ಬೆಂಗಳೂರು, ಸೆಪ್ಟೆಂಬರ್ 24: ಬೆಂಗಳೂರು (Bengaluru) ನಗರದಲ್ಲಿ ನಡೆಯುವ ಅಪರಾಧ (Crime) ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸರು (Bengaluru City Police) ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಸೈಬರ್ ಕ್ರೈಂ ಅನ್ನು ತಡೆಗಟ್ಟುವ ನಿಟ್ಟಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಪೊಲೀಸರು ಬಳಸುತ್ತಿದ್ದಾರೆ. ಆರೋಪಿಗಳ ಗುರುತು ಮತ್ತು ಆತನ ಹಿನ್ನೆಲೆಯನ್ನು ಸುಲಭವಾಗಿ ತಿಳಿಯಲು ಪೊಲೀಸರು ಸುಲಭ ಮಾರ್ಗವನ್ನು ಕಂಡುಕೊಂಡಿದ್ದಾರೆ. ನಗರದ ಪ್ರಮುಖ ರಸ್ತೆಗಳಲ್ಲಿ ಮುಖದ ಗುರತು ಹಿಡಿಯುವ ಸಿಸಿ ಕ್ಯಾಮೆರಾ (CC Camera) ಅಳವಡಿಸಲಾಗಿದೆ.
ಈ ಸಿಸಿ ಕ್ಯಾಮೆರಾಗಳು ಸಾಮಾನ್ಯವಾದದವು ಅಲ್ಲ. ಈ ಸಿಸಿ ಕ್ಯಾಮೆರಾ ವ್ಯಾಪ್ತಿಯಲ್ಲಿ ಅಪರಾಧ ನಡೆದರೆ, ತಕ್ಷಣ ಅಪರಾಧ ಕೃತ್ಯ ಎಸಗಿದ ವ್ಯಕ್ತಿಯ ಮುಖದ ಫೋಟೋ ತೆಗೆಯುತ್ತವೆ. ಒಂದು ಬಾರಿ ಫೋಟೋ ತೆಗೆದರೆ ಸಾಕು, ಮತ್ತೆ ಬೇರೆ ಯಾವುದೇ ಸ್ಥಳದಲ್ಲಿ ಅದೇ ಆರೋಪಿ ಕಂಡರೆ, ಸಿಸಿ ಕ್ಯಾಮೆರಾಗಳು ತಕ್ಷಣ ಆತನ ಮುಖವನ್ನು ಗುರುತಿಸುತ್ತವೆ. ಈ ಸಿಸಿ ಕ್ಯಾಮೆರಾಗಳಿಗೆ ಜಿಪಿಎಸ್ ಅಳವಡಿಸಲಾಗಿರುತ್ತದೆ. ಇದರಿಂದ ಅಪರಾಧ ನಡೆದ ಸ್ಥಳದ ಬಗ್ಗೆ ಪೊಲೀಸರಿಗೆ ಕೂಡಲೆ ಮಾಹಿತಿ ರವಾನೆಯಾಗುತ್ತದೆ. ಇದರಿಂದ ಪೊಲೀಸರು ಕೂಡಲೆ ಅಪರಾಧ ನಡೆದ ಸ್ಥಳಕ್ಕೆ ಹೋಗಲು ಸಹಾಯವಾಗುತ್ತದೆ.
