ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ನ್ಯೂ ತರಗುಪೇಟೆ ಸ್ಫೋಟ ಕೇಸ್ ಇನ್ನೂ ನಿಗೂಢವಾಗಿಯೇ ಉಳಿದಿದೆ. ಎರಡು ತಿಂಗಳಾದರೂ ಸ್ಫೋಟಕ್ಕೆ ಕಾರಣ ಪತ್ತೆಯಾಗದ ಹಿನ್ನೆಲೆಯಲ್ಲಿ ಇದೀಗ ಸ್ಫೋಟದ ಸ್ಯಾಂಪಲ್ಸ್ ದೆಹಲಿಯ ಹೈಟೆಕ್ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗುತ್ತಿದೆ.
ಸೆಪ್ಟೆಂಬರ್ 23 ರಂದು ನ್ಯೂ ತರಗುಪೇಟೆಯಲ್ಲಿ ಸ್ಫೋಟ ಸಂಭವಿಸಿತ್ತು. ಗ್ಯಾರೇಜ್, ಟ್ರಾನ್ಸ್ಪೋರ್ಟ್ ಪಕ್ಕದ ಟೀ ಸ್ಟಾಲ್ ಧ್ವಂಸವಾಗಿತ್ತು. ಸ್ಫೋಟದಲ್ಲಿ ಮೂವರು ಮೃತಪಟ್ಟು, ಮೂವರು ಗಾಯಗೊಂಡಿದ್ದರು. ಈ ಘಟನೆ ಸಂಭವಿಸಿ ಎರಡು ತಿಂಗಳಾದರೂ ಸ್ಫೋಟಕ್ಕೆ ಕಾರಣ ಪತ್ತೆಯಾಗಿಲ್ಲ.
ವಿವಿ ಪುರಂ ಪೊಲೀಸರು ಮತ್ತೆ ಸ್ಫೋಟದ ಐದು ಸ್ಯಾಂಪಲ್ಗಳನ್ನು ರವಾನಿಸಿದ್ದಾರೆ. ಸ್ಫೋಟವಾದ ಪಟಾಕಿಯಲ್ಲಿದ್ದ ರಸಾಯನಿಕ ವಸ್ತು ಯಾವುದು ಎಂಬುದೇ ಈಗ ಸವಾಲಾಗಿದೆ. ದೆಹಲಿಯಲ್ಲಿರೋ ಹೈಟೆಕ್ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಸ್ಯಾಂಪಲ್ ರವಾನೆ ಮಾಡಲಾಗಿದೆ. ತಜ್ಞರಿಗೆ ಪತ್ರ ಬರೆದು ಪರಿಶೀಲನೆ ಕುರಿತು ಅಧಿಕೃತ ಮಾಡಿಕೊಂಡು ಖಾಕಿ ಸ್ಯಾಂಪಲ್ಸ್ ಕಳಿಸಿದೆ. ಈ ಹಿಂದೆ ಹೈದ್ರಾಬಾದ್ಗೆ ಸ್ಯಾಂಪಲ್ಸ್ ಕಳಿಸಲಾಗಿತ್ತು. ಆದ್ರೆ ಅಲ್ಲಿ ರಸಾಯನಿಕ ಅಂಶ ಪತ್ತೆಯಾಗದ ಹಿನ್ನಲೆ ಈಗ ದೆಹಲಿಗೆ ಕಳಿಸಲಾಗಿದೆ. ಹದಿನೈದು ದಿನದ ಒಳಗೆ ರಸಾಯನಿಕ ಅಂಶ ಪತ್ತೆ ಮಾಡಿ ರಿಪೋರ್ಟ್ ಕೊಡಲು ಪೊಲೀಸರು ಮನವಿ ಮಾಡಿದ್ದಾರೆ.
ಪೊಲೀಸರಿಗೆ ಕಾಡ್ತಿದೆ ಚೀನಾ ರಸಾಯನಿಕ ವಸ್ತುವಿನ ಸ್ಫೋಟದ ಅನುಮಾನ
ಇನ್ನು ಮತ್ತೊಂದೆಡೆ ಭಾರತದಲ್ಲಿ ನಿರ್ಬಂಧವಿರೋ ಚೀನಾ ಕ್ರ್ಯಾಕರ್ಸ್ ರಸಾಯನಿಕ ವಸ್ತು ಬಳಕೆಯಾಗಿರುವ ಶಂಕೆ ವ್ಯಕ್ತವಾಗಿದೆ. ಸ್ಫೋಟವಾದ ಪಟಾಕಿಯಲ್ಲಿ ಪೊಟ್ಯಾಶಿಯಂ ಪರ್ಲ ಚಲ್ಲ ರೇಟ್ ಕ್ಲೋರೈಡ್ ಅಂಶವಿದೆಯಾ ಎಂದು ಪತ್ತೆ ಮಾಡಲು ಮನವಿ ಮಾಡಿದ್ದಾರೆ. ಈಗಾಗ್ಲೇ ಆರೋಪಿತ ಗಣೇಶನನ್ನ ತಮಿಳುನಾಡಿನ ಶಿವಕಾಶಿಗೆ ಕರೆದೊಯ್ದು ಪೊಲೀಸರು ತನಿಖೆ ಕೂಡ ಮಾಡಿದ್ದಾರೆ. ಪೊಟ್ಯಾಶಿಯಂ ಪರ್ಲ ಚಲ್ಲ ರೇಟ್ ಕ್ಲೋರೈಡ್ ರಸಾಯನಿಕ ವಸ್ತು ಕೆಳಗೆ ಬಿದ್ದ ತಕ್ಷಣವೇ ಸ್ಫೋಟವಾಗುತ್ತೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: ನ್ಯೂತರಗುಪೇಟೆ ಸ್ಫೋಟ: ಮೃತರ ಕುಟುಂಬಕ್ಕೆ 2ಲಕ್ಷ ರೂ. ಪರಿಹಾರ ಘೋಷಿಸಿದ ಜಮೀರ್ ಅಹ್ಮದ್; ಪ್ರತ್ಯಕ್ಷದರ್ಶಿಗಳ ಮಾಹಿತಿ ಲಭ್ಯ