ಹೊಸ ಹೈವೇನಲ್ಲಿ ನಾಲ್ವರು ಬಲಿ: ಕಾರಿನ ಏರ್ ಬ್ಯಾಗ್ ಓಪನ್ ಆಗಿದ್ರೂ ಉಳಿಯಲಿಲ್ಲ ಜೀವಗಳು
ಕೋಲಾರದ ಬಳಿ ಹೊಸದಾಗಿ ಆರಂಭವಾದ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಒಂದೇ ಕುಟುಂಬದ ಎಂಟು ಜನರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ಸವಾರನ ಅಜಾಗರೂಕತೆಯಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಗರ್ಭಿಣಿ ಮಹಿಳೆಯೊಬ್ಬರು ಸೇರಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕೋಲಾರ, ಮಾರ್ಚ್ 03: ಅವರೆಲ್ಲಾ ಆಸ್ಪತ್ರೆಯಲ್ಲಿದ್ದ ಸಂಬಂಧಿಯೊಬ್ಬರ ಯೋಗಕ್ಷೇಮ ವಿಚಾರಿಸಿಕೊಂಡು ವಾಪಸಾಗುತ್ತಿದ್ದ ಕುಟುಂಬದವರು. ಇತ್ತೀಚೆಗಷ್ಟೆ ಆರಂಭವಾಗಿದ್ದ ಸ್ಪೀಡ್ ಹೈವೆಯಲ್ಲಿ ಎದುರಿಗೆ ಬಂದ ಯಮ ಸ್ವರೂಪಿ ಬೈಕ್ ಸವಾರ ಭೀಕರ ಅಪಘಾತಕ್ಕೆ (accident) ಕಾರಣವಾಗಿದ್ದ. ಬೈಕ್ ಸವಾರ ಮತ್ತು ಒಂದೇ ಕುಟುಂಬದ ಎರಡು ಕಂದಮ್ಮಗಳು ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದರೆ, ನಾಲ್ವರ ಸ್ಥಿತಿ ಗಂಭಿರವಾಗಿದೆ.
ಒಂದೇ ಕುಟುಂಬದ ನಾಲ್ವರ ದಾರುಣ ಅಂತ್ಯ
ಇನ್ನೊವಾ ಕಾರ್‌ಗೆ ಬೈಕ್ ಡಿಕ್ಕಿಯಾದ ಹಿನ್ನೆಲೆ ಒಂದೇ ಕುಟುಂಬದ ನಾಲ್ಕು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದರೆ ನಾಲ್ಕು ಜನರು ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೈಕ್ ಸವಾರ ದೊಡ್ಡೂರು ಗ್ರಾಮದ ಶ್ರೀನಾಥ್ ಎನ್ನಲಾಗಿದೆ. ಎಂಟು ತಿಂಗಳ ತುಂಬು ಗರ್ಭಿಣಿ ಸುಷ್ಮಿತಾ ಹೊಟ್ಟೆಯಲ್ಲಿದ್ದ ಮಗು ಸಹ ಸಾವನ್ನಪ್ಪಿದೆ. ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಕಮ್ಮಸಂದ್ರ ಸಂತೋಷ್ ಕುಟುಂಬ ಆಸ್ಪತ್ರೆಯಲ್ಲಿದ್ದ ಸಂಬಂಧಿಯನ್ನ ಮಾತನಾಡಿಸಿಕೊಂಡು ವಾಪಸ್ ಆಗುತ್ತಿದ್ದ ವೇಳೆ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು ಕುಪ್ಪನಹಳ್ಳಿ ಬಳಿ ಮಧ್ಯೆ ರಾತ್ರಿ ಭೀಕರ ಅಪಘಾತ ಸಂಭವಿಸಿದೆ.
