ಕಾವೇರಿ ನೀರು ಸಂಪರ್ಕ ಪಡೆಯುವುದಕ್ಕೂ ಇಎಂಐ ಆಪ್ಷನ್! ಬೆಂಗಳೂರು ಜಲಮಂಡಳಿ ಹೊಸ ಪ್ರಯೋಗ

ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸುವಾಗ, ಆನ್​ಲೈನ್​ನಲ್ಲಿ ಏನಾದರೂ ಖರೀದಿಸಿದಾಗ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ವಸ್ತುಗಳನ್ನು ಕೊಂಡುಕೊಂಡಾಗ ಅವುಗಳು ಇಎಂಐ ಪಾವತಿ ಆಯ್ಕೆ ನೀಡುವುದು ಗೊತ್ತೇ ಇದೆ. ಆದರೆ, ಕಾವೇರಿ ನೀರು ಸಂಪರ್ಕ ಪಡೆಯುವುದಕ್ಕೂ ಅಂಥದ್ದೊಂದು ಆಯ್ಕೆ ನೀಡುವ ಪ್ರಯೋಗಕ್ಕೆ ಬೆಂಗಳೂರು ಜಲ ಮಂಡಳಿ ಮುಂದಾಗಿರುವ ಬಗ್ಗೆ ವರದಿಯಾಗಿದೆ.

ಕಾವೇರಿ ನೀರು ಸಂಪರ್ಕ ಪಡೆಯುವುದಕ್ಕೂ ಇಎಂಐ ಆಪ್ಷನ್! ಬೆಂಗಳೂರು ಜಲಮಂಡಳಿ ಹೊಸ ಪ್ರಯೋಗ
ಬೆಂಗಳೂರು ಜಲಮಂಡಳಿ

Updated on: May 08, 2025 | 9:31 AM

ಬೆಂಗಳೂರು, ಮೇ 8: ದೊಡ್ಡ ದೊಡ್ಡ ಅಪಾರ್ಟ್​​ಮೆಂಟ್​ಗಳು, ವಸತಿ ಕಟ್ಟಡಗಳು ಕಾವೇರಿ ನೀರು (Cauvery Water) ಸಂಪರ್ಕ ಪಡೆಯಲು ಇರುವ ಅಡ್ಡಿ ಆತಂಕಗಳನ್ನು ನಿವಾರಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಮಹತ್ವದ ಕ್ರಮಕ್ಕೆ ಮುಂದಾಗಿದೆ. ಅಪಾರ್ಟ್​​ಮೆಂಟ್​ಗಳು ಹಾಗೂ ವಾಣಿಜ್ಯ ಸಂಸ್ಥೆಗಳು ಕಾವೇರಿ ನೀರು ಸಂಪರ್ಕ ಶುಲ್ಕದ ಕೇವಲ ಶೇ 20 ಅನ್ನು ಡೌನ್​ ಪೇಮೆಂಟ್ ಮಾಡಿ ಉಳಿದ ಮೊತ್ತವನ್ನು ಇಎಂಐ ಆಗಿ ಪರಿವರ್ತಿಸುವ ಅವಕಾಶ ನೀಡಲು ಮುಂದಾಗಿದೆ ಎಂದು ವರದಿಯಾಗಿದೆ. ಈ ಶುಕ್ರವಾರದಿಂದಲೇ ಹೊಸ ಯೋಜನೆ ಜಾರಿಗೆ ಬರಲಿದ್ದು, ಸುಮಾರು 3,500 ಅಪಾರ್ಟ್‌ಮೆಂಟ್ ಸಂಕೀರ್ಣಗಳು ಮತ್ತು ಒಂದು ಲಕ್ಷ ಇತರ ಕಟ್ಟಡಗಳಿಗೆ ಪ್ರಯೋಜನವಾಗಲಿದೆ ಎನ್ನಲಾಗಿದೆ.

