ಒಂದಾ ಇಬ್ಬರು ದುಡಿಯಬೇಕು, ಇಲ್ಲ ಊರು ಬಿಡಬೇಕು: ಬೆಂಗಳೂರು ಮದುವೆಯಾದವರಿಗೆ ದುಬಾರಿ 

ಬೆಂಗಳೂರಿನಲ್ಲಿ ದಂಪತಿಗಳ ಜೀವನ ವೆಚ್ಚದ ಕುರಿತು ವೈರಲ್ ಪೋಸ್ಟ್ ಆರ್ಥಿಕ ಸಂಕಷ್ಟವನ್ನು ಅನಾವರಣಗೊಳಿಸಿದೆ. ಪತ್ನಿ ಸರ್ಕಾರಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವುದರಿಂದ ಆದಾಯ ಶೂನ್ಯವಾಗಿದೆ. ಇದರಿಂದ ಸ್ನೇಹಿತನ 1.15 ಲಕ್ಷ ರೂ. ಸಂಬಳವೂ ಮಾಸಿಕ 1.21 ಲಕ್ಷ ರೂ. ಖರ್ಚಿಗೆ ಸಾಲದೆ ಹಣಕಾಸಿನ ಒತ್ತಡ ಹೆಚ್ಚಿಸಿದೆ. ಏಕ ಗಳಿಕೆಯವರ ಪಾಲಿಗೆ ಮೆಟ್ರೋ ನಗರದ ಜೀವನ ನಿರ್ವಹಣೆ ದೊಡ್ಡ ಸವಾಲಾಗಿದೆ.

ಒಂದಾ ಇಬ್ಬರು ದುಡಿಯಬೇಕು, ಇಲ್ಲ ಊರು ಬಿಡಬೇಕು: ಬೆಂಗಳೂರು ಮದುವೆಯಾದವರಿಗೆ ದುಬಾರಿ 
ಸಾಂದರ್ಭಿಕ ಚಿತ್ರ

Updated on: Mar 05, 2026 | 3:20 PM

ಬೆಂಗಳೂರಿನ ಖರ್ಚು, ಹಾಗೂ ಸಂಬಳದ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಮತ್ತೊಮ್ಮ ಚರ್ಚೆಯಾಗಿದೆ. ಈ ಹಿಂದೆ ಐಟಿ ಉದ್ಯೋಗಿಗಳು ರಾಜಧಾನಿಯಲ್ಲಿ ಜೀವನ ವೆಚ್ಚದ ಬಗ್ಗೆ ಭಾರೀ ಪೋಸ್ಟ್​​ಗಳನ್ನು ಹಂಚಿಕೊಳ್ಳುತ್ತಿದ್ದರು. ಇದೀಗ ದಂಪತಿಗಳು ಈ ಸಂಕಷ್ಟದ ಬಗ್ಗೆ ಹೇಳಿಕೊಂಡಿದ್ದಾರೆ. ಹೌದು ಬೆಂಗಳೂರಿನ ದಂಪತಿಗಳಿಬ್ಬರು ಎದುರಿಸುತ್ತಿರುವ ಆರ್ಥಿಕ ಒತ್ತಡಗಳನ್ನು ವಿವರಿಸುವ ಪೋಸ್ಟ್ ಆನ್‌ಲೈನ್‌ನಲ್ಲಿ ವ್ಯಾಪಕ ಚರ್ಚೆಗೆ ನಾಂದಿ ಹಾಡಿದೆ. ಅಭಿಷೇಕ್ ಸಿಂಗ್ ಎಂಬವವರು ಈ ಬಗ್ಗೆ ಎಕ್ಸ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಸ್ನೇಹಿತನ ಕಥೆಯನ್ನು ಮತ್ತು ಮದುವೆಯ ನಂತರ ಅವರು ಮಾಡಬೇಕಾದ ಆರ್ಥಿಕ ಹೊಂದಾಣಿಕೆಗಳ ಬಗ್ಗೆ ಇಲ್ಲಿ ಹೇಳಿದ್ದಾರೆ.

