ಮಳೆ ನಡುವೆ ಬೆಂಗಳೂರಿಗೆ ಕಸದ ಸಮಸ್ಯೆ: ವಿಲೆವಾರಿಯಾಗದೆ ಉಳಿದಿದೆ ಸಾವಿರಾರು ಟನ್ ಕಸ

| Updated By: ಗಣಪತಿ ಶರ್ಮ

Updated on: Oct 25, 2024 | 7:22 AM

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆಯಿಂದಾಗಿ ಆಗುತ್ತಿರುವ ಅವಾಂತರಗಳು ಒಂದಲ್ಲ ಎರಡಲ್ಲ. ಇದೀಗ ಮಳೆಯಿಂದಾಗಿ ಕಸ ಡಂಪಿಂಗ್ ಜಾಗದಲ್ಲಿ ಕಸ ವಿಲೇವಾರಿ ಲಾರಿಗಳು ಹೂತು ಹೋಗಿದ್ದು, ನಗರದಲ್ಲೆಡೆ ಕಸ ಗಬ್ಬು ನಾರುತ್ತಿದೆ. ನಾಲ್ಕೈದು ದಿನಗಳಿಂದಲೂ ಕಸದ ಲಾರಿಗಳು ನಗರಕ್ಕೆ ಬಂದಿಲ್ಲ ಮತ್ತು ಕಸ ತೆಗೆದುಕೊಂಡು ಹೋಗಿಲ್ಲ.

ಮಳೆ ನಡುವೆ ಬೆಂಗಳೂರಿಗೆ ಕಸದ ಸಮಸ್ಯೆ: ವಿಲೆವಾರಿಯಾಗದೆ ಉಳಿದಿದೆ ಸಾವಿರಾರು ಟನ್ ಕಸ
ಮಳೆ ನಡುವೆ ಬೆಂಗಳೂರಿಗೆ ಕಸದ ಸಮಸ್ಯೆ: ವಿಲೆವಾರಿಯಾಗದೆ ಉಳಿದಿದೆ ಸಾವಿರಾರು ಟನ್ ಕಸ
Follow us on

ಬೆಂಗಳೂರು, ಅಕ್ಟೋಬರ್ 25: ರಾಜಧಾನಿ ಬೆಂಗಳೂರಿನಲ್ಲಿ ಮಳೆಯಿಂದಾಗಿ ಆಗುತ್ತಿರುವ ಅನೇಕ ಸಮಸ್ಯೆಗಳು ಸೃಷ್ಟಿಯಾಗಿವೆ. ಇಷ್ಟು ದಿನ ನೀರು, ಚರಂಡಿ, ರಸ್ತೆ ಸಮಸ್ಯೆ ಎದುರಾಗಿತ್ತು. ಇದೀಗ ನಗರದೆಲ್ಲಡೆ ಕಸದ ಸಮಸ್ಯೆ ತಾಂಡವವಾಡುತ್ತಿದೆ. ನಗರವಾಸಿಗಳು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಳೆ ನಡುವೆಯೇ ಕಸವನ್ನ ಡಂಪ್ ಮಾಡಲು ಹೋಗಿದ್ದ ಲಾರಿಗಳು ಗುಂಡಿಗಳಲ್ಲಿ ಹೋತು ಹೋಗಿದ್ದು, ನಾಲ್ಕೈದು ದಿನಗಳಿಂದಲೂ ಕಸದ ಲಾರಿಗಳು ನಗರಕ್ಕೆ ವಾಪಾಸಾಗಿಲ್ಲ. ಹೀಗಾಗಿ ನಗರದೆಲ್ಲಡೆ ಕಸದ ಸಮಸ್ಯೆ ತಾಂಡವವಾಡುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.

