ಬೆಂಗಳೂರು: ನಗರದ ನ್ಯೂ ತರಗುಪೇಟೆಯಲ್ಲಿ ನಿಗೂಢ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಸ್ಥಳದಲ್ಲಿ ಕೆಲವು ಮಹತ್ವದ ವಸ್ತುಗಳ ಸ್ಯಾಂಪಲ್ ಸಂಗ್ರಹ ಮಾಡಲಾಗಿದೆ. ಎಫ್ಎಸ್ಎಲ್ ಅಧಿಕಾರಿಗಳು ಸ್ಯಾಂಪಲ್ ಸಂಗ್ರಹ ಮಾಡಿದ್ದಾರೆ. ನಿಗೂಢ ಸ್ಫೋಟ ಘಟನೆಗೆ ಅಸಲಿ ಕಾರಣ ಏನು? ಪಟಾಕಿಯ ತೀವ್ರತೆಯಿಂದಲೇ ಈ ಅನಾಹುತವಾಗಿದೆಯಾ? ಹೀಗೆ ಹಲವು ಆಯಾಮಗಳಲ್ಲಿ ತನಿಖೆ ನಡೆಸಲು ಮಹತ್ವದ ಸ್ಯಾಂಪಲ್ಗಳನ್ನು ಸಂಗ್ರಹ ಮಾಡಲಾಗಿದೆ. ಬಳಿಕ, ಟಿವಿ9ಗೆ ಎಫ್ಎಸ್ಎಲ್ ತಜ್ಞ ಡಾ. ದಿನೇಶ್ ರಾವ್ ಹೇಳಿಕೆ ನೀಡಿದ್ದಾರೆ. ಪಟಾಕಿ ಸ್ಫೋಟದಿಂದ ಇಷ್ಟು ಪ್ರಮಾಣದ ಅವಘಡ ಆಗಲ್ಲ. ಪಟಾಕಿ ಸ್ಫೋಟದಿಂದ ದೇಹ ಛಿದ್ರ ಛಿದ್ರ ಆಗಲು ಸಾಧ್ಯವಿಲ್ಲ. ಮೇಲ್ನೋಟಕ್ಕೆ ಇದು ಪಟಾಕಿಯಿಂದ ನಡೆದ ಅವಘಡವಲ್ಲ ಎಂದು ಡಾ. ದಿನೇಶ್ ರಾವ್ ಹೇಳಿಕೆ ನೀಡಿದ್ದಾರೆ.
ಎಫ್ಎಸ್ಎಲ್ ಅಧಿಕಾರಿಗಳ ತಂಡದಿಂದ ಪರಿಶೀಲನೆ ಅಂತ್ಯವಾಗಿದೆ. ಕೆಲ ಸ್ಯಾಂಪಲ್ಗಳನ್ನ ತೆಗೆದುಕೊಂಡು ಅಧಿಕಾರಿಗಳು ಹೊರಟಿದ್ದಾರೆ. ಸ್ಫೋಟ ಸಂಭವಿಸಿದ್ದ ಗೋದಾಮಿಗೆ ಅಧಿಕಾರಿಗಳಿಂದ ಬೀಗ ಹಾಕಲಾಗಿದೆ.
