೆಲ್ಲ ಶುದ್ಧ ಸುಳ್ಳು. ನಾವು ಯಾರ ಬಳಿಯೂ ದುಡ್ಡು ಕೇಳಿಲ್ಲ. ಯಾರೂ ಸಹ ದುಡ್ಡು ಕೊಡಲು ಬಂದಿಲ್ಲ. ಯಾಕೆ ಈ ರೀತಿ ಹಾಕುತ್ತಾರೆ ಎಂಬುದು ನಮಗೆ ಅರ್ಥ ಆಗುತ್ತಿಲ್ಲ. ಅವರ (ದರ್ಶನ್) ಸಂಪರ್ಕದಲ್ಲಿ ನಾವು ಇಲ್ಲ’ ಎಂದು ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಅವರು ಹೇಳಿದ್ದಾರೆ.
‘ಫೇಸ್ಬುಕ್ ಮಹಾಶಯರಿಗೆ ನಾನು ಹೇಳುವುದು ಇಷ್ಟೇ. ನಿಜವಾಗಿ ಗೊತ್ತಿರುವ ಸಂಗತಿ ಏನಾದರೂ ಇದ್ದರೆ ಮಾತ್ರ ಹಾಕಿ. ಅಂತೆ-ಕಂತೆ ವಿಚಾರಗಳನ್ನು ಹಾಕಿ ಜನರ ದಿಕ್ಕು ತಪ್ಪಿಸಬೇಡಿ. 10 ಕೋಟಿ ಕೊಟ್ಟರು, 20 ಕೋಟಿ ಕೊಟ್ಟರು ಎಂದೆಲ್ಲ ಹಾಕಿದ್ದಾರೆ. 10 ಪೈಸೆಯನ್ನೂ ನಾವು ಪಡೆದುಕೊಂಡಿಲ್ಲ. ದಯವಿಟ್ಟು ಸುಳ್ಳು ಸುದ್ದಿ ಹಾಕಬೇಡಿ. ಅದರಿಂದ ನಮ್ಮ ಮನೆತನದ ಗೌರವಕ್ಕೆ ಕುಂದು ಬರುತ್ತದೆ’ ಎಂದಿದ್ದಾರೆ ಕಾಶಿನಾಥಯ್ಯ.
‘ಸುಳ್ಳು ಸುದ್ದಿಯಿಂದ ನಮ್ಮ ಮನಸ್ಸಿಗೆ ನೋವಾಗುತ್ತದೆ. ಜನರಿಗೆ ನಮ್ಮ ಬಗ್ಗೆ ತಪ್ಪು ಅಭಿಪ್ರಾಯ ಬರುತ್ತದೆ. ವದಂತಿ ಹಬ್ಬಿಸಬೇಡಿ ಎಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ. ದರ್ಶನ್ ಅಭಿಮಾನಿಗಳು ಇನ್ನೊಬ್ಬರ ಬಗ್ಗೆ ಮಾತನಾಡುವಾಗ ಸತ್ಯ ಇರಬೇಕು. ಫೇಸ್ ಬುಕ್ ಎಂಬುದು ಫೇಕ್ ಬುಕ್ ಆಗಿದೆ ಇವತ್ತು’ ಎಂದು ಕಾಶಿನಾಥಯ್ಯ ಅವರು ಹೇಳಿದ್ದಾರೆ.
ಇದನ್ನೂ ಓದಿ: ‘ಇದ್ರೇ ನೆಮ್ದಿಯಾಗ್ ಇರ್ಬೇಕ್’ ಹಾಡು ರಿಲೀಸ್ಗೂ ಮೊದಲೇ ನೆಮ್ಮದಿ ಕಳೆದುಕೊಂಡ ದರ್ಶನ್
‘ಹೈಕೋರ್ಟ್ನಲ್ಲಿ ದರ್ಶನ್ ಅವರಿಗೆ ಬೇಲ್ ಸಿಕ್ಕಾಗ ನಮಗೆ ಸ್ವಲ್ಪ ಆತಂಕ ಆಗಿತ್ತು. ಆದರೆ ಸರ್ಕಾರದವರು ದೊಡ್ಡ ಮನಸ್ಸು ಮಾಡಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈಗ ಬೇಲ್ ರದ್ದಾಗಿದೆ. ಇದರಿಂದ ನಾನು ತಿಳಿದಿದ್ದು ಏನೆಂದರೆ, ಯಾವುದೇ ಅಪರಾಧಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದನ್ನು ಸುಪ್ರೀಂ ಕೋರ್ಟ್ ಎಲ್ಲರಿಗೂ ತಿಳಿಸಿಕೊಟ್ಟಂತೆ ಆಗಿದೆ’ ಎಂದು ಕಾಶಿನಾಥಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




