ಬೆಂಗಳೂರಿನಲ್ಲಿ ಮತ್ತೊಂದು ಕೋ-ಆಪರೇಟಿವ್ ಸೊಸೈಟಿಯಲ್ಲಿ ಹಗರಣ: 70 ಕೋಟಿ ರೂ. ವಂಚನೆ

61 ವರ್ಷದಿಂದಲೂ ನಡೆದುಕೊಂಡು ಬಂದಿರುವ EPFO ಸ್ಟಾಫ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ 70 ಕೋಟಿ ರೂ. ವಂಚನೆ ಆರೋಪ ಕೇಳಿಬಂದಿದೆ. ಬಡ್ಡಿ ಬರುವುದು ನಿಂತ ಮೇಲೆ ವಂಚನೆ ಬೆಳಕಿಗೆ ಬಂದಿದೆ. ಸಿಇಒ ಮತ್ತು ಅಕೌಂಟೆಂಟ್ ವಿರುದ್ಧ ದೂರು ಬೆಂಗಳೂರಿನ ಕಬ್ಬನ್​​ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರಿನಲ್ಲಿ ಮತ್ತೊಂದು ಕೋ-ಆಪರೇಟಿವ್ ಸೊಸೈಟಿಯಲ್ಲಿ ಹಗರಣ: 70 ಕೋಟಿ ರೂ. ವಂಚನೆ
ವಂಚನೆ
Edited By:

Updated on: Oct 31, 2025 | 9:51 PM

ಬೆಂಗಳೂರು, ಅಕ್ಟೋಬರ್​ 31: ಅಲ್ಲಿದ್ದವರಲ್ಲಿ ನಿವೃತ್ತ ಸಿಬ್ಬಂದಿಗಳೇ ಹೆಚ್ಚು. ಭವಿಷ್ಯಕ್ಕೆ ಸಹಾಯ ಆಗುತ್ತೆ ಅಂತಾ ಉಳಿತಾಯ ಹಣವನ್ನು ತಾವೇ ಮಾಡಿಕೊಂಡಿದ್ದ EPFO ಸ್ಟಾಫ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿನಲ್ಲಿ ಹೂಡಿಕೆ ಮಾಡಿದ್ದರು. ಪ್ರತಿ ತಿಂಗಳು ಬಡ್ಡಿ ಹಣ ಖಾತೆಗೆ ಬರುತ್ತಲೇ ಇತ್ತು. ಆದರೆ ಮೂರು ತಿಂಗಳಿಂದ ಹಣ ಬಂದಿರಲಿಲ್ಲ. ಓಡೋಡಿ ಬಂದು ಪರಿಶೀಲಿಸಿದಾಗ 70 ಕೋಟಿ ರೂ. ವಂಚನೆ (Fraud) ನಡೆದಿರುವುದು ಬಯಲಾಗಿದೆ.

EPFO ಸಿಬ್ಬಂದಿ ಹಾಗೂ ನಿವೃತ್ತ ಸಿಬ್ಬಂದಿಗಳು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದರು. ಇವರೆಲ್ಲಾ ತಮ್ಮ ಅನುಕೂಲಕ್ಕೆ ಇರಲಿ ಅಂತಾ 61 ವರ್ಷದ ಹಿಂದೆ EPFO ಸಿಬ್ಬಂದಿಗಳೇ ಸೇರಿ EPFO ಸ್ಟಾಫ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಂತಾ ರಚಿಸಿಕೊಂಡಿದ್ದರು. ಬಂದ ಉಳಿತಾಯದ ಹಣವನ್ನೆಲ್ಲಾ ಇದರಲ್ಲಿ ಹೂಡಿಕೆ ಮಾಡುತ್ತಿದ್ದರು. ಅವಶ್ಯಕತೆ ಇರುವ ಸಿಬ್ಬಂದಿಗಳಿಗೆ ಈ ಸೊಸೈಟಿ ಸಾಲವನ್ನು‌ ಕೂಡ ನೀಡುತ್ತಿತ್ತು. ಇಷ್ಟು ದಿನ ಆರಾಮಾಗೆ ವ್ಯವಹಾರ ನಡೆದುಕೊಂಡು ಬರುತ್ತಿತ್ತು. ಆದರೆ ಕಳೆದ ಮೂರು ತಿಂಗಳಿಂದ ಯಾವಾಗ ಬಡ್ಡಿ ಹಣ ಬರುವುದು ಸ್ಟಾಪ್ ಆಯಿತೋ ಆವಾಗಿನಿಂದ ಸಮಸ್ಯೆ ಶುರುವಾಗಿದೆ.

