
ಬೆಂಗಳೂರು, ಜ.29: ಬೆಂಗಳೂರು (Bengaluru) ಹೊರವಲಯ ಬನ್ನೇರುಘಟ್ಟ ಸಮೀಪದ ಬೇಗಿಹಳ್ಳಿಯ ಸಾಯಿ ಸಮೃದ್ಧಿ ಬಡಾವಣೆಯಲ್ಲಿ ಒಂಟಿ ಸಲಗ ಓಡಾಟದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮುಂಜಾನೆ 4:10 ರ ಸುಮಾರಿಗೆ ಬಡಾವಣೆಗೆ ಎಂಟ್ರಿ ಕೊಟ್ಟ ಒಂಟಿ ಸಲಗ ಎದುರು ಸಿಕ್ಕ ಆಲ್ಟೊ ಕಾರಿಗೆ ದಂತದಿಂದ ತುವಿದು ಡೋರ್ ಮತ್ತು ಬಾನೆಟ್ಗೆ ಹಾನಿ ಮಾಡಿದೆ. ಮತ್ತೊಂದು ಕಡೆ ಮನೆ ಮುಂಭಾಗ ನಿಲ್ಲಿಸಿದ್ದ ಬೈಕ್ ಮೇಲೆ ದಾಳಿ ಮಾಡಿದೆ. ಒಂಟಿ ಸಲಗ ಆಕ್ರೋಶದಲ್ಲಿ ಸಿಕ್ಕ ಸಿಕ್ಕ ವಸ್ತುಗಳ ಮೇಲೆ ದಾಳಿ ಮಾಡುತ್ತಿದ್ದು, ಸ್ಥಳೀಯ ನಿವಾಸಿಗಳು ಭಯಬೀತರಾಗಿದ್ದಾರೆ. ಮುಂಜಾನೆ ಹೊತ್ತು ವಾಯುವಿಹಾರಕ್ಕೆ ಹೋಗುವವರು ಅಥವಾ ಕೆಲಸಕ್ಕೆ ತೆರಳುವವರ ಮೇಲೆ ಇಂತಹ ಆನೆಗಳು ದಾಳಿ ಮಾಡುವ ಅಪಾಯವಿದೆ.
ಇನ್ನೂ ಬೆಳಗ್ಗೆ ಕಾರು ಮತ್ತು ಬೈಕ್ ಜಖಂ ಆಗಿರುವುದನ್ನು ಗಮನಿಸಿದ ಸ್ಥಳೀಯರು ಯಾರೋ ಕಳ್ಳರು ವಾಹನಗಳನ್ನು ಕದಿಯಲು ಯತ್ನಿಸಿದ್ದಾರೆ ಎಂದುಕೊಂಡಿದ್ದರು. ಈ ವೇಳೆ ಸಿಸಿ ಕ್ಯಾಮರಾವನ್ನು ಪರಿಶೀಲನೆ ಮಾಡಿ ನೋಡಿದಾಗ ಒಂಟಿ ಸಲಗ ಬಡಾವಣೆಗೆ ನುಗ್ಗಿರುವುದು ಕಂಡು ಸ್ಥಳೀಯ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ. ನಾಲ್ಕು ವರ್ಷದ ಹಿಂದೆ ಕಾಡಾನೆಗಳು ಹಳ್ಳಿಗಳ ಬಳಿ ಲಗ್ಗೆಯಿಡುತ್ತಿದ್ದವು. ಬಳಿಕ ಕಾಡಾನೆಗಳ ಹಾವಳಿ ಇರಲಿಲ್ಲ. ಆದ್ರೆ ನಿನ್ನೆ ರಾತ್ರಿ ಒಂಟಿ ಸಲಗ ಬಡಾವಣೆಯ ಬೀದಿ ಬೀದಿ ಸುತ್ತಾಡಿದೆ. ಇನ್ನು ಮುಂಜಾನೆ ಹೊತ್ತು ಕಾಣಿಸಿಕೊಂಡ ಕಾರಣ, ಮನುಷ್ಯರ ಮೇಲೆ ದಾಳಿ ಮಾಡಿಲ್ಲ. ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ ಎಂದು ಕಾರಿನ ಮಾಲೀಕ ತಿಳಿಸಿದ್ದಾರೆ.
ಇದನ್ನೂ ಓದಿ: ಮಂಗಳೂರಿನಲ್ಲಿ ಗಾಳಿಯ ಮಟ್ಟ ಬೆಂಗಳೂರಿಗಿಂತ ಕಳಪೆಯಾಗಿದೆ, ಎಚ್ಚರಿಕೆ ವಹಿಸುವಂತೆ ತಜ್ಞರ ಸೂಚನೆ
ಈ ಆನೆಗಳು ನಮ್ಮ ಪ್ರದೇಶದಲ್ಲಿ ಓಡಾಡುತ್ತಿರುವುದರಿಂದ ಭಯ ವಾತಾವರಣ ಸೃಷ್ಟಿಯಾಗಿದೆ. ಈ ಬಗ್ಗೆ ಹಲವು ಭಾರಿ ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದೇವೆ. ಆಹಾರಕ್ಕೆ ಮತ್ತೆ ಈ ಕಡೆ ಬರುವ ಸಾಧ್ಯತೆ ಇದೆ. ಅಲ್ಲದೆ ಒಂಟಿ ಸಲಗ ಕೂಡ ಪುಂಡಾಟದ ಸ್ವಭಾವ ಹೊಂದಿದ್ದು, ಮನುಷ್ಯರ ಮೇಲೆ ದಾಳಿ ಮಾಡುವ ಸಾಧ್ಯತೆ ಇದ್ದು, ಅರಣ್ಯ ಇಲಾಖೆ ಅಪಾಯಕಾರಿ ಒಂಟಿ ಸಲಗವನ್ನು ನಾಡಿಗೆ ಬರದಂತೆ ನಿಯಂತ್ರಿಸಬೇಕಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಒಂಟಿ ಸಲಗವನ್ನು ಕಾಡಿಗೆ ಅಟ್ಟಲು ಅಥವಾ ಅದನ್ನು ನಿಯಂತ್ರಿಸಲು ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ. ಮುಂಜಾನೆ 4 ರಿಂದ 7 ಗಂಟೆಯವರೆಗೆ ಮತ್ತು ರಾತ್ರಿ ವೇಳೆ ಏಕಾಂಗಿಯಾಗಿ ಸಂಚರಿಸುವುದನ್ನು ತಪ್ಪಿಸಿ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ. ಅರಣ್ಯ ಇಲಾಖೆಯು ಈಗಾಗಲೇ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಾನಿಗೊಳಗಾದ ವಾಹನಗಳ ಮಾಲೀಕರಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:53 am, Thu, 29 January 26