ಬೆಂಗಳೂರು ಟನಲ್ ರಸ್ತೆಗೆ ಹೆಚ್ಚಿನ ಮೊತ್ತಕ್ಕೆ ಅದಾನಿ ಗ್ರೂಪ್ ಬಿಡ್, ಧರ್ಮ ಸಂಕಟಕ್ಕೆ ಸಿಲುಕಿದ ಸಿದ್ದರಾಮಯ್ಯ ಸರ್ಕಾರ
ರಾಹುಲ್ ಗಾಂಧಿಯಿಂದ ಹಿಡಿದು ಕಾಂಗ್ರೆಸ್ ನಾಯಕರು ಸದಾ ಅದಾನಿ ಕುರಿತು ಟೀಕೆ ಮಾಡುತ್ತಲೇ ಇದ್ದಾರೆ. ಇದೀಗ ಅದೇ ಅದಾನಿ ಕಂಪನಿ ಬೆಂಗಳೂರು ಸುರಂಗ ಮಾರ್ಗ ಟೆಂಡರ್ ನಲ್ಲಿ ಮೇಲುಗೈ ಸಾಧಿಸಿ, ಇತರೆ ಎಲ್ಲಾ ಕಂಪನಿಗಳು ಕೋಟ್ ಮಾಡಿದ್ದಕ್ಕಿಂತ ಕಡಿಮೆ ಮೊತ್ತ ಬಿಡ್ ಮಾಡಿ ಟೆಂಡರ್ ಪಡೆಯುವ ಮುಂಚೂಣಿಯಲ್ಲಿದೆ. ಹೀಗಾಗಿ ರಾಷ್ಟ್ರಮಟ್ಟದಲ್ಲಿ ಅದಾನಿ ವಿರುದ್ಧ ವಾಗ್ದಾಳಿ ನಡೆಸುವ ಕಾಂಗ್ರೆಸ್, ಇದೀಗ ಅದೇ ಅದಾನಿ ಸಮೂಹಕ್ಕೆ ಟೆಂಡರ್ ನೀಡುತ್ತಾ ಎನ್ನುವ ಚರ್ಚೆ ಶುರುವಾಗಿದೆ.

ಬೆಂಗಳೂರು, (ಡಿಸೆಂಬರ್ 22): ಬೆಂಗಳೂರು ಟನಲ್ ಮಾರ್ಗದ (bengaluru tunnel road) ಟೆಂಡರ್ ಅದಾನಿ ಗ್ರೂಪ್ (Adani Group) ಪಾಲಾಗುವ ಸಾಧ್ಯತೆಗಳಿವೆ. ಕಾರಣ ಟೆಂಡರ್ ಸಲ್ಲಿಸಿರುವ ಕಂಪನಿಗಳ ಪೈಕಿ ಅದಾನಿ ಗ್ರೂಪ್ ಅತೀ ಕಡಿಮೆ ಬಿಡ್ ಮಾಡಿದೆ. ಬೆಂಗಳೂರು ಟನಲ್ ರಸ್ತೆ ಟೆಂಡರ್ ನಲ್ಲಿ ಅತೀ ಕಡಿಮೆ ಅಂದರೆ 22,267 ಕೋಟಿ ರೂಪಾಯಿಗೆ ಬಿಡ್ ಮಾಡಿದೆ. (ಗ್ರೇಟರ್ ಬೆಂಗಳೂರು ಅಥಾರಿಟಿ(GBA) 17,698 ಕೋಟಿಗೆ ಬಿಡ್ ಸೀಮಿತ ಮಾಡಿತ್ತು. ಆದ್ರೆ, ಜಿಬಿಎ ಕೋಟ್ ಮಾಡಿದ್ದಕ್ಕಿಂತ ಶೇ. 24ರಷ್ಟು ಹೆಚ್ಚಿನ ಮೊತ್ತ ಬಿಡ್ ಮಾಡಿದರೂ, ಬಿಡ್ ಮಾಡಿದವರ ಪೈಕಿ ಅತ್ಯಂತ ಕಡಿಮೆ ಮೊತ್ತಕ್ಕೆ ಅದಾನಿ ಗ್ರೂಪ್ ಬಿಡ್ ಮಾಡಿದೆ. ಹೀಗಾಗಿ ಅಂದಾಜಿಗಿಂತ ಹೆಚ್ಚು ಹಣಕ್ಕೆ ಅದಾನಿ ಗ್ರೂಪ್ಸ್ ಗೆ ಕಾಂಗ್ರೆಸ್ ಸರ್ಕಾರ ಟೆಂಡರ್ ಫೈನಲ್ ಮಾಡುತ್ತಾ ಎನ್ನವುದೇ ಇದೀಗ ದೊಡ್ಡ ಪ್ರಶ್ನೆಯಾಗಿದೆ ಯಾಕಂದ್ರೆ. ರಾಷ್ಟ್ರಮಟ್ಟದಲ್ಲಿ ಅದಾನಿಯನ್ನು ರಾಹುಲ್ ಗಾಂಧಿ ಆದಿಯಾಗಿ ಕಾಂಗ್ರೆಸ್ ನಾಯಕರು ಟೀಕಿಸುತ್ತಲೇ ಬಂದಿದ್ದಾರೆ. ಹೀಗಾಗಿ ಇತ್ತ ಸಿದ್ದರಾಮಯ್ಯ ಸರ್ಕಾರ ಧರ್ಮ ಸಂಕಟಕ್ಕೆ ಸಿಲುಕಿದೆ.
