“ನಿಮ್ಮ ಈ ಪರೀಕ್ಷೆಗಿಂತ ಸಾಯುವುದೇ ಉತ್ತಮ”: ಪೊಲೀಸರ ಮುಂದೆ ಬೈಕ್‌ಗೆ ಬೆಂಕಿ ಹಚ್ಚಿ, ಪರಾರಿಯಾದ ಯುವಕ
ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಸಂಚಾರ ಪೊಲೀಸರ ತಪಾಸಣೆ ವೇಳೆ, ಕುಡಿದು ವಾಹನ ಚಲಾಯಿಸುತ್ತಿದ್ದ ವೆಂಕಟೇಶ್ ಎಂಬಾತ ಬ್ರೀತ್ ಅನಲೈಜರ್ ಪರೀಕ್ಷೆಗೆ ನಿರಾಕರಿಸಿದ್ದಾನೆ. ಪೊಲೀಸರಿಗೆ ಬೆದರಿಕೆ ಹಾಕಿ, ತನ್ನ ಬೈಕ್‌ಗೆ ತಾನೇ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಪೊಲೀಸರು ನೀಡಿದ ನೋಟಿಸ್ ಕೂಡ ನಿರಾಕರಿಸಿ, ಈ ಕೃತ್ಯವನ್ನು ಮಾಡಿದ್ದಾನೆ ಎಂದು ಹೇಳಲಾಗಿದೆ.

ಬೆಂಗಳೂರು, ಜ.1: ಬೆಂಗಳೂರಿನ (Bengaluru drunk driving) ಮೈಸೂರು ರಸ್ತೆಯಲ್ಲಿ ತಡರಾತ್ರಿ ಕುಡಿದು ವಾಹನ ಚಲಾಯಿಸುವವರ ತಪಾಸಣೆ ನಡೆಸುತ್ತಿದ್ದ ವೇಳೆ ಒಂದು ಅಹಿತಕರ ಘಟನೆಯೊಂದು ನಡೆದಿದೆ. ಶನಿವಾರದಂದು (ಡಿ.27) ಕುಡಿದು ವಾಹನ ಚಲಾಯಿಸುತ್ತಿದ್ದ ಬೈಕ್ ಸವಾರನೊಬ್ಬ ಸಂಚಾರ ಪೊಲೀಸರಿಗೆ ಬೆದರಿಕೆ ಹಾಕಿ, ಬ್ರೀತ್ ಅನಲೈಜರ್ ಪರೀಕ್ಷೆಗೆ ನಿರಾಕರಿಸಿ, ತನ್ನ ಸ್ವಂತ ಬೈಕ್‌ಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯ ಕವಿಕಾ ಜಂಕ್ಷನ್ ಬಳಿ ರಾತ್ರಿ 10:35 ರ ಸುಮಾರಿಗೆ ಈ ಘಟನೆ ನಡೆದಿದೆ. ಪೊಲೀಸ್ ಅಧಿಕಾರಿಗಳು ಕುಡಿದು ವಾಹನ ಚಲಾಯಿಸುವವರನ್ನು ಹಿಡಿದು ದಂಡ ಹಾಕುವ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದರು. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿತ್ತು. ತಪಾಸಣೆಯ ಸಮಯದಲ್ಲಿ, ಪೊಲೀಸರು ಕುಡಿದು ವಾಹನ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ಸವಾರನನ್ನು ತಡೆದು ಬ್ರೀತ್ ಅನಲೈಸರ್ ಊದುವಂತೆ ಹೇಳಿದ್ದಾರೆ. ಇದಕ್ಕೆ ನಿರಾಕರಿಸಿ, ಪೊಲೀಸರ ಜತೆಗೆ ಕಿರಿಕ್ ಮಾಡಿಕೊಂಡಿದ್ದಾನೆ.