ಬೆಂಗಳೂರಿನ ಕಸ ವಿಲೇವಾರಿ‌ ಮಾಡಲು ನಗರದಲ್ಲಿ ‌ಇರುವುದು ಒಂದೇ ಒಂದು ವಾರ್ಡ್. ಅದು ಕೋಗಿಲು ಕ್ರಾಸ್​ನಲ್ಲಿರುವ ಬೆಳ್ಳಳ್ಳಿ ಘಟಕ.‌ ಎಷ್ಟೇ ಕಸವಿದ್ದರೂ ಈ ಘಟದಲ್ಲಿಯೇ ಕಸ ವಿಲೇವಾರಿ ಮಾಡಲಾಗುತ್ತದೆ. ಆದರೆ ಕಳೆದ ಒಂದು ವಾರದ ಮಳೆಯಿಂದಾಗಿ ಕಸದ ಯಾರ್ಡ್​​ನಲ್ಲಿ ಅಡಿಗಳಷ್ಟು ಆಳದ ಗುಂಡಿ ನಿರ್ಮಾಣವಾಗಿದ್ದು, ಗುಂಡಿಗಳಲ್ಲಿ ಹತ್ತಾರು ಲಾರಿಗಳು‌ ಹೋತು ಹೋಗಿವೆ. ಇವುಗಳನ್ನು ಹೊರತೆಗೆಯುವುದೇ ದೊಡ್ಡ ಸಮಸ್ಯೆಯಾಗಿ ಹೋಗಿದೆ.‌ ಇನ್ನು ಈ ಮಧ್ಯೆ ನಾಲ್ಕು ದಿನಗಳಿಂದ ವಿಲೇಯಾಗದೇ ಕಸ ಹಾಗೇಯೇ ಉಳಿದಿದ್ದು 10-12 ಸಾವಿರ ಮೆಟ್ರಿಕ್ ಟನ್ ಕಸ ಉಳಿದೆದೆ. ಈ ಎಲ್ಲಾ ಕಸ ವಿಲೇಯಾಗಲು ಕನಿಷ್ಠ ವಾರವಾದರೂ ಸಮಯ ಬೇಕಾಗಿದೆ. ‌ಯಾಕೆಂದರೆ ಕಸ ವಿಲೇವಾರಿಗೆ ಬೆಳ್ಳಳ್ಳಿ ಬಿಟ್ಟರೆ ಕಸ ವಿಲೇಗೆ ಬಿಬಿಎಂಪಿಗೂ ಬೇರೆ ಜಾಗವಿಲ್ಲ. ಹೀಗಾಗಿ ನಗರದೆಲ್ಲಡೆ ಕಸದ ಸಮಸ್ಯೆ ಎದುರಾಗಿದೆ.‌

ಕೊಳೆತ ಕಸದಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ

ಇನ್ನು ಕಸ ಡಂಪಿಂಗ್ ಯಾರ್ಡ್​​ನಲ್ಲಿ ಕಸದ ಲಾರಿಗಳು ಕಿಲೋಮೀಟರ್​​ಗಟ್ಟಲೇ ಸಾಲುಗಟ್ಟಿ ನಿಂತಿದ್ದು, ರಾಜಧಾನಿಯಲ್ಲೆಡೆ ಕಸದ ಸಮಸ್ಯೆ ಎದುರಾಗಿದೆ. ವಿಲೇವಾರಿಯಾಗದ ಕಸದಿಂದ ಬೆಂಗಳೂರು ಗಬ್ಬೆದ್ದು ನಾರುತ್ತಿದ್ದು, ಎಲ್ಲಿ ನೋಡಿದರೂ ಕಸದ ರಾಶಿ ಕಾಣುತ್ತಿದೆ. ಇನ್ನು ಕೊಳೆತ ಕಸದಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದ್ದು, ಕಸ ವಿಲೇವಾರಿ ಮಾಡಬೇಕಾದ ಬಿಬಿಎಂಪಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಒಂದಾದಮೇಲೊಂದು ಕಟ್ಟಡ ಕುಸಿಯುವ ಭೀತಿ: ಇದೀಗ ಮತ್ತೊಂದು ಕಟ್ಟಡ ಬಿರುಕು

ಈ ಕುರಿತಾಗಿ ಮಾತನಾಡಿರುವ ವಿರೋಧ ಪಕ್ಷದ ನಾಯಕ ಆರ್ ಆಶೊಕ್, ಸಿಲಿಕಾನ್ ಸಿಟಿ ಕಸದಿಂದ ಗಬ್ಬೆದ್ದು ನಾರುತಿದೆ. ಇದೇನಾ ಬ್ರಾಂಡ್ ಬೆಂಗಳೂರು ಎಂದು ಪ್ರಶ್ನಿಸಿದ್ದಾರೆ.

ಈ ಕುರಿತಾಗಿ ಬಿಬಿಎಂಪಿ ಅಧಿಕಾರಿಗಳು ಇಲ್ಲಿಯವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬೆಂಗಳೂರು ಜನರಿಗೆ ಇನ್ನಿಲ್ಲದ ಸಮಸ್ಯೆಗಳು ಉಂಟಾಗುತ್ತಿದ್ದು, ಆದಷ್ಟು ಬೇಗ ಗುಂಡಿಯಲ್ಲಿ ಸಿಲುಕಿರುವ ಲಾರಿಗಳನ್ನು ಬಿಡುಗಡೆ ಮಾಡಿಸಿ ಕಸ ವಿಲೇವಾರಿಗೆ ಅನುವು ಮಾಡಿಕೊಡಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