ಹೊಸ ಯೋಜನೆಯಂತೆ, ಕಾವೇರಿ ನೀರಿನ ಸಂಪರ್ಕ ಪಡೆಯಲು ಶೇ 20 ರಷ್ಟು ಮೊತ್ತವನ್ನು ಡೌನ್​ ಪೇಮೆಂಟ್ ಮಾಡಬೇಕಾಗುತ್ತದೆ. ಉಳಿದ ಮೊತ್ತವನ್ನು 12 ಇಎಂಐಗಳಲ್ಲಿ ಪಾವತಿಸಲು ಅವಕಾಶ ಒದಗಿಸಲಾಗುತ್ತದೆ ಎಂದು ಜಲ ಮಂಡಳಿ ಮೂಲಗಳನ್ನು ಉಲ್ಲೇಖಿಸಿ ‘ಡೆಕ್ಕನ್ ಹೆರಲ್ಡ್’ ವರದಿ ಮಾಡಿದೆ. ಈ ಉಪಕ್ರಮದಿಂದ ಜಲಮಂಡಳಿ ಸುಮಾರು 800 ಕೋಟಿ ರೂ. ಆದಾಯ ಗಳಿಸುವ ನಿರೀಕ್ಷೆಯಿದೆ.

ಕಾವೇರಿ ಐದನೇ ಹಂತದಲ್ಲಿ ಗುರಿ ಮುಟ್ಟದ ಜಲಮಂಡಳಿ

2008 ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಗೆ ಸೇರಿಸಲಾದ 110 ಹಳ್ಳಿಗಳಿಗೆ ಕಾವೇರಿ ನೀರು ಪೂರೈಕೆ ಮಾಡಲು 2024 ರ ಅಕ್ಟೋಬರ್​​ನಲ್ಲಿ ಜಲಮಂಡಳಿ ಕಾವೇರಿ ಐದನೇ ಹಂತದ ಯೋಜನೆಯನ್ನು ಆರಂಭಿಸಿತು. ಈ ಯೋಜನೆಯಡಿ 3.5 ದಷ್ಟು ನೀರಿನ ಸಂಪರ್ಕ ಒದಗಿಸಿಕೊಡುವ ನಿರೀಕ್ಷೆ ಇತ್ತು. ಆದರೆ, ಈವರೆಗೆ ಸುಮಾರು 98,000 ಕಟ್ಟಡಗಳು ಮಾತ್ರ ಕಾವೇರಿ ನೀರಿನ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿವೆ.

ಇದನ್ನೂ ಓದಿ
ಮೆಟ್ರೋ ನಿಲ್ದಾಣದಲ್ಲಿ ಕ್ಯೂ.ಆರ್ ಟಿಕೆಟ್ ಯಂತ್ರಗಳ ವ್ಯವಸ್ಥೆ
ಬೆಂಗಳೂರು ಸೇರಿ ಕರ್ನಾಟಕದ 15ಕ್ಕೂ ಅಧಿಕ ಜಿಲ್ಲೆಗಳಲ್ಲಿ ಇಂದು ಸಾಧಾರಣ ಮಳೆ
ಸಿಎಂ ವಿರುದ್ಧ ಮುಡಾ ಕೇಸ್: ಕಾಲಾವಕಾಶ ಕೋರಿದ ಲೋಕಾಯುಕ್ತ ಪೊಲೀಸ್
ಥೂ...ಛೀ..ಬೆಂಗಳೂರಿನಲ್ಲಿ ಬೆತ್ತಲೆಯಾಗಿ ಓಡಾಡಿದ ಯುವತಿ, ವಿಡಿಯೋ ವೈರಲ್