ಇದನ್ನೂ ಓದಿ: ಬೆಂಗಳೂರು ಮಹಾಲಕ್ಷ್ಮಿ ಕೊಲೆ ಕೇಸ್: ಹಂತಕ ಅಶ್ರಫ್ ಅಲ್ಲ, ಹೊರರಾಜ್ಯದವನು; ಪೊಲೀಸರಿಗೆ ಸಿಕ್ತು ಸ್ಫೋಟಕ ಮಾಹಿತಿ
ಸೇಫ್ ಸಿಟಿ ಪ್ರಾಜೆಕ್ಟ್ ಅಡಿಯಲ್ಲಿ ಈ ಸಿಸಿ ಕ್ಯಾಮೆರಾಗಳನ್ನು ನಗರದ ವಿವಿಧ ಪ್ರದೇಶಗಳಲ್ಲಿ ಅಳವಡಿಸಲಾಗಿದೆ. ಈ ಸಿಸಿ ಕ್ಯಾಮೆರಾಗಳು 7,500 ಹೈ ರೆಸಲ್ಯೂಷನ್ ಕ್ಯಾಮೆರಾಗಳಾಗಿವೆ. ಇದರಲ್ಲಿ ಸೆರೆ ಹಿಡಿದ ಭಾವಚಿತ್ರಗಳು ಬಹಳ ಸ್ಪಷ್ಟವಾಗಿ ಕಾಣುತ್ತವೆ. ಕ್ಯಾಮೆರಾಗಳನ್ನು ಪೊಲೀಸ್ ಕಮಾಂಡ್ ಸೆಂಟರ್ನ ಸಿಬ್ಬಂದಿ ನಿಯಂತ್ರಿಸುತ್ತಿರುತ್ತಾರೆ. ಸದ್ಯ ಪೊಲೀಸರು ಇಂತಹ ಸಾವಿರ ಕ್ಯಾಮೆರಾಗಳನ್ನು ನಗರದಲ್ಲಿ ಅಳವಡಿಸಲು ಪರವಾನಗಿ ಹೊಂದಿದ್ದಾರೆ.
ಪೊಲೀಸ್ ಕಮಾಂಡ್ ಸೆಂಟರ್ಗಳಲ್ಲಿ ಎಐ ಆಧಾರಿತ ಫೇಶಿಯಲ್ ರೆಕಗ್ನಿಷನ್ ಸಿಸ್ಟಮ್ (FRS) ಸ್ಥಾಪಿಸಲಾಗಿದೆ. ಇದು ಕರ್ನಾಟಕ ರಾಜ್ಯ ಪೊಲೀಸ್ ಡೇಟಾಬೇಸ್ಗೆ ಲಿಂಕ್ ಆಗಿರುತ್ತದೆ. ಸಿಸಿ ಕ್ಯಾಮೆರಾಗಳು ಸೆರೆ ಹಿಡಿದ ವ್ಯಕ್ತಿಯ ಭಾವಚಿತ್ರ ಎಫ್ಎಸ್ಆರ್ಗೆ ರವಾನೆಯಾಗುತ್ತದೆ. ಅಲ್ಲಿ, ಆ ವ್ಯಕ್ತಿ ಅಪರಾಧ ಹಿನ್ನೆಲೆಯನ್ನು ಹೊಂದಿದ್ದಾನೆಯೇ ಇಲ್ಲವೇ ಎಂಬವುದನ್ನು ಎಫ್ಆರ್ಎಸ್ ಮೂಲಕ ತಿಳಿಯುತ್ತದೆ. ಸಂಚಾರಿ ನಿಯಮ ಉಲ್ಲಂಘಿಸುವವರ ಪತ್ತೆ ಹಚ್ಚಲು ಈ ಸಿಸಿ ಕ್ಯಾಮೆರಾಗಳು ಅಸ್ತ್ರವಾಗಿವೆ.
ಸಿಸಿ ಕ್ಯಾಮೆರಾಗಳ ಅಳವಡಿಗೆ ಜೂನ್ನಲ್ಲಿ ಪ್ರಾಯೋಗಿಕವಾಗಿ ಆರಂಭವಾಯಿತು. ಮೆಜೆಸ್ಟಿಕ್ ಬಸ್ ನಿಲ್ದಾಣದ ಸುತ್ತಮುತ್ತ 12 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಕ್ಯಾಮೆರಾಗಳು ಎಫ್‌ಆರ್‌ಎಸ್‌ಗೆ ಕನೆಕ್ಟ್ ಆಗಿವೆ. ಸರಾಸರಿ, ಈ ಕ್ಯಾಮೆರಾಗಳು ಪ್ರತಿ ದಿನ 200 ಅಪರಾಧ ಹಿನ್ನೆಲೆ ಹೊಂದಿರುವ ವ್ಯಕ್ತಿಗಳನ್ನು ಪತ್ತೆ ಮಾಡುತ್ತವೆ. ಈ ಸಿಸಿ ಕ್ಯಾಮೆರಾಗಳ ಸಹಾಯದಿಂದ ಉಪ್ಪಾರಪೇಟೆ ಠಾಣೆಯ ಪೊಲೀಸರು ಸುಮಾರು 10 ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:35 am, Tue, 24 September 24