ಬೆಂಗಳೂರಿನ ನ್ಯೂ ತರಗುಪೇಟೆಯಲ್ಲಿ ನಿಗೂಢ ಸ್ಫೋಟಕ್ಕೆ ಸಂಬಂಧಿಸಿ ಆರೋಪಿ ಗಣೇಶ್ ಬಾಬು ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಸೆಕ್ಷನ್ 5ಬಿ, 9 ಸ್ಫೋಟಕ ಕಾಯ್ದೆ, 304ರ ಅಡಿ ಪ್ರಕರಣ ದಾಖಲು ಮಾಡಲಾಗಿದೆ. ಗಣೇಶ್ ಬಾಬು ಹಲವು ವರ್ಷಗಳಿಂದ ಗೋದಾಮು ನಡೆಸುತ್ತಿದ್ದರು. ಮೇಲ್ನೋಟಕ್ಕೆ ಅಕ್ರಮವಾಗಿ ಪಟಾಕಿ ಸಂಗ್ರಹಿಸಿದ್ದು ದೃಢವಾಗಿದೆ. ಪಟಾಕಿಯಿಂದಲೇ ಸ್ಫೋಟಗೊಂಡಿರುವ ಶಂಕೆ ಕೂಡ ವ್ಯಕ್ತವಾಗಿದೆ. ಆದರೆ, ಈ ಬಗ್ಗೆ ಯಾವುದೇ ಅಂಶ ಇನ್ನು ಕೂಡ ಖಚಿತ ಆಗಿಲ್ಲ. ಗೋದಾಮು ಮಾಲೀಕ ಗಣೇಶ್ ಬಾಬು, ಇತರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಗೋದಾಮಿನ ಮಾಲೀಕ ಗಣೇಶ್ ಬಾಬು ಎಂಬವರನ್ನು ವಿಚಾರಣೆ ಮಾಡಲಾಗಿದೆ. ವಿ.ವಿ. ಪುರಂ ಪೊಲೀಸ್ ಠಾಣೆಯಲ್ಲಿ ಗಣೇಶ್ ಬಾಬು ವಿಚಾರಣೆ ನಡೆಸಲಾಗಿದೆ. ಡಿಸಿಪಿ, ಎಸಿಪಿ ಗಣೇಶ್ ಬಾಬು ವಿಚಾರಣೆ ಮಾಡುತ್ತಿದ್ದಾರೆ. ಸ್ಫೋಟಕ್ಕೆ ಕಾರಣ, ಯಾವ ಕಚ್ಚಾ ವಸ್ತುಗಳು ಅಲ್ಲಿತ್ತು, ಕಚ್ಚಾ ವಸ್ತುಗಳು ಎಲ್ಲಿಂದ ಬರುತ್ತಿದ್ವು ಎಂದು ವಿಚಾರಣೆ ಮಾಡಿದ್ದಾರೆ. ಆದರೆ, ಗಣೇಶ್ ಬಾಬು ಸ್ಫೋಟಕ್ಕೆ ಕಾರಣ ಗೊತ್ತಿಲ್ಲ ಎಂದಿರುವ ಬಗ್ಗೆ ತಿಳಿದುಬಂದಿದೆ.
ಗೋದಾಮಿನ ಅಕ್ಕಪಕ್ಕದಲ್ಲಿ ಜನವಸತಿ ಕಟ್ಟಡಗಳಿವೆ. ಗೋದಾಮಿನ ಕೆಳಭಾಗದಲ್ಲಿ ಟ್ರಾನ್ಸ್ಪೋರ್ಟ್ ಕಚೇರಿಯಿತ್ತು. ಗೋದಾಮಿನಲ್ಲಿ ಪಟಾಕಿ ಬಾಕ್ಸ್ಗಳನ್ನು ಸಂಗ್ರಹ ಮಾಡಿರಲಿಲ್ಲ. ಪಟಾಕಿ ತರಿಸಿ ಬೇರೆಡೆಗೆ ಕಳುಹಿಸುತ್ತಿದ್ದರು. ಇಲ್ಲೇ ಸಂಗ್ರಹ ಮಾಡಿದರೆ ನಾವು ಅವಕಾಶ ಕೊಡುತ್ತಿರಲಿಲ್ಲ. ಇಂದು ಯಾವ ಕಾರಣಕ್ಕೆ ಸ್ಫೋಟವಾಗಿದೆ ಎಂದು ಗೊತ್ತಿಲ್ಲ ಎಂದು ಗಾಯಾಳು ಮಂಜುನಾಥನ ತಂದೆ ಇಳಂಗೋವನ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು ನಿಗೂಢ ಸ್ಫೋಟ ಪ್ರಕರಣ: ಗೋದಾಮು ಮಾಲೀಕ ಪೊಲೀಸರ ವಶಕ್ಕೆ; ಒಬ್ಬ ಗಾಯಾಳು ಸ್ಥಿತಿ ಗಂಭೀರ
ಇದನ್ನೂ ಓದಿ: ನ್ಯೂತರಗುಪೇಟೆ ಸ್ಫೋಟ: ಮೃತರ ಕುಟುಂಬಕ್ಕೆ 2ಲಕ್ಷ ರೂ. ಪರಿಹಾರ ಘೋಷಿಸಿದ ಜಮೀರ್ ಅಹ್ಮದ್; ಪ್ರತ್ಯಕ್ಷದರ್ಶಿಗಳ ಮಾಹಿತಿ ಲಭ್ಯ
Published On - 5:40 pm, Thu, 23 September 21