Bengaluru Bomb Blast Timeline: ಬೆಂಗಳೂರಿನಲ್ಲಿ ಸಂಭವಿಸಿವೆ ಕೆಲವು ಬಾಂಬ್ ಸ್ಫೋಟ: ಇಲ್ಲಿದೆ ವಿವರ
Bengaluru Bomb Blasts: ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ ಸಂಭವಿಸಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಕೆಲವು ಸ್ಪೋಟ ಪ್ರಕರಣಗಳು ನಡೆದಿವೆ. ಕೆಲವು ಕಡಿಮೆ ತೀವ್ರತೆಯ ಸ್ಪೋಟವಾಗಿದ್ದರೆ ಇನ್ನು ಕೆಲವು ಪ್ರಬಲ ಸ್ಫೋಟಗಳಾಗಿದ್ದವು. ಅದೃಷ್ಟವಶಾತ್, ಹೆಚ್ಚಿನ ಸಾವು ನೋವು ಸಂಭವಿಸಿಲ್ಲ. ಬೆಂಗಳೂರಿನ ಬಾಂಬ್ ಸ್ಫೋಟ ಪ್ರಕರಣಗಳ ಹಿನ್ನೋಟ ಇಲ್ಲಿದೆ.
ಬೆಂಗಳೂರು, ಮಾರ್ಚ್ 2: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟದ (Bengaluru Rameshwaram Cafe Bomb Blast) ಸಂಚುಕೋರರನ್ನು ಪತ್ತೆ ಹಚ್ಚುವ ಕಾರ್ಯ ಭರದಿಂದ ಸಾಗುತ್ತಿದೆ. ಈ ಮಧ್ಯೆ ಘಟನೆಯ ತನಿಖೆಯನ್ನು ಸರ್ಕಾರ ಸಿಸಿಬಿಗೆ (CCB Police) ವಹಿಸಿದೆ. ಘಟನಾ ಸ್ಥಳಕ್ಕೆ ಈಗಾಗಲೇ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದು ಮಾಹಿತಿ ಕಲೆ ಹಾಕಿದ್ದಾರೆ. ಜೊತೆಗೆ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೂ ಭೇಟಿ ನೀಡಿ ಅವರ ಸ್ಥಿತಿಗತಿ ವಿಚಾರಿಸಿದ್ದಾರೆ. ಗಾಯಾಳುಗಳ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಅವರು ಭರವಸೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸ್ಫೋಟ ಸಂಭವಿಸಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಕೆಲವು ಬಾರಿ ನಗರದ ವಿವಿಧ ಪ್ರದೇಶಗಳಲ್ಲಿ ಬಾಂಬ್ ಸ್ಪೋಟಗಳು ಸಂಭವಿಸಿವೆ. 2008ರ ನಂತರ ಬೆಂಗಳೂರಿನಲ್ಲಿ ಈವರೆಗೆ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣಗಳ ಕುರಿತ ಮಾಹಿತಿ ಇಲ್ಲಿದೆ.
2008ರಲ್ಲಿ ಸಂಭವಿಸಿತ್ತು ಸರಣಿ ಸ್ಫೋಟ
ಬೆಂಗಳೂರಿನ ಮಡಿವಾಳ, ನಾಯಂಡಹಳ್ಳಿ, ಆಡುಗೋಡಿ ಸೇರಿದಂತೆ ವಿವಿಧ ಭಾಗಗಳಲ್ಲಿ 2008 ರ ಜುಲೈ 25ರಂದು 9 ಬಾಂಬ್‌ಗಳು ಸ್ಫೋಟಗೊಂಡಿದ್ದವು. ಅವು ಕಡಿಮೆ ತೀವ್ರತೆಯ ನಾಡ ಬಾಂಬ್‌ಗಳಾಗಿದ್ದವು. ಘಟನೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟು ಮತ್ತು 20 ಮಂದಿ ಗಾಯಗೊಂಡಿದ್ದರು.
ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (ಸಿಮಿ) ಅಥವಾ ಲಷ್ಕರ್ ಎ ತೊಯ್ಬಾ (ಎಲ್ಇಟಿ) ಉಗ್ರ ಸಂಘಟನೆಗಳು ದಾಳಿಯ ಸಂಚು ರೂಪಿಸಿರಬಹುದು ಎಂದು ಅಂದಾಜಿಸಲಾಗಿತ್ತು.
2010 ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣ ಆವರಣದಲ್ಲಿ ಸ್ಫೋಟ
ಐಪಿಎಲ್ ಪಂದ್ಯಾವಳಿ ನಡೆಯುವುದಕ್ಕೂ ಮುನ್ನ 2010 ರ ಏಪ್ರಿಲ್ 17ರಂದು ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಬಾಂಬ್ ಸ್ಫೋಟಗೊಂಡಿತ್ತು. ಅದೃಷ್ಟವಶಾತ್, ಘಟನೆಯಲ್ಲಿ ಸಾವು-ನೋವು ಸಂಭವಿಸಿರಲಿಲ್ಲ. ಆದರೆ, ಪ್ರೇಕ್ಷಕರಲ್ಲಿ ಆತಂಕಕ್ಕೆ ಕಾರಣವಾಗಿತ್ತು.
ಮಲ್ಲೇಶ್ವರದಲ್ಲಿ 2013ರಲ್ಲಿ ಸಂಭವಿಸಿತ್ತು ಸ್ಫೋಟ
ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿ ಬಳಿ 2013ರ ಏಪ್ರಿಲ್ 17ರಂದು ಕಡಿಮೆ ತೀವ್ರತೆಯ ಬಾಂಬ್ ಸ್ಫೋಟಗೊಂಡು 16 ಮಂದಿ ಗಾಯಗೊಂಡಿದ್ದರು. ಬಿಜೆಪಿ ನಾಯಕ ದಿವಂಗತ ಅನಂತ್ ಕುಮಾರ್ ಅವರ ಚುನಾವಣಾ ರ್ಯಾಲಿಗೆ ಸ್ವಲ್ಪ ಮೊದಲು ಸ್ಫೋಟ ಸಂಭವಿಸಿತ್ತು.
2014ರಲ್ಲಿ ಚರ್ಚ್ಸ್ಟ್ರೀಟ್ನಲ್ಲಿ ಸಂಭವಿಸಿತ್ತು ಸ್ಫೋಟ
ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿ 2014 ರ ಡಿಸೆಂಬರ್ 28 ರಂದು ಬಾಂಬ್ ಸ್ಫೋಟಗೊಂಡು ಒಬ್ಬರು ಮೃತಪಟ್ಟಿದ್ದರು. ಹಲವರು ಗಾಯಗೊಂಡಿದ್ದರು.
ಇದನ್ನೂ ಓದಿ: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣದ ತನಿಖೆ ಸಿಸಿಬಿಗೆ ವರ್ಗಾವಣೆ
2020 ಶಾಂತಿನಗರ ಸ್ಫೋಟ
2020ರಲ್ಲಿ ಬೆಂಗಳೂರಿನ ಶಾಂತಿ ನಗರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವೊಂದರ ವೇಳೆ ಕಡಿಮೆ ತೀವ್ರತೆಯ ಸ್ಫೋಟ ಸಂಭವಿಸಿತ್ತು. ಕಾಂಗ್ರೆಸ್ ಶಾಸಕ ಎನ್ಎ ಹ್ಯಾರಿಸ್ ಹಾಗೂ ಇತರ ಮೂವರು ಘಟನೆಯಲ್ಲಿ ಗಾಯಗೊಂಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