ಇದನ್ನೂ ಓದಿ: ಕೋಲಾರ: ಚೆನ್ನೈ-ಬೆಂಗಳೂರು ಹೈವೆಯಲ್ಲಿ ಅಪಘಾತ, ಮಗು ಸೇರಿ ನಾಲ್ವರು ಸ್ಥಳದಲ್ಲೇ ಸಾವು
ಇನ್ನೋವಾ ಕಾರಿನಲ್ಲಿದ್ದ ಸಂತೋಷ್ ಮಾವ ಮಹೇಶ (55), ಮಗಳು ಉದ್ವಿತ (3), ತಾಯಿ ರತ್ನಮ್ಮ (60) ಹಾಗೂ ಬೈಕ್ ಸವಾರ ಸಾವನ್ನಪ್ಪಿದ್ದಾರೆ. ಸದ್ಯ ಸಂತೋಷ್ ಪತ್ನಿ ಸುಶ್ಮಿತಾ ಹಾಗೂ ಮಗ ವಿರಾಟ್, ಅತ್ತೆ ಸುಜಾತ ಹಾಗೂ ಇನ್ನೋವಾ ಕಾರ್ ಚಾಲಕ ಅರುಣ್ ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಬೆಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಭೀಕರ ಅಪಘಾತದಿಂದ ದಿಕ್ಕೆ ತೋಚದಂತ್ತಾಗಿರುವ ಕುಟುಂಬ ಆಘಾತಕ್ಕೆ ಒಳಗಾಗಿದೆ. ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಬೈಕ್ ಸವಾರನ ಎಡವಟ್ಟು
ಕೋಟಿಲಿಂಗ ಕ್ಷೇತ್ರದಲ್ಲಿ ಮ್ಯಾನೇಜರ್ ಆಗಿರುವ ಸಂತೋಷ್ ನಿನ್ನೆ ಹುಟ್ಟುಹಬ್ಬ ಇದ್ದ ಹಿನ್ನೆಲೆಯಲ್ಲಿ ಸ್ನೇಹಿತರೊಂದಿಗೆ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಲು ಕಮ್ಮಸಂದ್ರದಲ್ಲೇ ಉಳಿದಿದುಕೊಂಡಿದ್ದು, ಕುಟುಂಬಸ್ಥರನ್ನ ಇನ್ನೋವಾ ಕಾರಿನಲ್ಲಿ ಬೆಂಗಳೂರಿನ ಆಸ್ಪತ್ರೆಯಲ್ಲಿರುವ ಸಂಬಂಧಿಯ ಯೋಗಕ್ಷೇಮ ವಿಚಾರಣೆಗೆ ಕಳಿಹಿಸಿದ್ದರು. ರಾತ್ರಿ ಬೆಂಗಳೂರಿನಿಂದ ವಾಪಸ್ ಆಗುತ್ತಿದ್ದ ವೇಳೆ ರಾಂಗ್ ಸೈಡ್‌ನಲ್ಲಿ ಎದುರಿಗೆ ಬಂದ ಬೈಕ್ ಸವಾರನ ಎಡವಟ್ಟಿನಿಂದ ಇನ್ನೋವಾ ಕಾರು ಚಾಲಕನ ನಿಯಂತ್ರಣ ತಪ್ಪಿದೆ. ಈ ವೇಳೆ ಕಾರ್ ಡಿಕ್ಕಿಯಾಗಿ ಪಕ್ಕದ ಕಂದಕಕ್ಕೆ ಉರುಳಿ ನಂತರ ರಸ್ತೆಯಲ್ಲಿ ನಿಂತಿದೆ.
