ಮ್ಯಾಟ್ರಿಮೋನಿಯಲ್​​ನಲ್ಲಿ ಪರಿಚಯವಾದ ವ್ಯಕ್ತಿಯಿಂದ ವೈದ್ಯೆಗೆ ಪಂಗನಾಮ: ಪೀಕಿದ್ದು 2.2 ಲಕ್ಷಕ್ಕೂ ಅಧಿಕ ಹಣ

ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಮೂಲಕ ಜರ್ಮನಿಯ ನೇತ್ರ ತಜ್ಞನೆಂದು ಪರಿಚಯಿಸಿಕೊಂಡಿದ್ದ ವ್ಯಕ್ತಿಯೋರ್ವ ಬೆಂಗಳೂರಿನ ವೈದ್ಯೆಗೆ ಮದುವೆಯಾಗುವುದಾಗಿ ನಂಬಿಸಿ ಬರೋಬ್ಬರಿ 22.2 ಲಕ್ಷಕ್ಕೂ ಹೆಚ್ಚು ಹಣ ಪಡೆದು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಪೂರ್ವ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮ್ಯಾಟ್ರಿಮೋನಿಯಲ್​​ನಲ್ಲಿ ಪರಿಚಯವಾದ ವ್ಯಕ್ತಿಯಿಂದ ವೈದ್ಯೆಗೆ ಪಂಗನಾಮ: ಪೀಕಿದ್ದು 2.2 ಲಕ್ಷಕ್ಕೂ ಅಧಿಕ ಹಣ
ಸಾಂದರ್ಭಿಕ ಚಿತ್ರ
Image Credit source: Getty Images

Updated on: Sep 06, 2026 | 6:28 AM

ಬೆಂಗಳೂರು, ಸೆಪ್ಟೆಂಬರ್​​ 06: ಜನಪ್ರಿಯ ಮ್ಯಾಟ್ರಿಮೋನಿಯಲ್‌ ವೇದಿಕೆಯ ಮೂಲಕ ಪರಿಚಯವಾದ ವ್ಯಕ್ತಿಯೋರ್ವ ಬೆಂಗಳೂರಿನ ವೈದ್ಯೆಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ನಡೆದಿದೆ. ರಿಚರ್ಡ್ಸ್ ಟೌನ್ ನಿವಾಸಿಯಾಗಿರುವ ವೈದ್ಯೆ ನೀಡಿದ ದೂರಿನ ಪ್ರಕಾರ, 2025ರ ಡಿಸೆಂಬರ್ 20ರಂದು ಮ್ಯಾಟ್ರಿಮೋನಿಯಲ್‌ ಪೋರ್ಟಲ್‌ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಕೆಲವೇ ದಿನಗಳಲ್ಲಿ ತಾನು ಡಾ. ಗಣೇಶ್ ಬರ್ಮನ್ ಎಂದು ಪರಿಚಯಿಸಿಕೊಂಡ ವ್ಯಕ್ತಿಯಿಂದ ಪ್ರತಿಕ್ರಿಯೆ ಬಂದಿತ್ತು. ವೈದ್ಯೆಯ ಜೊತೆಗೆ ವಿಶ್ವಾಸ ಗಳಿಸಿದ್ದ ಆರೋಪಿ ಹಂತ ಹಂತವಾಗಿ ಬರೋಬ್ಬರಿ 22 ಲಕ್ಷಕ್ಕೂ ಅಧಿಕ ಹಣವನ್ನು ಪೀಕಿದ್ದಾನೆ ಎನ್ನಲಾಗಿದೆ.

ತಾನು ಜರ್ಮನಿಯ ಬರ್ಲಿನ್‌ನಲ್ಲಿ ನೆಲೆಸಿರುವ ನೇತ್ರ ತಜ್ಞ ಎಂದು ಆತ ಹೇಳಿಕೊಂಡಿದ್ದ. ದೂರವಾಣಿ ಸಂಖ್ಯೆಯನ್ನು ಕೂಡ ವೈದ್ಯೆಯ ಜೊತೆಗೆ ಹಂಚಿಕೊಂಡಿದ್ದ. ತಾನು ವಿಚ್ಛೇದಿತನಾಗಿದ್ದು ಜರ್ಮನಿಯಲ್ಲಿ ವಾಸಿಸುತ್ತಿದ್ದೇನೆ. ತನ್ನ ಏಳು ವರ್ಷದ ಮಗಳು ಬೋರ್ಡಿಂಗ್ ಶಾಲೆಯಲ್ಲಿ ಓದುತ್ತಿದ್ದು, ಪೋಷಕರು ಇಂಗ್ಲೆಂಡ್‌ನಲ್ಲಿದ್ದಾರೆ. ತಾನು ಅವರ ಏಕೈಕ ಪುತ್ರ ಎಂದು ಸಂತ್ರಸ್ತ ವೈದ್ಯೆಗೆ ತಿಳಿಸಿದ್ದ. ಅಲ್ಲದೆ, 2026ರ ಫೆಬ್ರವರಿಯ ವೇಳೆಗೆ ಭಾರತಕ್ಕೆ ಮರಳಿ ದೆಹಲಿಯಲ್ಲಿ ಆಸ್ಪತ್ರೆ ಆರಂಭಿಸುವ ಯೋಜನೆ ಹೊಂದಿರುವುದಾಗಿಯೂ ಆತ ಹೇಳಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಚಿನ್ನ ಖರೀದಿಗೆ ಬಂದು ಆಭರಣದ ಬಾಕ್ಸನ್ನೇ ಎತ್ತಿಕೊಂಡು ಓಡಿಹೋದ ಮಹಿಳೆ!