ನನ್ನ ಸ್ನೇಹಿತ ಇತ್ತೀಚೆಗೆ ಬೆಂಗಳೂರಿನಲ್ಲಿ ವಿವಾಹವಾದರು. ಮದುವೆಯಾದ ತಕ್ಷಣ, ಅವರ ಪತ್ನಿ ‘ನಾನು ಎಲ್ಲವನ್ನೂ ಬಿಟ್ಟು ಸರ್ಕಾರಿ ಪರೀಕ್ಷೆಗಳಿಗೆ ಪೂರ್ಣ ಸಮಯ ತಯಾರಿ ನಡೆಸುತ್ತೇನೆ.’ ಎಂದು ಹೇಳಿದ್ದಾರೆ. ಇದಕ್ಕೆ ಬೇಡ ಎಂದು ಹೇಳುವಂತಿಲ್ಲ, ಯಾಕೆಂದರೆ ಅದು ಅವರ ಕನಸು, ಅದನ್ನು ನನಸು ಮಾಡುವುದು ನನ್ನ ಸ್ನೇಹಿತನ ಕರ್ತವ್ಯ, ಮದುವೆಗೆ ಮೊದಲು ಆಕೆ ಕೆಲಸಕ್ಕೆ ಹೋಗುತ್ತಿರಲಿಲ್ಲ. ಕೆಲಸವಿಲ್ಲ, ಕೇವಲ ತಯಾರಿ. ಆದ್ದರಿಂದ ಅವಳ ಕಡೆಯಿಂದ ಆದಾಯ ಅಕ್ಷರಶಃ ಶೂನ್ಯ. ಹಾಗಾಗಿ ಮದುವೆಯ ನಂತರ ಬೆಂಗಳೂರಿನಂತಹ ನಗರವು ಹಣ ಎಷ್ಟು ಬೇಗ ಖಾಲಿಯಾಗುತ್ತದೆ ಎಂಬುದಕ್ಕೆ ಇವರ ಜೀವನ ಉದಾಹರಣೆ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್​​​ನಲ್ಲಿ ಹೇಳಿರುವ ಪ್ರಕಾರ ಬೆಂಗಳೂರಿನಂತಹ ನಗರದಲ್ಲಿ ಖರ್ಚುಗಳು ಎಷ್ಟು ಬೇಗನೆ ಹೆಚ್ಚಾಗಬಹುದು ಎಂಬುದನ್ನು ದಂಪತಿಗಳು ಬೇಗನೆ ಅರಿತುಕೊಂಡರು. ನನ್ನ ಗೆಳೆಯ ಮೊದಲು ಒಬ್ಬಂಟಿಯಾಗಿದ್ದ, ಆಗ ತುಂಬಾ ಆರಾಮದಾಯಕ ಜೀವನ ನಡೆಸುತ್ತಿದ್ದ, ಆದರೆ ಇದೀಗ ಆ ಪರಿಸ್ಥಿತಿ ಇಲ್ಲ ಎಂದು ಹೇಳಿಕೊಂಡಿದ್ದಾರೆ.

ಇನ್ನು ಈ ಪೋಸ್ಟ್​​​ನಲ್ಲಿ ತಮ್ಮ ಸ್ನೇಹಿತನಿಗೆ ಮದುವೆಗೂ ಮೊದಲು ಆಗುತ್ತಿದ್ದ ಖರ್ಚು ಹಾಗೂ ಮದುವೆಯ ನಂತರದ ಖರ್ಚಿನ ಪಟ್ಟಿ ಹೇಳಿದ್ದಾರೆ. ಮದುವೆಗೂ ಮುನ್ನ ಅವರಿಗಿದ್ದ ಸಂಬಳ 1.15 ಲಕ್ಷ ರೂ. ಅವರ ಮಾಸಿಕ ಖರ್ಚುಗಳು ಬಾಡಿಗೆ ಅಥವಾ ಪಿಜಿ 16 ಸಾವಿರ ರೂ. ಊಟದ ಖರ್ಚು 7 ಸಾವಿರ ರೂ., ಇಂಧನ ಹಾಗೂ ಮೆಟ್ರೋ 3 ಸಾವಿರ ರೂ., ಇಂಟರ್ನೆಟ್ ಜೊತೆಗೆ ಫೋನ್ 1 ಸಾವಿರ ರೂ., ಜಿಮ್​​​​ ಖರ್ಚು 1,500 ರೂ., ಹೊರಗೆ ಊಟ 4 ಸಾವಿರ ರೂ., ಶಾಂಪಿಂಗ್ 2 ಸಾವಿರ ರೂ. ಒಟ್ಟು ತಿಂಗಳ ಖರ್ಚು 35 ಸಾವಿರ ರೂ. ಉಳಿತಾಯ 80 ಸಾವಿರ ರೂ.

