ಮುಸ್ಲಿಂ ವ್ಯಾಪಾರಿಗಳ ಬಾಯ್ಕಾಟ್: ಹಿಂದೂಪರ ಸಂಘಟನೆ ವಿರುದ್ಧ ಬೆಂಗಳೂರು ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಕಿಡಿ
ವ್ಯಾಪಾರ ವಿರೋಧದ ಹೆಸರಲ್ಲಿ ಧರ್ಮವನ್ನ ದುರಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಹಿಂದೂಪರ ಸಂಘಟನೆಗೆ ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ತರಾಟೆಗೆ ತೆಗೆದುಕೊಂಡಿದೆ.
ಬೆಂಗಳೂರು: ನಗರದ ವಿವಿಪುರಂನಲ್ಲಿ ನಡೆದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇಗುಲದ ರಥೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನಿರಾಕರಣೆ ಸಂಬಂಧ ಬೆಂಗಳೂರು ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಹಿಂದೂಪರ ಸಂಘಟನೆಗಳು ಮುಸ್ಲಿಂ ವ್ಯಾಪಾರಿಗಳನ್ನು ಬಾಯ್ಕಾಟ್ ಮಾಡಿದಕ್ಕೆ ವ್ಯಾಪಾರಿಗಳ ಸಂಘ ತೀವ್ರ ಆಕ್ರೋಶ ಹೊರ ಹಾಕಿದೆ.
ವಿವಿ ಪುರಂ ಸುಬ್ರಹ್ಮಣ್ಯ ದೇವಾಲಯದಲ್ಲಿ ಮುಸ್ಲಿಂ ವ್ಯಾಪಾರಿಗಳ ನಿರ್ಭಂದಕ್ಕೆ ಹಿಂದೂ ಸಂಘಟನೆ ಒತ್ತಾಯ ಮಾಡಿತ್ತು. ಈ ಹಿನ್ನೆಲೆ ವ್ಯಾಪಾರ ವಿರೋಧದ ಹೆಸರಲ್ಲಿ ಧರ್ಮವನ್ನ ದುರಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ತರಾಟೆಗೆ ತೆಗೆದುಕೊಂಡಿದೆ. ಬೀದಿ ಬದಿ ವ್ಯಾಪಾರಿಗಳನ್ನ ಒಟ್ಟುಗೂಡಿಸಿರುವುದು ಅವರ ಶ್ರಮ ಮತ್ತು ಹಸಿವೇ ವಿನಃ ಧರ್ಮ ಜಾತಿಯಲ್ಲ ಎಂದು ಪತ್ರಿಕಾ ಪ್ರಕಟಣೆ ಮೂಲಕ ಹಿಂದೂ ಸಂಘಟನೆಗಳ ವಿರುದ್ಧ ಬೀದಿ ಬದಿ ವ್ಯಾಪಾರಿಗಳ ಸಂಘ ಕಿಡಿಕಾರಿದೆ.
ಇದನ್ನೂ ಓದಿ: ವಿವಿ ಪುರಂ ಸುಬ್ರಹ್ಮಣ್ಯ ಸ್ವಾಮಿ ಬೆಳ್ಳಿ ತೇರು: ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ, ಪ್ರತಿಭಟಿಸಲು ಮುಂದಾಗಿದ್ದವರ ಬಂಧನ
ಇಂತಹ ನೀಚ ನಡೆಗಳು ಬೀದಿ ವ್ಯಾಪಾರಿಗಳಲ್ಲಿ ಭಯವನ್ನು ಉಂಟು ಮಾಡಿ, ಜೀವನೋಪಾಯ ಕಸಿದುಹೋಗುವ ಭಯದಲ್ಲಿ ಜೀವಿಸುವಂತಾಗಿದೆ. ಧರ್ಮದ ಹೆಸರಿನಲ್ಲಿ ಈ ರೀತಿ ವ್ಯಾಪಾರ ಬಹಿಷ್ಕಾರ ಹಾಕೋದು ಸಂವಿಧಾನವನ್ನು ವಿರೋಧ ಮಾಡಿದಂತೆ. ಸರ್ಕಾರ ಈ ಬಗ್ಗೆ ಕ್ರಮಕ್ಕೆ ಮುಂದಾಗಬೇಕು. ಧರ್ಮದ ಹೆಸರಿನಲ್ಲಿ ಸಂವಿಧಾನ ವಿರೋಧಿ ಕೆಲಸ ಮಾಡುವವರನ್ನ ಕೂಡಲೇ ಬಂಧಿಸಬೇಕು ಎಂದು ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:54 pm, Thu, 1 December 22