ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ: ಅಪಘಾತದ ಬೆನ್ನಲ್ಲೇ ಹೆದ್ದಾರಿ ಪ್ರಾಧಿಕಾರ ಮಹತ್ವದ ಕ್ರಮ

|

Updated on: Mar 04, 2025 | 9:51 AM

ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್‌ವೇಯಲ್ಲಿ ದ್ವಿಚಕ್ರ ವಾಹನಗಳ ಸಂಚಾರವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ನಿಷೇಧಿಸಿದೆ. ರಸ್ತೆ ಸುರಕ್ಷತೆಯೇ ಈ ಕ್ರಮಕ್ಕೆ ಮುಖ್ಯ ಕಾರಣವಾಗಿದೆ. ಕೋಲಾರದಲ್ಲಿ ಸಂಭವಿಸಿದ ಭೀಕರ ಅಪಘಾತದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ದ್ವಿಚಕ್ರ ವಾಹನ ಸಂಚಾರ ನಿಷೇಧ ಉಲ್ಲಂಘನೆ ಬಗ್ಗೆ ಪ್ರಾಧಿಕಾರ ಕಠಿಣ ಕ್ರಮ ಕೈಗೊಳ್ಳಲಿದ್ದು, ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಗಸ್ತು ಕಾರ್ಯಾಚರಣೆಗೆ ಸೂಚನೆ ನೀಡಿದೆ.

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ: ಅಪಘಾತದ ಬೆನ್ನಲ್ಲೇ ಹೆದ್ದಾರಿ ಪ್ರಾಧಿಕಾರ ಮಹತ್ವದ ಕ್ರಮ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಮಾರ್ಚ್ 4: ಇತ್ತೀಚೆಗೆ ಸಂಚಾರಕ್ಕೆ ಮುಕ್ತವಾದ (ಕರ್ನಾಟಕ ವ್ಯಾಪ್ತಿಯಲ್ಲಿ ಮಾತ್ರ) ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಯಲ್ಲಿ ದ್ವಿಚಕ್ರ ವಾಹನಗಳ ಪ್ರವೇಶ ನಿಷೇಧಿಸಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಆದೇಶ ಹೊರಡಿಸಿದೆ. ರಸ್ತೆ ಸುರಕ್ಷತೆಯನ್ನು ಸುಧಾರಿಸುವ ಸಲುವಾಗಿ, ಸದ್ಯ ಕರ್ನಾಟಕ ಭಾಗದಲ್ಲಿ ಈ ನಿಷೇಧ ಜಾರಿಗೊಳಿಸಲಾಗಿದೆ ಎಂದು ವರದಿಯಾಗಿದೆ. ಕೋಲಾರದ ಬಂಗಾರಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದರು. ಆ ನಂತರ ಎನ್​ಎಚ್​ಎಐ ಈ ನಿರ್ಧಾರ ಕೈಗೊಂಡಿದೆ.

ನಿರ್ಬಂಧವನ್ನು ತಕ್ಷಣದಿಂದಲೇ ಜಾರಿಗೊಳಿಸಲು, ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಬೈಕುಗಳು ಎಕ್ಸ್‌ಪ್ರೆಸ್‌ವೇ ಪ್ರವೇಶಿಸುವುದನ್ನು ತಡೆಯಲು ಗಸ್ತು ತಂಡಗಳಿಗೆ ಹೆದ್ದಾರಿ ಪ್ರಾಧಿಕಾರ ಸೂಚನೆ ನೀಡಿದೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ಅಷ್ಟೇ ಅಲ್ಲದೆ, ದ್ವಿಚಕ್ರ ವಾಹನ ನಿಷೇಧದ ಬಗ್ಗೆ ಮಾಹಿತಿ ನೀಡಲು ಸೈನ್‌ಬೋರ್ಡ್‌ಗಳನ್ನು ಅಳವಡಿಸಲಾಗುವುದು ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯೊಬ್ಬರು ದೃಢಪಡಿಸಿರುವುದಾಗಿ ವರದಿ ಉಲ್ಲೇಖಿಸಿದೆ.

ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ನೀಡಿದ ಮಾಹಿತಿಯ ಪ್ರಕಾರ, ಭಾನುವಾರ ದ್ವಿಚಕ್ರ ವಾಹನವೊಂದು ಎಕ್ಸ್‌ಪ್ರೆಸ್‌ವೇಯಲ್ಲಿ ರಾಂಗ್ ಸೈಡ್​​ನಿಂದ ಬಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿ ನಾಲ್ವರು ಸಾವನ್ನಪ್ಪಿದ್ದಾರೆ.

ಕಾನೂನಿನಲ್ಲಿ ಏನಿದೆ? ಎಕ್ಸ್​ಪ್ರೆಸ್ ವೇಯಲ್ಲಿ ಬೈಕ್​ ಸಂಚಾರಕ್ಕೆ ಅನುಮತಿ ನೀಡಬಹುದೇ?