ಇದನ್ನೂ ಓದಿ: ಮನೆಕೆಲಸದಾಕೆಗೆ ಕೋಟಿ ರೂ ಮನೆ ಕೊಟ್ಟ ಒಡತಿ: ಆದ್ರೂ ತಿಂದ ಮನೆಗೆ ದ್ರೋಹ ಬಗೆದ್ಲು

ಎಲ್ಲಾ ಸಿಬ್ಬಂದಿಗಳು ಸೇರಿ ಈ ಸೊಸೈಟಿನಲ್ಲಿ 73 ಕೋಟಿ ರೂ. ಅಷ್ಟು ಹೂಡಿಕೆ ಮಾಡಿದ್ದರು. ಆದರೆ ಕಳೆದ 15 ವರ್ಷದಿಂದ ಸಿಇಓ ಆಗಿರುವ ಗೋಪಿ ಗೌಡ ಮತ್ತು ಅಕೌಂಟೆಂಟ್ ಜಗದೀಶ್ ಸೇರಿ ಈ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ.

ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು

ಬಡ್ಡಿ ಹಣ ಬರದಿದ್ದಾಗ ಬಂದು ಪರಿಶೀಲಿಸಿ ನೋಡಿದಾಗ ಕೇವಲ 3 ಕೋಟಿ ರೂ. ಹಣವನ್ನು‌ ಮಾತ್ರ ಸಾಲವಾಗಿ ಸೊಸೈಟಿ ನೀಡಿದ್ದು, ಉಳಿದ ಹಣ ಖಾತೆಯಲ್ಲಿ ಇಲ್ಲ ಅನ್ನೋದು ಗೊತ್ತಾಗಿದೆ. ತಕ್ಷಣ ಆತಂಕಗೊಂಡ ಸಿಬ್ಬಂದಿಗಳೆಲ್ಲರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ಪಡೆದಿರುವ ಪೊಲೀಸರು ಮಾಹಿತಿ ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ವೃದ್ಧಾಪ್ಯದಲ್ಲಿ ಮಹಿಳೆಯರ ಚಪಲ: ಬೆಂಗಳೂರಲ್ಲಿ ವ್ಯಕ್ತಿ ಕಳೆದುಕೊಂಡಿದ್ದು ಲಕ್ಷ ಲಕ್ಷ ಹಣ

ಸದ್ಯ ದೂರು ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಒಂದು ವೇಳೆ ವಂಚನೆ ಆಗಿರುವುದು ಸತ್ಯವೇ ಆದರೆ ಪ್ರಕರಣ ಸಿಐಡಿಗೆ ವರ್ಗಾವಣೆ ಆಗುವ ಸಾಧ್ಯತೆ‌ ಇದೆ. ಅದೇನೇ ಹೇಳಿ ಕಷ್ಟ ಕಾಲದಲ್ಲಿ ಸಹಾಯ ಆಗುತ್ತೆ ಅಂತಾ ಹಣ ಇಟ್ಟ ಹಿರಿಜೀವಗಳು ಪೊಲೀಸ್ ಠಾಣೆಗೆ ಅಲೆಯುವಂತಾಗಿರುವುದು ಮಾತ್ರ ವಿಪರ್ಯಾಸ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.