
ಬೆಂಗಳೂರು, ಡಿಸೆಂಬರ್ 22: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಎರಡು ವಾರದಿಂದ ಚಳಿ ಪ್ರಮಾಣ ಹೆಚ್ಚಾಗಿದೆ. ಅತಿಯಾದ ಚಳಿ ಸಿಲಿಕಾನ್ ಸಿಟಿ ಜನರಲ್ಲಿ ಸಾಂಕ್ರಾಮಿಕ ರೋಗಗಳ ಜೊತೆ ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆ ಪ್ರಕರಣಗಳು (ILI) ಹಾಗೂ ತೀವ್ರ ಉಸಿರಾಟ ಸಮಸ್ಯೆ ಪ್ರಕರಣ (SARI) ವೈರಲ್ ಫ್ಲೂ ಹರಡುವ ಭೀತಿ ಆರೋಗ್ಯ ಇಲಾಖೆಗೆ ಟೆನ್ಷನ್ ಹೆಚ್ಚಿಸಿದೆ.
ರಾಜ್ಯದಲ್ಲಿ ಕಳೆದೊಂದು ವಾರದಿಂದ ನಿರಂತರ ಏರಿಕೆಯಾಗುತ್ತಿರುವ ಸಾರಿ, ಐಎಲ್ಐ ಕೇಸ್ ಹಾಗೂ ವೈರಲ್ ಫ್ಲೂ ಆತಂಕಕ್ಕೆ ಕಾರಣವಾಗಿವೆ. ರಾಜ್ಯದಲ್ಲಿ ಕಳೆದ ಒಂದು ವಾರದಲ್ಲಿ 133 ಸಾರಿ, 21 ಐಎಲ್ಐ ಹಾಗೂ 3052 ಅಕ್ಯೂಟ್ ಡೈರಿಯಲ್ ಡಿಸೀಸ್ ಪಾಸಿಟಿವ್ ಕಂಡುಬಂದಿವೆ. ಹೀಗಾಗಿ ಐಎಲ್ಐ ಹಾಗೂ ಸಾರಿ ಕೇಸ್ ಮೇಲೆ ಆರೋಗ್ಯ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಸೋಂಕಿತ ಪ್ರಕರಣಗಳ ಟೆಸ್ಟ್ ಮಾಡುವಂತೆ ಮಾರ್ಗಸೂಚಿ ಕೂಡ ನೀಡಲಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಸೀಸನಲ್ ಫ್ಲೂ ಭೀತಿ: ಮಕ್ಕಳು, ಗರ್ಭಿಣಿಯರಿಗೆ ಅಪಾಯ; ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ
ಚಳಿಗಾಲ ಹಿನ್ನಲೆ ಉಸಿರಾಟದ ಸಮಸ್ಯೆ ಹೆಚ್ಚಾಗಿದೆ. ಸೆಲ್ಫ್ ಮೆಡಿಕೇಷನಲ್ಲಿರುವವರ ಮೇಲೆ ನಿಗಾವಹಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಐಎಲ್ಐ, ಸಾರಿ ಪ್ರಕರಣಗಳ ಬಗ್ಗೆ ಗಮನ ಹರಿಸಲು ಆರೋಗ್ಯ ಇಲಾಖೆ ಸೂಚನೆ ನೀಡಿದ್ದು, ಪ್ರತಿ ದಿನ ಕನಿಷ್ಟ 5ರಷ್ಟು ಐಎಲ್ಐ ಕೇಸ್, 100ರಷ್ಟು ಸಾರಿ ಕೇಸ್ಗಳ ಪರೀಕ್ಷೆಗೆ ಸೂಚನೆ ನೀಡಿದೆ.
ರಾಜ್ಯದ ಎಲ್ಲಾ ಪ್ರಯೋಗಾಲಯಗಳಲ್ಲಿ ಸೂಕ್ತ ಟೆಸ್ಟಿಂಗ್ ಕಿಟ್ಗಳನ್ನು ಇರಿಸಿಕೊಳ್ಳಲು ಸೂಚಿಸಲಾಗಿದೆ. ಮಕ್ಕಳು, ಹಿರಿಯರು, ಗರ್ಭಿಣಿಯರು, ಮೆಡಿಕೇಷನ್ ಮೇಲೆ ಅವಲಂಬಿತರಾದವರಿಗೆ ಹೆಚ್ಚಿನ ಅಪಾಯ ಇದೆ. ಹೀಗಾಗಿ ಸೆಲ್ಫ್ ಮೆಡಿಕೇಷನ್ ಮಾಡುವಂತೆ ಸೂಚಿಸಿದೆ. ಐಎಲ್ಐ, ಸಾರಿ ಕೇಸ್ ಮಾನಿಟರ್ ಮಾಡಲು ಆರೋಗ್ಯ ಸಿಬ್ಬಂದಿಗಳಿಗೆ ತಿಳಿಸಲಾಗಿದೆ. ಸಮಸ್ಯೆ ಇರುವವರನ್ನು ಮಾನಿಟರ್ ಮಾಡಿ ವರದಿ ನೀಡುವಂತೆ, ತುರ್ತು ಚಿಕಿತ್ಸೆಗೆ ಸ್ಪಂದಿಸುವ ಅವಶ್ಯ ಚಿಕಿತ್ಸೆಗಳ ಸಿದ್ಧತೆ ಬಗ್ಗೆ ನಿಗಾ ವಹಿಸುವಂತೆ ಸೂಚಿಸಲಾಗಿದೆ.
ಚಳಿಗಾಲ ಹಿನ್ನಲೆ ರಾಜ್ಯದಲ್ಲಿ ಸೀಸನಲ್ ಫ್ಲೂ ಭೀತಿ ಇದ್ದು ಜ್ವರ, ಕೆಮ್ಮು, ಕೆಂಪು ಗುಳ್ಳೆ, ಹಸಿವು ಆಗದಿರುವುದು, ಮೈಕೈ ನೋವು, ಶೀತ, ಒಣ ಕೆಮ್ಮು ಇದರ ಪ್ರಮುಖ ಗುಣಲಕ್ಷಣಗಳು ಕಂಡುಬಂದರೆ ಆಸ್ಪತ್ರೆಗೆ ಭೇಟಿ ನೀಡುವುದು ಉತ್ತಮ. ಗರ್ಭಿಣಿಯರು, ಹೈ ರಿಸ್ಕ್ ರೋಗಿಗಳು ಸೂಕ್ತ ಲಸಿಕೆ ಪಡೆಯುವಂತೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಕರ್ನಾಟಕದಾದ್ಯಂತ ಇಂದಿನಿಂದ ಡಿ 24ರವರೆಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ
ಬೆಂಗಳೂರಿನಲ್ಲಿ ಚಳಿಯ ಜೊತೆಗೆ ಬದಲಾಗುತ್ತಿರುವ ಹವಾಮಾನ ಹಿನ್ನಲೆ ವೈದ್ಯರು ಆರೋಗ್ಯದ ಬಗ್ಗೆ ಗಮನ ಹರಿಸುವಂತೆ ಸಲಹೆ ನೀಡಿದ್ದಾರೆ. ಹೊರಗಡೆಯ ಆಹಾರ, ಎಣ್ಣೆಯುಕ್ತ ತಿಂಡಿ ಹಾಗೂ ಅತಿಯಾದ ಸಿಹಿ ಪದಾರ್ಥ ತ್ಯಜಿಸುವುದರೊಂದಿಗೆ ಮನೆ ಊಟಕ್ಕೆ ಹೆಚ್ಚು ಒತ್ತು ನೀಡುವಂತೆ ತಿಳಿಸಿದ್ದಾರೆ. ಒಟ್ಟಿನಲ್ಲಿ ಜನರು ಚಳಿಗಾಲ ಮುಗಿಯುವವರೆಗೂ ಜನರು ಸ್ವಚ್ಛತೆ ಕಾಪಾಡುವುದು, ಬಿಸಿ ನೀರು ಕುಡಿಯುವುದು, ಆರೋಗ್ಯಕರ ಆಹಾರ ಸೇವನೆ ಅಗತ್ಯ ಎಂಬುವುದು ವೈದ್ಯರ ಸಲಹೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.