ಬೆಂಗಳೂರು ಟನಲ್ ಮಾರ್ಗ ಟೆಂಡರ್ ಅದಾನಿ ಪಾಲಾಗುತ್ತಾ?
ಬೆಂಗಳೂರು ಟನಲ್ ರಸ್ತೆ ಟೆಂಡರ್ ನಲ್ಲಿ ಅತೀ ಕಡಿಮೆ ಮೊತ್ತ ಬಿಡ್ ಮಾಡಿರುವ ಅದಾನಿ ಗ್ರೂಪ್ಸ್, 22,267 ಕೋಟಿ ರೂಪಾಯಿಗೆ ಬಿಡ್ ಮಾಡಿದೆ. ಆದರೆ ಜಿಬಿಎ 17,698 ಕೋಟಿಗೆ ಬಿಡ್ ಸೀಮಿತ ಮಾಡಿತ್ತು. ಜಿಬಿಎ ಕೋಟ್ ಮಾಡಿದ್ದಕ್ಕಿಂತ 24% ಹೆಚ್ಚಿನ ಮೊತ್ತ ಬಿಡ್ ಮಾಡಿದರೂ, ಬಿಡ್ ಮಾಡಿದವರ ಪೈಕಿ ಅತ್ಯಂತ ಕಡಿಮೆ ಮೊತ್ತಕ್ಕೆ ಅದಾನಿ ಗ್ರೂಪ್ ಬಿಡ್ ಮಾಡಿದೆ. ಅಂತಿಮ ಹಂತಕ್ಕೆ ಒಟ್ಟು ನಾಲ್ಕು ಕಂಪನಿಗಳು ಪೈಪೋಟಿ ನಡೆಸಿತ್ತು. ಈ ಪೈಕಿ ದಿಲೀಪ್ ಬಿಲ್ಡ್ ಕಾನ್ ಮತ್ತು ರೈಲ್ವೆ ವಿಕಾಸ ನಿಗಮ ಲಿಮಿಟೆಡ್. ಆದ್ರೆ,ಕೆಲ ಕಂಪನಿಗಳು ತಾಂತ್ರಿಕ ಕಾರಣಗಳಿಂದ ತಿರಸ್ಕರಿಸಲ್ಪಟ್ಟವು. ಕೊನೆಯದಾಗಿ ಅದಾನಿ ಗ್ರೂಪ್ ಹಾಗೂ ಹೈದರಾಬಾದ್ ಮೂಲದ ವಿಶ್ವಸಮುದ್ರ ಕಂಪೆನಿ ಅಖಾಡದಲ್ಲಿದೆ.
ಇದನ್ನೂ ನೋಡಿ: ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್ ಕಾರಿಡಾರ್: ಡಿಕೆ ಶಿವಕುಮಾರ್ ಘೋಷಣೆ
ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು?
ಹೈದರಾಬಾದಿನ ವಿಶ್ವ ಸಮುದ್ರ ಗ್ರೂಪ್ಸ್ 25,474 ಕೋಟಿ ರೂ.ಗೆ ಬಿಡ್ ಮಾಡಿದೆ. ಸರ್ಕಾರದ ಅಂದಾಜಿಗಿಂತ 7776 ಕೋಟಿ ರೂ ಹೆಚ್ಚು ಮೊತ್ತಕ್ಕೆ ವಿಶ್ವಸಮುದ್ರ ಕಂಪನಿ ಬಿಡ್ ಮಾಡಿದೆ. ಹೀಗಾಗಿ ಲೀಗಲಿ ಬಿಡ್ ಪಡೆಯಲು ಮೊದಲ ಆಯ್ಕೆ ಅದಾನಿ ಗ್ರೂಪ್ ಆಗಿರಲಿದೆ. ಆದರೆ ಅದಾನಿ ಗ್ರೂಪ್ ಗೆ ರಾಜ್ಯ ಸರ್ಕಾರ ಬಿಡ್ ಅಂತಿಮ ಮಾಡುತ್ತಾ ಎನ್ನುವುದೇ ಈಗಿರುವ ಯಕ್ಷ ಪ್ರಶ್ನೆ. ಈ ಬಗ್ಗೆ ಮಾತನಾಡಿದ ಡಿಸಿಎಂ, ಯಾರೇ ಬಿಡ್ ಮಾಡಲಿ ಸರ್ಕಾರ ಏನು ಘೋಷಣೆ ಮಾಡಿದೆಯೋ ಅಷ್ಟೇ ಕೊಡೋದು.ಅದಾನಿ ಆಗಲಿ, ನಾನು ಆಗಲಿ, ನೀನು ಆಗಲಿ ಯಾರೇ ಹಾಕಿದ್ರು ಸರ್ಕಾರ ಹೇಳಿರೋ ಅಷ್ಟೇ ಮಾಡೋದು.20 ಸಾವಿರ ಬಿಡ್ ಮಾಡಲಿ, ಎಷ್ಟಾದ್ರು ಬಿಡ್ ಮಾಡಲಿ.ಸರ್ಕಾರ ಘೋಷಣೆ ಮಾಡಿರೋದು ಅಷ್ಟೇ ಕೊಡೋದು ಉಳಿದದ್ದು ಅವರು ವೆಚ್ಚ ಭರಿಸಿಕೊಳ್ಳಬೇಕು ಅಷ್ಟೇ ಎಂದರು.
