ಚಾಮರಾಜಪೇಟೆ ವೈಟ್ ಟಾಪಿಂಗ್ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕ ಎಂದ ತಜ್ಞರು
ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ಅಧಿಕಾರಿಗಳು ಮಾಡುವ ಎಡವಟ್ಟುಗಳು ಒಂದಲ್ಲ ಎರಡಲ್ಲ, ಯಾವ ಕೆಲಸವನ್ನು ಸರಿಯಾಗಿ ಮಾಡುವುದಿಲ್ಲ. ಮಾಡೋದೆಲ್ಲಾ ಅವೈಜ್ಞಾನಿಕ ಕಾಮಗಾರಿಗಳೇ. ಹೌದು..ಬೆಂಗಳೂರಿನ ನಗರದಲ್ಲಿ ಹಲವೆಡೆ ವೈಟ್ ಟಾಪಿಂಗ್ ಕಾಮಗಾರಿ ನಡೆದಿದ್ದು, ಅಲ್ಲಲ್ಲಿ ಅವೈಜ್ಞಾನಿಕವಾಗಿದೆ ಎಂದು ತಜ್ಞರೇ ಹೇಳಿದ್ದಾರೆ.ಹಾಗಾದ್ರೆ ಏನೆಲ್ಲಾ ಅವೈಜ್ಞಾನಿಕವಾಗಿದೆ ಮಾಡಲಾಗಿದೆ ಎನ್ನುವ ವಿವರ ಇಲ್ಲಿದೆ.

ಬೆಂಗಳೂರು, (ಅಕ್ಟೋಬರ್ 31): ಜಿಬಿಎ ಅಧಿಕಾರಿಗಳು ಚಾಮರಾಜಪೇಟೆ ವಿಧಾನ ಸಭಾ ಕ್ಷೇತ್ರದ ಟಿ.ಆರ್ ಮಿಲ್ ಟು ಮಕ್ಕಳ ಕೂಟದ ವರೆಗೆ, ಹದಿನೈದು ಕೋಟಿ ರುಪಾಯಿ ವೆಚ್ಚದಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಮಾಡಲು ಮುಂದಾಗಿದ್ದು, ಮೊದಲ ಹಂತದಲ್ಲಿ ಟಿ.ಆರ್ ಮಿಲ್ ಟು ವಿಶಾಲ್ ಮಾರ್ಟ್ ಸಿಗ್ನಲ್ ವರೆಗೆ ಕಾಮಗಾರಿ ಮಾಡುತ್ತಿದ್ದಾರೆ. ಏಪ್ರಿಲ್ನಲ್ಲೇ ಕಾಮಗಾರಿ ಆರಂಭ ಮಾಡಿದ್ರು ಇಲ್ಲಿಯವರೆಗೆ ಅರ್ಧದಷ್ಟು ಕಾಮಗಾರಿ ಮುಗಿದಿಲ್ಲ. ಇನ್ನೊಂದೆಡೆ ಕಾಮಗಾರಿ ಸ್ಥಳಕ್ಕೆ ಟಿವಿ9 ತಂಡ ಇಂಜಿನಿಯರಿಂಗ್, ತಜ್ಞ ಶ್ರೀಹರಿ ಅವರನ್ನು ಸ್ಥಳಕ್ಕೆ ಕರೆದೊಯ್ದು ಪರಿಶೀಲನೆ ಮಾಡಿಸಿದ್ದು, ಈ ವೇಳೆ ಅವೈಜ್ಞಾನಿಕ ಕಾಮಗಾರಿಯಾಗಿದೆ ಎನ್ನುವುದನ್ನು ಇಂಜಿನಿಯರಿಂಗ್ ಶ್ರೀಹರಿ ಅಭಿಪ್ರಾಯಪಟ್ಟಿದ್ದಾರೆ.
9 ತಿಂಗಳಲ್ಲಿ ಕಾಮಗಾರಿ ಮುಗಿಸಲು ಗಡುವು ನೀಡಲಾಗಿದೆ. ಈ ಬಗ್ಗೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆ, ಟಿವಿ9 ತಂಡ ಇಂಜಿನಿಯರಿಂಗ್ ತಜ್ಞ ಶ್ರೀ ಹರಿ ಅವರನ್ನು ಸ್ಥಳಕ್ಕೆ ಕರೆದುಕೊಂಡು ಬಂದು ಈ ರೋಡ್ ಕಾಮಗಾರಿಯನ್ನು ತೋರಿಸಲಾಯಿತು. ಕಾಮಗಾರಿ ಪರಿಶೀಲನೆ ಮಾಡಿದ ಶ್ರೀಹರಿ ಅವರು ಈ ರಸ್ತೆನಲ್ಲಿರುವ ಪ್ರತಿ ಮರಕ್ಕೂ ಕಾಂಕ್ರೀಟ್ ಹಾಕಿ ಬಾಕ್ಸ್ ಮಾಡಲಾಗಿದೆ. ಇದರಿಂದ ವೈಟ್ ಟಾಪಿಂಗ್ ವೆಚ್ಚಕ್ಕಿಂತ ಇದರ ವೆಚ್ಚವೇ ಹೆಚ್ಚಾಗಲಿದೆ ಮತ್ತು ಇದರಿಂದ ಸಮಯ, ಹಣ ವ್ಯತ್ಯ ಅಷ್ಟೇ. ಮುಂದೆ ಏನಾದರೂ ