ಬೆಂಗಳೂರು: ರಸ್ತೆ, ಫುಟ್ಪಾತ್ಗಳಲ್ಲಿ ರಾಶಿ ರಾಶಿ ಕಸ; ಜಿಬಿಎ ನಿರ್ಲಕ್ಷ್ಯಕ್ಕೆ ಜನರು ಪರದಾಟ
ಬೆಂಗಳೂರು ರಸ್ತೆ ಗುಂಡಿ ವಿಚಾರ ಸಾಕಷ್ಟು ಸದ್ದು ಮಾಡುತ್ತಿರುವ ಬೆನ್ನಲ್ಲೇ ಇದೀಗ ಕಸದ ಸಮಸ್ಯೆಯೂ ಶುರುವಾಗಿದೆ. ಕೆಲ ನಗರದ ರಸ್ತೆ ಮತ್ತು ಫುಟ್ ಪಾತ್ಗಳಲ್ಲಿ ರಾಶಿ ರಾಶಿ ಕಸ ಬಿದ್ದಿದ್ದರೂ ತೆರವು ಮಾಡಿಲ್ಲ. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಜಿಬಿಎ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬೆಂಗಳೂರು, ಅಕ್ಟೋಬರ್ 15: ಗಾರ್ಡನ್ ಸಿಟಿ ಬೆಂಗಳೂರಿನ (bangaluru) ಗಲ್ಲಿ ಗಲ್ಲಿಯಲ್ಲೂ ಗಾರ್ಬೆಜ್ (garbage) ಸಮಸ್ಯೆ ಎದುರಾಗಿದ್ದು, ಬ್ರ್ಯಾಂಡ್ ಬೆಂಗಳೂರನ್ನ ಬ್ಯಾಡ ಕಂಡೀಷನ್ಗೆ ನೂಕಿದಂತಾಗಿದೆ. ರಾಜಧಾನಿಯ ರಸ್ತೆಗಳಲ್ಲಿ, ಫುಟ್ ಪಾತ್ಗಳಲ್ಲಿ ಕಸದ ರಾಶಿ ಬಿದ್ದಿದ್ದರೂ ತೆರವು ಮಾಡುವುದರಲ್ಲಿ ಜಿಬಿಎ ನಿರ್ಲಕ್ಷ್ಯವಹಿಸಿದರೆ, ಇತ್ತ ಮನೆ ಮನೆಗೆ ತೆರಳಿ ಕಸ ಸಂಗ್ರಹ ಮಾಡುವ ಕೆಲಸ ಕೂಡ ಕೆಲವೆಡೆ ವಿಳಂಬವಾಗುತ್ತಿರುವುದು ಸಿಟಿಯಲ್ಲಿ ಕಸದ ಸಮಸ್ಯೆ ತಲೆದೂರುವಂತೆ ಮಾಡಿದೆ. ಗಾರ್ಡನ್ ಸಿಟಿಯಲ್ಲಿ ಗಾರ್ಬೆಜ್ ಸಂಕಷ್ಟ ಎದುರಾಗಿರುವುದು ಟಿವಿ9 ರಿಯಾಲಿಟಿ ಚೆಕ್ನಲ್ಲಿ ಬಯಲಾಗಿದೆ.
ಬ್ರ್ಯಾಂಡ್ ಬೆಂಗಳೂರಿನ ಹಲವು ಏರಿಯಾಗಳ ರಸ್ತೆಗಳಲ್ಲಿ ಸದ್ಯ ರಾಶಿ ರಾಶಿ ಕಸ ಕಂಡುಬರುತ್ತಿದೆ. ಬೆಂಗಳೂರನ್ನ ಕ್ಲೀನ್ ಸಿಟಿ ಮಾಡುತ್ತೇವೆ ಎಂದು ಹೇಳುವ ಜಿಬಿಎ, ಘನತ್ಯಾಜ್ಯ ನಿರ್ವಹಣಾ ನಿಗಮ ಕಸ ವಿಲೇವಾರಿ ಮಾಡದೇ ಕಣ್ಮುಚ್ಚಿ ಕುಳಿತಿದ್ದರೆ ಇತ್ತ ರಸ್ತೆಬದಿಗಳಲ್ಲಿ ಎಲ್ಲೆಂದರಲ್ಲಿ ಕಸ ಸುರಿಯುವ ಕೆಲಸ ಹೆಚ್ಚಾಗುತ್ತಿದೆ. ರಾಜಧಾನಿಯಲ್ಲಿ ಬ್ಲಾಕ್ ಸ್ಪಾಟ್ಗಳ ಸಂಖ್ಯೆ ಕೂಡ ಏರಿಕೆಯಾಗುತ್ತಿದೆ.
ಇದನ್ನೂ ಓದಿ: ಕಸದ ರಾಶಿ: ಇದು ಯಾವ ಸೀಮೆ ಬ್ರ್ಯಾಂಡ್ ಬೆಂಗಳೂರು ಎಂದ ಮಹಿಳೆಯರು
ಇನ್ನು ಬೆಂಗಳೂರಿನ ಹಲವೆಡೆ ಮುಖ್ಯರಸ್ತೆಗಳಲ್ಲಿ ಕಸದರಾಶಿ ಬಿದ್ದಿದ್ದು, ಜನರು ಓಡಾಡುವುದಕ್ಕೂ ಆಗದ ಸ್ಥಿತಿ ತಂದಿಟ್ಟಿದೆ. ಕಾಮಾಕ್ಷಿಪಾಳ್ಯ ಮುಖ್ಯರಸ್ತೆಯಲ್ಲಿ ಅರ್ಧರಸ್ತೆಯೇ ಕಸದಿಂದ ಮುಚ್ಚಿಹೋಗಿದ್ದು, ತ್ಯಾಜ್ಯ ತುಂಬಿದ ರಸ್ತೆಗಳು ಐಟಿ ಸಿಟಿಯ ಅಂದಕ್ಕೆ ಕಪ್ಪುಚುಕ್ಕೆ ಇಟ್ಟಂತಾಗಿದೆ. ಕಾಮಾಕ್ಷಿಪಾಳ್ಯ, ಮಾಗಡಿ ರಸ್ತೆ, ಸುಂಕದಕಟ್ಟೆ ಹಾಗೂ ಜ್ಞಾನಜ್ಯೋತಿನಗರ ಸುತ್ತಮುತ್ತ ಕಸದರಾಶಿ ಗಬ್ಬೆದ್ದುನಾರುತ್ತಿದೆ.
ಬ್ಲಾಕ್ ಸ್ಪಾಟ್ಗಳ ಸಂಖ್ಯೆ ಏರಿಕೆ
ಸದ್ಯ ಬೆಂಗಳೂರಿನ ಬಹುತೇಕ ಏರಿಯಾಗಳಲ್ಲಿ ಕಸ ಸಂಗ್ರಹ ಮಾಡುವ ವಾಹನಗಳು ಕೂಡ ಸರಿಯಾಗಿ ಮನೆ ಮನೆಗೆ ಬಂದು ಕಸ ಸಂಗ್ರಹ ಮಾಡುತ್ತಿಲ್ಲ ಅನ್ನೋ ಆರೋಪ ಕೇಳಿಬರುತ್ತಿದೆ. ಇದರಿಂದ ಸಿಟಿ ಮಂದಿ ರಸ್ತೆಬದಿಯಲ್ಲಿ ಕಸ ಎಸೆದುಹೋಗ್ತಿರೋದು ರಾಜಧಾನಿಯ ರಸ್ತೆಗಳಲ್ಲಿ ಬ್ಲಾಕ್ ಸ್ಪಾಟ್ಗಳ ಸಂಖ್ಯೆ ಕೂಡ ಏರಿಕೆಯಾಗುವಂತೆ ಮಾಡಿದೆ.
ಸರ್ಕಾರದ ವಿರುದ್ಧ ಸಿಟಿ ಮಂದಿ ಆಕ್ರೋಶ
ಇತ್ತ ಟ್ಯಾಕ್ಸ್ ಮಾತ್ರ ಬಿಡದೇ ವಸೂಲಿ ಮಾಡುವ ಸರ್ಕಾರ ಕಸವನ್ನ ಮಾತ್ರ ವಿಲೇವಾರಿ ಮಾಡುವ ಬಗ್ಗೆ ನಿಗಾ ವಹಿಸದಿರುವುದಕ್ಕೆ ಸಿಟಿ ಮಂದಿ ಆಕ್ರೋಶ ಹೊರಹಾಕುತ್ತಿದ್ದಾರೆ. ಕಸ ಸಂಗ್ರಹ ಮಾಡುವುದನ್ನ ಸರಿಯಾಗಿ ಮಾಡದೇ ಬ್ರ್ಯಾಂಡ್ ಬೆಂಗಳೂರು ಹೇಗಾಗುತ್ತೆ? ಮಕ್ಕಳು, ವಯೋವೃದ್ಧರು ಓಡಾಡುವುದಕ್ಕೆ ಆಗದಂತೆ ರಸ್ತೆಗಳಲ್ಲಿ ಕಸ ಸುರಿಯೋದಕ್ಕೆ ಬ್ರೇಕ್ ಹಾಕಿ ರಸ್ತೆಬದಿಗಳಲ್ಲಿ ಕಸ ತೆರವು ಮಾಡುವಂತೆ ಸ್ಥಳೀಯರಾದ ಅನಿತಾ ಎಂಬುವವರು ಆಗ್ರಹಿಸಿದ್ದಾರೆ.
ಬೆಂಗಳೂರಿನ ಕಸ ವಿಲೇವಾರಿಗಾಗಿ ಪೌರಕಾರ್ಮಿಕರು, ಘನತ್ಯಾಜ್ಯ ನಿರ್ವಹಣಾ ನಿಗಮ ಕೆಲಸ ಮಾಡುತ್ತಿದೆ. ಆದರೆ ರಾಜಧಾನಿಯ ಹಲವು ಏರಿಯಾಗಳಲ್ಲಿ ಕಸ ಸಂಗ್ರಹದಲ್ಲಿ ನಿರ್ಲಕ್ಷ್ಯ ಎದುರಾಗಿದ್ದರೆ, ಇತ್ತ ರಸ್ತೆಗಳು, ಫುಟ್ ಪಾತ್ಗಳು ಕೂಡ ಕಸದ ಡಂಪಿಂಗ್ ಯಾರ್ಡ್ಗಳಂತೆ ಬದಲಾಗ್ತಿರೋದು ಸಿಟಿ ಜನರಿಗೆ ಸಂಕಷ್ಟ ತಂದಿಟ್ಟಿದೆ.
ಇದನ್ನೂ ಓದಿ: ಬೆಂಗಳೂರು: ಬೀದಿಯಲ್ಲಿ ಕಸ ಎಸೆದಿದ್ದನ್ನು ಪ್ರಶ್ನಿಸಿದ ಪೌರಕಾರ್ಮಿಕನ ಮೇಲೆ ಹಲ್ಲೆ; ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ
ಇನ್ನು ಕಸ ವಿಲೇವಾರಿ ವಾಹನಗಳ ಚಾಲಕರು ಕೆಲಸ ಕಾಯಂ ಮಾಡಿಲ್ಲ, ವೇತನ ನೀಡಿಲ್ಲ ಅಂತ ಆಗಾಗ ಪ್ರತಿಭಟನೆ ನಡೆಸುತ್ತಿದ್ದರೆ, ಇತ್ತ ಕಸ ವಿಲೇವಾರಿ ಮಾಡುವುದಕ್ಕೆ ಸೂಕ್ತ ಜಾಗ ಗುರುತಿಸದಿರುವುದು ಸಿಟಿಯಲ್ಲಿ ಕಸದ ಸಮಸ್ಯೆ ಮತ್ತಷ್ಟು ಉಲ್ಬಣಿಸುವಂತೆ ಮಾಡಿದೆ. ಸದ್ಯ ಗಾರ್ಡನ್ ಸಿಟಿಯ ಗಾರ್ಬೆಜ್ ಕಂಟಕಕ್ಕೆ ಇನ್ನಾದರೂ ಮುಕ್ತಿ ಸಿಗುತ್ತ ಅನ್ನೋದನ್ನ ಕಾದುನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