ಕಾವೇರಿ ನೀರು ಸಂಪರ್ಕ ಪಡೆಯುವಂತೆ ಉತ್ತೇಜಿಸಲು ಕ್ರಮ

ಹೆಚ್ಚಿನ ಆಸ್ತಿ ಮಾಲೀಕರು ಕಾವೇರಿ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸುವಂತೆ ಪ್ರೋತ್ಸಾಹಿಸಲು ಈ ಇಎಂಐ ಯೋಜನೆ ಜಾರಿಗೊಳಿಸಲಾಗುತ್ತಿದೆ. ಇದರಿಂದ ಆಸ್ತಿ ಮಾಲೀಕರು ಮತ್ತು ಜಲಮಂಡಳಿ ಇಬ್ಬರಿಗೂ ನೆರವಾಗಲಿದೆ. ಗ್ರಾಹಕರು ಹಣಕಾಸಿನ ಬಗ್ಗೆ ಹೆಚ್ಚು ಚಿಂತಿಸಬೇಕಾಗಿಲ್ಲ ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ವಿ ತಿಳಿಸಿರುವುದಾಗಿಯೂ ‘ಡೆಕ್ಕನ್ ಹೆರಾಲ್ಡ್’ ವರದಿ ಉಲ್ಲೇಖಿಸಿದೆ.

ಕಾವೇರಿ ನೀರಿನ ಸಂಪರ್ಕಗಳ ಸಂಖ್ಯೆ ಹೆಚ್ಚಿಸುವ ಮೂಲಕ ಬೋರ್‌ವೆಲ್‌ಗಳಿಗೆ ಕಡಿವಾಣ ಹಾಕಬಹುದಾಗಿದೆ. ಆ ಮೂಲಕ ಅಂತರ್ಜಲದ ಅತಿಯಾದ ಬಳಕೆ ತಡೆಯಬಹುದಾಗಿದ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಇನ್ಮುಂದೆ ಆರ್​​ಒ ಪ್ಲಾಂಟ್​​ಗಳ ನಿರ್ವಹಣೆ BWSSB ಸುಪರ್ದಿಗೆ: ಡಿಕೆ ಶಿವಕುಮಾರ್​ ಸೂಚನೆ

ಗ್ರಾಹಕರು ಡೌನ್ ಪೇಮೆಂಟ್ ಮಾಡಿದ ನಂತರ, 20 ದಿನಗಳಲ್ಲಿ ಕಾವೇರಿ ನೀರಿನ ಸಂಪರ್ಕ ದೊರೆಯುತ್ತದೆ ಎಂದು ಜಲಮಂಡಳಿ ತಿಳಿಸಿದೆ. ಸಂಪರ್ಕ ಶುಲ್ಕಗಳು ತುಂಬಾ ಹೆಚ್ಚಾಗಿದ್ದು, ನಿವಾಸಿಗಳ ಮೇಲೆ ಹೊರೆ ಬೀಳುತ್ತಿದೆ ಎಂದು ಅನೇಕ ಅಪಾರ್ಟ್‌ಮೆಂಟ್​ಗಳು ಈ ಹಿಂದೆ ದೂರು ನೀಡಿದ್ದವು. ಪರಿಣಾಮವಾಗಿ, ಹಲವಾರು ಮಂದಿ ಕಾವೇರಿ ನೀರಿನ ಸಂಪರ್ಕಗಳಿಗೆ ಅರ್ಜಿ ಸಲ್ಲಿಸುವುದನ್ನು ವಿಳಂಬ ಮಾಡಿದ್ದರು. ಇಎಂಐ ಯೋಜನೆಯಿಂದ ಅಂತಹ ಅನೇಕ ಅಪಾರ್ಟ್‌ಮೆಂಟ್‌ಗಳಿಗೆ ಪ್ರಯೋಜನವಾಗಲಿದೆ ಎಂದು ಬೆಂಗಳೂರು ಅಪಾರ್ಟ್‌ಮೆಂಟ್‌ಗಳ ಒಕ್ಕೂಟದ ಆಡಳಿತ ಮಂಡಳಿ ಸದಸ್ಯ ಕೆ ಅರುಣ್ ಕುಮಾರ್ ಹೇಳಿರುವುದಾಗಿಯೂ ವರದಿ ಉಲ್ಲೇಖಿಸಿದೆ.

ಕರ್ನಾಟಕದ ಇನ್ನಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