ಬೆಂಗಳೂರು: ನಮ್ಮ ಮೆಟ್ರೋದ (Namma Metro) ಬಹುನಿರೀಕ್ಷಿತ ಬೈಯಪ್ಪನಹಳ್ಳಿ-ಕೆಆರ್ ಪುರ ಮೆಟ್ರೋ ವಿಭಾಗದ 2 ಕಿಲೋಮೀಟರ್ ಮಾರ್ಗ ಜುಲೈ 15 ರೊಳಗೆ ಸಂಚಾರಕ್ಕೆ ಮುಕ್ತವಾಗಲಿದೆ. ಬೆನ್ನಿಗಾನಹಳ್ಳಿ ಬಳಿ ಬೆಂಗಳೂರು-ಸೇಲಂ ರೈಲ್ವೆ ಮಾರ್ಗದ ಮೇಲ್ಭಾಗದಲ್ಲಿ ತೆರೆದ ವೆಬ್ ಗರ್ಡರ್ ಅಳವಡಿಕೆ ಕೆಲಸ ಪೂರ್ಣಗೊಳ್ಳದ ಕಾರಣ ಸದ್ಯ ಬೈಯಪ್ಪನಹಳ್ಳಿ-ಕೆಆರ್ ಪುರ ಮಾರ್ಗ ಸಂಚಾರಕ್ಕೆ ಮುಕ್ತವಾಗಿಲ್ಲ. ಇದೀಗ ಕಾಮಗಾರಿ ತ್ವರಿತವಾಗಿ ಸಾಗುತ್ತಿದ್ದು, ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. ಜುಲೈ 15ರ ಒಳಗಾಗಿ ಮಾರ್ಗವು ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಸದ್ಯ ಬೈಯಪ್ಪನಹಳ್ಳಿ ಮತ್ತು ಜ್ಯೋತಿಪುರ (ಬೆನ್ನಿಗಾನಹಳ್ಳಿ) ಎರಡೂ ಕಡೆಯಿಂದ ಟ್ರ್ಯಾಕ್ ಅಳವಡಿಕೆ ಪ್ರಗತಿಯಲ್ಲಿದೆ ಮತ್ತು ಈ ತಿಂಗಳ ಅಂತ್ಯದ ವೇಳೆಗೆ ಇದು ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ (MD) ಅಂಜುಮ್ ಪರ್ವೇಜ್ ತಿಳಿಸಿರುವುದಾಗಿ ‘ಮನಿ ಕಂಟ್ರೋಲ್’ ವರದಿ ಮಾಡಿದೆ.
ಟ್ರಾಕ್ಷನ್, ಸಿಗ್ನಲಿಂಗ್ ಮತ್ತು ಇತರ ಸಂಬಂಧಿತ ಕೆಲಸಗಳನ್ನು ಜೂನ್ 15 ರೊಳಗೆ ಪೂರ್ಣಗೊಳಿಸಲಾಗುವುದು. ಬಳಿಕ ಪ್ರಾಯೋಗಿಕ ಸಂಚಾರ ಆರಂಭಗೊಳ್ಳಳಿದೆ. ದೂರವು ಕಡಿಮೆ ಇರುವುದರಿಂದ ಪ್ರಾಯೋಗಿಕ ಸಂಚಾರ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಬಹುದು. ಕೊನೆಯಲ್ಲಿ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರನ್ನು ಪರಿಶೀಲನೆಗೆ ಆಹ್ವಾನಿಸಲಾಗುತ್ತದೆ. ಕೆಆರ್ ಪುರ-ಬೈಯಪ್ಪನಹಳ್ಳಿ ವಿಭಾಗದ ವಾಣಿಜ್ಯ ಕಾರ್ಯಾಚರಣೆಯನ್ನು ಜುಲೈ 15ರೊಳಗೆ ಪ್ರಾರಂಭಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಜ್ಯೋತಿಪುರದಲ್ಲಿ (ಕೆಆರ್ ಪುರ ಮತ್ತು ಬೈಯಪ್ಪನಹಳ್ಳಿ ನಿಲ್ದಾಣಗಳ ನಡುವೆ) ನಿಲ್ದಾಣದ ಕಾಮಗಾರಿಯನ್ನು ಪೂರ್ಣಗೊಳಿಸಲು ನಾವು ಈಗಾಗಲೇ ಒಪ್ಪಂದ ಮಾಡಿಕೊಂಡಿರುವ ಸಂಸ್ಥೆ ಸ್ಟಾರ್‌ವರ್ತ್ ಜೊತೆಗೆ ಹೊಸ ಗುತ್ತಿಗೆದಾರ ಗೋದ್ರೇಜ್ ಜತೆಗೂ ಒಪ್ಪಂದ ಮಾಡಿಕೊಂಡಿದ್ದೇವೆ. ರಸ್ತೆಯ ಎರಡೂ ಬದಿಗಳಲ್ಲಿ ನಿಲ್ದಾಣದ ಕೆಲಸವನ್ನು ಏಕಕಾಲದಲ್ಲಿ ನಡೆಸಲಾಗುತ್ತಿದೆ ಮತ್ತು ಇಂಟೀರಿಯರ್ ಕೆಲಸವು ಮುಕ್ತಾಯದ ಹಂತದಲ್ಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 25ರಂದು ವೈಟ್‌ಫೀಲ್ಡ್ ಮತ್ತು ಕೆಆರ್ ಪುರ ನಡುವಣ ನಮ್ಮ ಮೆಟ್ರೋ ನೇರಳೆ ಮಾರ್ಗವನ್ನು ಲೋಕಾರ್ಪಣೆ ಮಾಡಿದ್ದರು. ಆದರೆ ಬೆನ್ನಿಗಾನಹಳ್ಳಿ ತನಕ ಮೆಟ್ರೋ ಸೇವೆ ವಿಸ್ತರಣೆಗೆ ಕಾಮಗಾರಿ ಪೂರ್ಣಗೊಳ್ಳದಿರುವುದು ಅಡ್ಡಿಯಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:53 pm, Tue, 16 May 23