ಭಾರತದಲ್ಲಿ ಆಸ್ಪತ್ರೆ ನಿರ್ಮಿಸುವ ನೆಪದಲ್ಲಿ ಹಣ ಪಡೆದ ವಂಚಕ

ಇಬ್ಬರೂ ವಾಟ್ಸ್ಆ್ಯಪ್ ಕರೆಗಳು ಹಾಗೂ ಚಾಟ್‌ಗಳ ಮೂಲಕ ಸಂವಹನ ನಡೆಸುತ್ತಿದ್ದರು. ಕ್ರಮೇಣ ಆರೋಪಿ ಮದುವೆ ವಿಚಾರ ಹಾಗೂ ಭಾರತದಲ್ಲಿ ಆಸ್ಪತ್ರೆ ಆರಂಭಿಸುವ ತನ್ನ ಮಹತ್ವಾಕಾಂಕ್ಷೆಯ ಯೋಜನೆಗಳ ಬಗ್ಗೆ ಮಾತನಾಡುವ ಮೂಲಕ ಪ್ರೇಮಾ ಅವರ ವಿಶ್ವಾಸ ಗಳಿಸಿದ್ದ. ಬಳಿಕ ವಂಚನೆಯ ನಿಜವಾದ ಆಟ ಆರಂಭವಾಗಿದ್ದು, ತನ್ನ ಅಂತಾರಾಷ್ಟ್ರೀಯ ಬ್ಯಾಂಕ್ ಖಾತೆ ಇದ್ದಕ್ಕಿದ್ದಂತೆ ಕಾರ್ಯನಿರ್ವಹಿಸುತ್ತಿಲ್ಲ. ಆಸ್ಪತ್ರೆ ಯೋಜನೆಗಾಗಿ ಭಾರತದಲ್ಲಿರುವ ಏಜೆಂಟ್‌ಗಳಿಗೆ ಹಣ ವರ್ಗಾವಣೆ ಮಾಡುತ್ತಿದ್ದ ವೇಳೆ ಈ ಸಮಸ್ಯೆ ಎದುರಾಗಿದೆ ಎಂದು ವೈದ್ಯೆಗೆ ತಿಳಿಸಿದ್ದ ಆರೋಪಿ, ಖಾತೆಯ ಸಮಸ್ಯೆ ಬಗೆಹರಿಯುವವರೆಗೆ ತನ್ನ ಬದಲಿಗೆ ವಿವಿಧ ಏಜೆಂಟ್‌ಗಳ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸುವಂತೆ ವೈದ್ಯೆಯನ್ನು ಆತ ಕೇಳಿಕೊಂಡಿದ್ದಾನೆ. ಖಾತೆ ಸರಿಯಾದ ಬಳಿಕ ಹಣವನ್ನು ವಾಪಸ್ ನೀಡುವುದಾಗಿ ಭರವಸೆಯನ್ನೂ ನೀಡಿದ್ದಾನೆ.

ಆತನ ಮಾತನ್ನು ನಂಬಿದ ವೈದ್ಯೆ 2026ರ ಜನವರಿ 9ರಿಂದ 24ರವರೆಗೆ ತಮ್ಮ ಬ್ಯಾಂಕ್ ಖಾತೆಯಿಂದ ವಿವಿಧ ಖಾತೆಗಳಿಗೆ ದೊಡ್ಡ ಮೊತ್ತದ ಹಣ ವರ್ಗಾಯಿಸಿದ್ದಾರೆ. ತಮ್ಮ ಖಾತೆಯಲ್ಲಿ ಸಾಕಷ್ಟು ಹಣ ಇಲ್ಲದ ಕಾರಣ, ಭಾವಮೈದುನನಿಂದಲೂ ಆರ್ಥಿಕ ನೆರವು ಪಡೆದಿದ್ದು, ಅವರೂ ತಮ್ಮ ಬ್ಯಾಂಕ್ ಖಾತೆಯಿಂದ ಹೆಚ್ಚುವರಿ ಹಣವನ್ನು ವರ್ಗಾಯಿಸಿದ್ದಾರೆ. ಒಟ್ಟು 22.2 ಲಕ್ಷಕ್ಕೂ ಅಧಿಕ ಹಣ ವರ್ಗಾಯಿಸಿದ ಬಳಿಕವೂ ವಂಚಕ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಇದರಿಂದ ಅನುಮಾನಗೊಂಡ ವೈದ್ಯೆಗೆ ತಾವು ವಂಚನೆಗೆ ಒಳಗಾಗಿರುವುದು ಅರಿವಾಗಿದೆ. ಈ ಸಂಬಂಧ ಪೂರ್ವ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us