ವ್ಯಕ್ತಿಯನ್ನು ಬಿಟಿಎಂ ಲೇಔಟ್ 1ನೇ ಹಂತದ ನಿವಾಸಿ ವೆಂಕಟೇಶ್ ಎಂದು ಹೇಳಲಾಗಿದೆ. ಪೊಲೀಸರ ಪ್ರಕಾರ, ಸವಾರ ಡ್ರಿಂಕ್ ಆಂಡ್ ಡ್ರೈವ್ ಮಾಡುತ್ತಿದ್ದ, ಈ ಕಾರಣಕ್ಕೆ ಬ್ರೀತ್ ಅನಲೈಸರ್ ಊದಲು ಹೇಳಿದ್ದೇವೆ. ಆದರೆ, ಅದಕ್ಕೆ ಒಪ್ಪುವ ಬದಲು, ನಮ್ಮ ಮೇಲೆಯೇ ದಾಳಿ ಮಾಡಲು ಮುಂದಾಗಿದ್ದಾನೆ. ಜತೆಗೆ ನಮಗೆ ಬೆದರಿಕೆ ಹಾಕಿದ್ದಾನೆ ಎಂದು ಹೇಳಿದ್ದಾರೆ. ಇನ್ನು ವರದಿಯಗಳ ಪ್ರಕಾರ, ಪೊಲೀಸರ ಜತೆಗೆ ಗಲಾಟೆ ಮಾಡುವಾಗ ನಿಮ್ಮ ಈ ಪರೀಕ್ಷೆಯಲ್ಲಿ ಉತ್ತೀರ್ಣನಾಗುವುದಕ್ಕಿಂತ ಸಾಯುವುದು ಅಥವಾ ತನ್ನ ಬೈಕನ್ನು ಸುಡುವುದು ಉತ್ತಮ ಎಂದು ಹೇಳಿದ್ದೇನೆ. ನಂತರ ಅವನನ್ನು ಮತ್ತು ಆತನ ಬೈಕ್ನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.
ಇದನ್ನೂ ಓದಿ: ಹೊಸ ವರ್ಷಕ್ಕೆ ರಾಜ್ಯದ ಜನರಿಗೆ ಶಾಕ್ ಕೊಟ್ಟ ಗಾಳಿ ಗುಣಮಟ್ಟ, ಈ ಜಿಲ್ಲೆಗಳಲ್ಲಿ ಎಚ್ಚರವಹಿಸಲು ಸೂಚನೆ
ಪೊಲೀಸರು ನಡೆಸಿದ ಬ್ರೀತ್ ಅನಲೈಸರ್ ಪರೀಕ್ಷೆ ಮಾಡಿದಾಗ ವೆಂಕಟೇಶ್ನ ಆಲ್ಕೋಹಾಲ್ ಮಟ್ಟವು 100 ಮಿಲಿಗೆ 367 ಮಿಗ್ರಾಂ ಇತ್ತು ಎಂದು ಹೇಳಲಾಗಿದೆ. ಇದು ಆತ ವಿಪರೀತವಾಗಿ ಮದ್ಯಸೇವನೆ ಮಾಡಿದ್ದಾನೆ ಎಂಬುದನ್ನು ತಿಳಿಸುತ್ತದೆ. ಇನ್ನು ಈ ಬಗ್ಗೆ ಅಧಿಕಾರಿಗಳು ಸವಾರನಿಗೆ ನೋಟಿಸ್ ನೀಡಿದ್ದಾರೆ. ಇದಕ್ಕೂ ನಿರಾಕರಿಸಿ, ಅಧಿಕಾರಿಗಳ ಮೇಲೆ ಕೂಗಾಡಿದ್ದಾನೆ. ನಂತರ ಪೊಲೀಸ್ ಠಾಣೆಯಿಂದ ಹೊರ ಬಂದು, ಬೈಕ್‌ಗೆ ಇಂಧನ ತುಂಬಿಸಿ, ಬೆಂಕಿ ಕೊಟ್ಟಿದ್ದಾನೆ. ನಂತರ ಅಲ್ಲಿಂದ ಪರಾರಿಯಾಗಿದ್ದಾನೆ. ಇದು ವೆಂಕಟೇಶ್ಗೆ ಎರಡನೇ ಬಾರಿ ದಂಡ ಹಾಕುತ್ತಿರುವುದು. ಈ ಹಿಂದೆಯೂ ಕೂಡ ಇವನ ಮೇಲೆ ಇದೇ ಕಾರಣಕ್ಕೆ ದಂಡ ಹಾಕಲಾಗಿತ್ತು. ಇದೀಗ ಮತ್ತೆ ದಂಡ ಹಾಕಿರುವುದು, ಆತನ ಮನಸ್ಸಿಗೆ ಬೇಜಾರಾಗಿದೆ. ಈ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