ಕಾನೂನಿನ ಪ್ರಕಾರ, ದೇಶಾದ್ಯಂತ ಎಕ್ಸ್‌ಪ್ರೆಸ್‌ವೇಗಳಲ್ಲಿ ದ್ವಿಚಕ್ರ ವಾಹನಗಳನ್ನು ಅನುಮತಿಸಲಾಗುವುದಿಲ್ಲ. ಈ ರಸ್ತೆಗಳನ್ನು ಅತಿ ವೇಗದ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾಗಿದೆ, ವೇಗದ ಮಿತಿ ಗಂಟೆಗೆ 120 ಕಿ.ಮೀ. ವರೆಗೆ ಇರುತ್ತದೆ. ಎಕ್ಸ್​​ಪ್ರೆಸ್​​ ವೇಗಳಲ್ಲಿ ದ್ವಿಚಕ್ರ ವಾಹನಗಳ ಸಂಚಾರವು ಸವಾರರಿಗೆ ಮಾತ್ರವಲ್ಲದೆ ಇತರ ರಸ್ತೆ ಬಳಕೆದಾರರಿಗೂ ತೀವ್ರ ಅಪಾಯವನ್ನುಂಟುಮಾಡುತ್ತದೆ. ಇದನ್ನು ತಪ್ಪಿಸಲು ಎಕ್ಸ್​ಪ್ರೆಸ್​ ವೇಯಲ್ಲಿ ಸಂಚರಿಸದಂತೆ ಬೈಕ್ ಸವಾರರನ್ನು ಆಗ್ರಹಿಸುತ್ತೇವೆ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಹೇಳಿದ್ದಾರೆ.

ಇತ್ತೀಚೆಗೆ ಸಂಚಾರಕ್ಕೆ ಮುಕ್ತವಾಗಿದ್ದ ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್‌ವೇ

ಒಟ್ಟು 260 ಕಿಲೋಮೀಟರ್ ಉದ್ದದ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಯನ್ನು ಕರ್ನಾಟಕ ವ್ಯಾಪ್ತಿಯಲ್ಲಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಕರ್ನಾಟಕದೊಳಗೆ 71 ಕಿಲೋಮೀಟರ್ ಕಾಮಗಾರಿ ಪೂರ್ಣಗೊಂಡಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಮೂಲಕ ಹಾದುಹೋಗುವ ಹೆದ್ದಾರಿಯ ಉಳಿದ ಭಾಗದ ಕಾಮಗಾರಿ ಈ ವರ್ಷದ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಕರ್ನಾಟಕ ವ್ಯಾಪ್ತಿಯಲ್ಲಿ ಎಕ್ಸ್‌ಪ್ರೆಸ್‌ವೇ ಹೊಸಕೋಟೆ, ಮಾಲೂರು ಮತ್ತು ಕೆಜಿಎಫ್‌ನಂತಹ ಪ್ರಮುಖ ಸ್ಥಳಗಳಿಗೆ ಸಂಪರ್ಕವನ್ನು ಒದಗಿಸಿದೆ.

ಇದನ್ನೂ ಓದಿ: ಹೊಸ ಹೈವೇನಲ್ಲಿ ನಾಲ್ವರು ಬಲಿ: ಕಾರಿನ ಏರ್ ಬ್ಯಾಗ್​ ಓಪನ್ ಆಗಿದ್ರೂ ಉಳಿಯಲಿಲ್ಲ ಜೀವಗಳು

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ನಾಲ್ಕು ಪಥಗಳನ್ನು ಹೊಂದಿದ್ದು, ಕರ್ನಾಟಕದಲ್ಲಿ ಎರಡು ಟೋಲ್ ಪ್ಲಾಜಾಗಳನ್ನು ಹೊಂದುವ ಸಾಧ್ಯತೆಯಿದೆ. ಬೈಕ್‌ಗಳ ಜೊತೆಗೆ, ಟ್ರ್ಯಾಕ್ಟರ್‌ಗಳು ಮತ್ತು ಆಟೋಗಳು ಸಹ ಮುಖ್ಯ ಎಕ್ಸ್‌ಪ್ರೆಸ್‌ವೇಯನ್ನು ಬಳಸುವುದನ್ನು ನಿಷೇಧಿಸಲಾಗಿದೆ.

ಹೆದ್ದಾರಿ ಪ್ರಾಧಿಕಾರ ಇಂತಹ ಕ್ರಮ ಕೈಗೊಂಡಿರುವುದು ಇದೇ ಮೊದಲಲ್ಲ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಸರಣಿ ಅಪಘಾತಗಳ ನಂತರ, ಅದರ ಮುಖ್ಯ ಲೇನ್‌ಗಳಲ್ಲಿ ದ್ವಿಚಕ್ರ ವಾಹನಗಳು ಮತ್ತು ಆಟೋರಿಕ್ಷಾಗಳ ಸಂಚಾರ ನಿಷೇಧಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