ಇತ್ತೀಚಗಷ್ಟೆ ವಾಹನ ಸವಾರರ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವ ಬೆಂಗಳೂರು-ಚೆನೈ ಎಕ್ಸ್‌ಪ್ರೆಸ್ ಹೈವೇನಲ್ಲಿ ವೇಗವಾಗಿದ್ದ ಇನ್ನೋವಾ ಕಾರಿಗೆ ಎದುರಿಗೆ ಬಂದ ಬೈಕ್ ತಪ್ಪಿಸಲು ಹೋಗಿ ಈ ಭೀಕರ ಅಪಘಾತ ಸಂಭವಿಸಿದೆ. ಇನ್ನೋವಾ ಕಾರಿನಲ್ಲಿದ್ದ ಏರ್ ಬ್ಯಾಗ್ ಸಹ ಓಪನ್ ಆಗಿದೆ. ಆದರೂ ಸಹ ಕಾರಿನಲ್ಲಿದ್ದ ಚಾಲಕ, ಒಂದೇ ಕುಟುಂಬದ 8 ಜನರ ಪೈಕಿ ದ್ವಿಚಕ್ರ ವಾಹನ ಸವಾರ ಸೇರಿ 4 ಜನರು ಮೃತಪಟ್ಟಿದ್ದಾರೆ.
ಸರ್ವೀಸ್ ರಸ್ತೆಗೆ ಆಗ್ರಹ
ಗಾಯಾಳುಗಳನ್ನ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ರಾತ್ರಿ 12 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಎಕ್ಸ್‌ಪ್ರೆಸ್ ಕಾರಿಡಾರ್‌ನಲ್ಲಿ ಜೋರಾಗಿ ಶಬ್ದ ಕೇಳಿಸಿದ ಕೂಡಲೇ ಸ್ಥಳಕ್ಕೆ ಬಂದ ಕುಪ್ಪನಹಳ್ಳಿ ಗ್ರಾಮಸ್ಥರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಬಂಗಾರಪೇಟೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನೂ ಎಕ್ಸ್ಪ್ರೆಸ್ ಹೈ ಬಂಗಾರಪೇಟೆ ಹತ್ತಿರದಲ್ಲಿ ಹಾದು ಹೋಗಿದೆಯಾದರೂ ಇಲ್ಲೊಂದು ಸರ್ವೀಸ್ ರಸ್ತೆ ಇಲ್ಲ. ಇದರಿಂದ ಕೆಲವರ ಪ್ರಾಣ ಉಳಿಸಬಹುದಿತ್ತು, ಹಾಗಾಗಿ ಸರ್ವೀಸ್ ರಸ್ತೆ ಮಾಡಿಕೊಡಿ ಅನ್ನೋ ಒತ್ತಾಯ ಪ್ರತ್ಯಕ್ಷದರ್ಶಿಗಳದ್ದಾಗಿತ್ತು.
ಇದನ್ನೂ ಓದಿ: ಮೈಸೂರು ಜಿಲ್ಲೆಯಲ್ಲಿ ಜೋಡಿ ಕೊಲೆ: ಒಳಕಲ್ಲಿನಿಂದ ಜಜ್ಜಿ ವೃದ್ಧ ದಂಪತಿಯ ಹತ್ಯೆ
ಒಟ್ಟಾರೆ ಆಸ್ಪತ್ರೆಯಲ್ಲಿರುವ ಸಂಬಂಧಿಕರ ಯೋಗ ಕ್ಷೇಮ ವಿಚಾರಿಸಿಕೊಂಡು ವಾಪಸ್ ಆಗುತ್ತಿದ್ದ ಒಂದೇ ಕುಟುಂಬದ ನಾಲ್ವರು ಸಾವಿನ ಮನೆ ಸೇರಿದರೆ ಗರ್ಭಿಣಿ ಮಹಿಳೆ ಸೇರಿ ನಾಲ್ಕು ಜನ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಉದ್ಘಾಟನೆಗೂ ಮುನ್ನವೆ ಬೆಂಗಳೂರು- ಚೆನೈ ಎಕ್ಸ್ ಪ್ರೆಸ್ ಹೈವೆಯಲ್ಲಿ 5 ಜನರನ್ನು ಬಲಿ ಪಡೆದಿದ್ದು ಮಾತ್ರ ದುರಂತವೆ ಸರಿ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:58 pm, Mon, 3 March 25