ಇಲ್ಲಿದೆ ನೋಡಿ ಪೋಸ್ಟ್ :


ಆದರೆ ಇದೀಗ ಮದುವೆಯ ನಂತರ, ಜೀವನ ಬದಲಾವಣೆ ಆಗಿದೆ. ವೆಚ್ಚ ಕೂಡ ಬದಲಾವಣೆ ಆಗಿದೆ. ಒಬ್ಬನೇ ದುಡಿಯುವುದು ಎಷ್ಟೊಂದು ಕಷ್ಟ ಎಂಬುದಕ್ಕೆ ಇದೇ ಉದಾಹರಣೆ. ಇಬ್ಬರು ದುಡಿದ್ರೆ, ಈ ಖರ್ಚಿನ ಹೊರೆ ಒಬ್ಬರ ಮೇಲೆ ಬೀಳುತ್ತಿರಲಿಲ್ಲ. 1BHK ಬಾಡಿಗೆ 40 ಸಾವಿರ ರೂ., ದಿನಸಿ ಮತ್ತು ಅಡುಗೆಮನೆ 18 ಸಾವಿರ ರೂ., ಮನೆ ಸೇವಕಿಗೆ 7,000 ರೂ., ವಿದ್ಯುತ್, ವೈಫೈ ಜೊತೆಗೆ ಗ್ಯಾಸ್ 6,000 ರೂ., ಇಬ್ಬರಿಗೆ ಪ್ರಯಾಣದ ಖರ್ಚು 10,000 ರೂ., ಊಟ ಜೊತೆಗೆ ವಾರಾಂತ್ಯದ ಯೋಜನೆ 12,000 ರೂ., ಜತೆಗೆ ಶಾಪಿಂಗ್ 8 ಸಾವಿರ ರೂ., ಆರೋಗ್ಯ ವಿಮೆ ಮತ್ತು ಔಷಧಿಗಳು 5 ಸಾವಿರ ರೂ. ವಾಷಿಂಗ್ ಮೆಷಿನ್, ಹಾಸಿಗೆ ಮತ್ತು ಇತರ ವಸ್ತುಗಳಿಗೆ, ಪೀಠೋಪಕರಣಗಳು, ಜತೆಗೆ ಅದರ ಇಎಮ್​​​ಐ 15,000 ರೂ. ಒಟ್ಟು ತಿಂಗಳು ಖರ್ಚು 1,21,000 ರೂ.

ಇದನ್ನೂ ಓದಿ: ಬಣ್ಣ ಎರಚಿದ್ದಕ್ಕೆ 4 ವರ್ಷದ ಮೊಮ್ಮಗನ ಮೇಲೆ ಬಿಸಿನೀರು ಸುರಿದ ಅಜ್ಜಿ: ವಿಲವಿಲನೆ ಒದ್ದಾಡಿದ ಬಾಲಕ

ಇದೀಗ ಈ ಖರ್ಚು ಅವರಲ್ಲಿ ಆರ್ಥಿಕ ಒತ್ತಡವನ್ನು ಹೆಚ್ಚಿಸಿದೆ. ಮೊದಲಿನಂತೆ ಈಗ ಉಳಿತಾಯಗಳು ಆಗುತ್ತಿಲ್ಲ ಎಂಬ ನೋವು ಅವರಲ್ಲಿ ಇದೆ. ದೊಡ್ಡ ನಗರಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅನೇಕ ದಂಪತಿಗಳು ಎದುರಿಸಬಹುದಾದ ವಾಸ್ತವವನ್ನು ಇದು ಎತ್ತಿ ತೋರಿಸುತ್ತಿದೆ. ಈ ಪೋಸ್ಟ್ X ನಲ್ಲಿ 197,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ ಮತ್ತು ಪ್ರಮುಖ ನಗರಗಳಲ್ಲಿನ ಹಣಕಾಸು ಯೋಜನೆ ಮತ್ತು ಜೀವನ ವೆಚ್ಚದ ಬಗ್ಗೆ ನೆಟ್ಟಿಗರು ಚರ್ಚಿಸಿದ್ದಾರೆ. ಇದು ಮೆಟ್ರೋ ನಗರದಲ್ಲಿ ವಾಸಿಸುವವವರ ವಾಸ್ತವ. ಮದುವೆಯ ನಂತರ ಖರ್ಚುಗಳು ದ್ವಿಗುಣಗೊಂಡಾಗ ಉತ್ತಮ ಸಂಬಳ ಕೂಡ ಬೇಗನೆ ಮಾಯವಾಗುತ್ತದೆ ಎಂದು ಒಬ್ಬರು ಕಮೆಂಟ್​ ಮಾಡಿದ್ದಾರೆ. ಬೆಂಗಳೂರಿನಂತಹ ನಗರದಲ್ಲಿ ಮದುವೆಯಾದಾಗ ಸರ್ಕಾರಿ ಪರೀಕ್ಷೆಗಳಿಗೆ ತಯಾರಿ ನಡೆಸುವುದು ಆರ್ಥಿಕ ಬೆಂಬಲವಿಲ್ಲದಿದ್ದರೆ ತುಂಬಾ ಕಷ್ಟವಾಗುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us