
ಬೆಂಗಳೂರು, ನ.15: ರಾಜಧಾನಿ ಬೆಂಗಳೂರಿನಲ್ಲಿ ರೌಡಿ ಚಟುವಟಿಕೆಗಳು ಹಾಗೂ ಮಾದಕವಸ್ತು ದಂಧೆಗೆ ಸಂಪೂರ್ಣ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಸ್ಥಳೀಯ ಪೊಲೀಸ್ ಠಾಣೆಗಳ ವ್ಯಾಪ್ತಿ ಮತ್ತು ನಿಯಂತ್ರಣವನ್ನು ಹೊರತುಪಡಿಸಿ, ನೇರವಾಗಿ ಪೊಲೀಸ್ ಕಮಿಷನರೇಟ್‌ನ ಪ್ರತ್ಯೇಕ ಕಂಟ್ರೋಲ್‌ನಲ್ಲಿ ಕಾರ್ಯನಿರ್ವಹಿಸುವ ‘ಪ್ರತ್ಯೇಕ ರೌಡಿ ಸ್ಕ್ವಾಡ್’ ರಚಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ.
ಬೆಂಗಳೂರಿನಲ್ಲಿ ರೌಡಿಗಳು ಸ್ಥಳೀಯ ಪೊಲೀಸರ ಜೊತೆ ಹೊಂದಾಣಿಕೆ ಹಾಗೂ ಸಂಪರ್ಕದಲ್ಲಿರುತ್ತಾರೆ ಎಂಬ ಮಾಹಿತಿ ಸರ್ಕಾರಕ್ಕಿದೆ. ದಾಳಿ ನಡೆಯುವ ಮುನ್ನವೇ ರೌಡಿಗಳಿಗೆ ‘ಟಿಪ್’ (ಮಾಹಿತಿ) ಕೊಡುವುದು, ರಕ್ಷಣೆ ನೀಡುವುದು ನಡೆಯುತ್ತದೆ. ಹೀಗಾಗಿ ಇಂತಹ ಯಾವುದೇ ಹೊಂದಾಣಿಕೆಗೆ ಅವಕಾಶ ನೀಡದಂತೆ ಪ್ರತ್ಯೇಕ ತಂಡವನ್ನು ರಚಿಸಲಾಗುತ್ತಿದೆ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರು ನಗರದಲ್ಲಿ ಅಪರಾಧ ಚಟುವಟಿಕೆಗಳು ಮತ್ತು ಡ್ರಗ್ಸ್ ಜಾಲವನ್ನು ಮಟ್ಟಹಾಕಲು ರಚನೆಯಾಗುವ ಈ ಪ್ರತ್ಯೇಕ ರೌಡಿ ಸ್ಕ್ವಾಡ್, ಸ್ಥಳೀಯ ಠಾಣೆಗಳ ಹಸ್ತಕ್ಷೇಪವಿಲ್ಲದೆ ನೇರವಾಗಿ ಮೇಲಿನ ಅಧಿಕಾರಿಗಳ (ಕಮಿಷನರೇಟ್) ಕಂಟ್ರೋಲ್‌ನಲ್ಲಿ ಸ್ವತಂತ್ರವಾಗಿ ಕಾರ್ಯಾಚರಣೆ ನಡೆಸಲಿದೆ.
“ಬೆಂಗಳೂರು ನಗರದಲ್ಲಿ ಸಣ್ಣ ಅಪರಾಧ ಘಟನೆಗೂ ಅವಕಾಶ ಕೊಡಬಾರದು. ಡ್ರಗ್ಸ್ ಮುಕ್ತ ಕರ್ನಾಟಕ ಮಾಡಲು ನಾವು ಪ್ಲ್ಯಾನ್ ಮಾಡಿದ್ದೇವೆ. ಈಗಾಗಲೇ ಕೆಲವು ಕಡೆ ಡ್ರಗ್ಸ್ ಸೀಜ್ ಮಾಡಿದ್ದೇವೆ, ನಮ್ಮ ಬಳಿ ಸಾಕಷ್ಟು ಮಾಹಿತಿಯಿದ್ದು ಮುಂದೆಯೂ ಕಠಿಣ ಕಾರ್ಯಾಚರಣೆ ಮುಂದುವರಿಯಲಿದೆ. ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ” ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪೊಲೀಸ್ ಇಲಾಖೆಯ ಸುಧಾರಣೆ ಹಾಗೂ ರೌಡಿಗಳ ಮಟ್ಟಹಾಕುವ ವಿಚಾರದಲ್ಲಿ ಆರಂಭದಿಂದಲೂ ಕಠಿಣ ನಿಲುವು ತಾಳಿದ್ದರು. ಈ ಹಿಂದೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ನಡೆದ ಸಚಿವ ಸಂಪುಟ ಸಭೆಯಲ್ಲೂ ಸಿಎಂ ಡಿ.ಕೆ. ಶಿವಕುಮಾರ್ ಅವರು ಪೊಲೀಸ್ ಠಾಣೆಗಳ ಕಾರ್ಯವೈಖರಿ ಹಾಗೂ ರೌಡಿಗಳ ಹಾವಳಿಯ ಕುರಿತು ಗಂಭೀರವಾಗಿ ಪ್ರಸ್ತಾಪಿಸಿದ್ದರು. ಕೆಲವೆಡೆ ರೌಡಿಗಳೇ ಇಡೀ ಪೊಲೀಸ್ ಸ್ಟೇಷನ್ ಅನ್ನು ನಿಯಂತ್ರಿಸುವ (ಕಂಟ್ರೋಲ್ ಮಾಡುವ) ಪರಿಸ್ಥಿತಿ ಇದೆ ಎಂಬ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಅವರು, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರನ್ನು ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕುವಂತೆ ಪೊಲೀಸ್ ವರಿಷ್ಠರಿಗೆ ಖಡಕ್ ಸೂಚನೆ ನೀಡಿದ್ದರು. ಇದೀಗ ಅದರ ಮುಂದುವರಿದ ಭಾಗವಾಗಿ ನೇರ ಕಮಿಷನರೇಟ್ ಅಡಿಯಲ್ಲಿ ಪ್ರತ್ಯೇಕ ರೌಡಿ ಸ್ಕ್ವಾಡ್ ರಚಿಸುವ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