ಧರ್ಮ ಸಂಕಷ್ಟದಲ್ಲಿ ರಾಜ್ಯ ಸರ್ಕಾರ
ರಾಷ್ಟ್ರ ಮಟ್ಟದಲ್ಲಿ ರಾಹುಲ್ ಗಾಂಧಿ ಹಿಡಿದು ಅವರ ಪಕ್ಷದ ಕಾರ್ಯಕರ್ತರೂ ಸಹ ಅದಾನಿಯನ್ನು ಟೀಕೆ ಮಾಡುತ್ತಲೇ ಬಂದಿದ್ದಾರೆ. ಮೋದಿ ಸರ್ಕಾರ, ಅದಾನಿ ಗ್ರೂಪ್ ಗೆ ಹೆಚ್ಚೆಚ್ಚು ಟೆಂಡರ್ ನೀಡುತ್ತದೆ. ಅಲ್ಲದೇ ಅದಾನಿಗೆ ರಕ್ಷಣೆಗೆ ಮೋದಿ ನಿಂತಿದ್ದಾರೆ. ಅದಾನಿ ಬಿಜೆಪಿಯ ಎಲೆಕ್ಷನ್ ಫಂಡರ್ ಹೀಗೆ ನಾನಾ ರೀತಿಯಲ್ಲಿ ಅದಾನಿ ವಿರುದ್ಧ ಕಾಂಗ್ರೆಸ್ ನಾಯಕರು ಬಹಿರಂಗವಾಗಿ ಟೀಕಿಸಿದ್ದಾರೆ. ಆದರೆ ಇದೀಗ ಇತ್ತ ರಾಜ್ಯದ ಕಾಂಗ್ರೆಸ್ ಸರ್ಕಾರವೇ ಅದೇ ಅದಾನಿ ಗ್ರೂಪ್‌ಗೆ ಸಾವಿರಾರು ಕೋಟಿ ಮೊತ್ತದ ಟೆಂಡರ್ ನೀಡುವ ಅನಿವಾರ್ಯತೆ ಎದುರಾಗಿದೆ. ಒಂದು ಕಡೆ ಅಂದಾಜು ಮೊತ್ತಕ್ಕೆ ಹೆಚ್ಚಿಗೆ ಬಿಡ್ ಮಾಡಿದೆ. ಇನ್ನೊಂದೆಡೆ ಟೀಕಿಸುವ ನಾವೇ ಟೆಂಡರ್ ಕೊಟ್ರೆ ಹೇಗೆ ಎನ್ನುವ ಧರ್ಮ ಸಂಕಟದಲ್ಲಿ ಸಿದ್ದರಾಮಯ್ಯ ಸರ್ಕಾರ ಸಿಲುಕಿದೆ.
ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡಲು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ರೂಪಿಸಿರುವ ಕನಸಿನ ಯೋಜನೆ ‘ಟನಲ್ ರಸ್ತೆ’ ಈಗ ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಸದಾ ರಾಷ್ಟ್ರಮಟ್ಟದಲ್ಲಿ ಅದಾನಿ ವಿರುದ್ಧ ವಾಗ್ದಾಳಿ ನಡೆಸುವ ಕಾಂಗ್ರೆಸ್, ಇದೀಗ ಅದೇ ಅದಾನಿ ಸಮೂಹಕ್ಕೆ ಟೆಂಡರ್ ನೀಡುವ ಅನಿವಾರ್ಯತೆಗೆ ಸಿಲುಕಿದೆಯೇ ಎಂಬ ಪ್ರಶ್ನೆ ಎದ್ದಿದ್ದು, ಸಿದ್ದರಾಮಯ್ಯ ಸರ್ಕಾರ, ಈಗ ಅದಾನಿ ಗ್ರೂಪ್ಸ್ ಗೆ ಟೆಂಡರ್ ಕೊಡುತ್ತಾ? ಅಥವಾ ಟನಲ್ ರಸ್ತೆ ವಿರೋಧಿಸುತ್ತಿರುವ ಬಿಜೆಪಿ ಈಗ ಅದಾನಿ ಗ್ರೂಪ್ಸ್ ವಿರುದ್ಧ ದನಿ ಎತ್ತುತ್ತಾ? ಹೀಗೆ ಬೆಂಗಳೂರು ಟನಲ್ ರಸ್ತೆ ಟೆಂಡರ್ ಕುತೂಹಲಕ್ಕೆ ಕಾರಣವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:33 pm, Mon, 22 December 25



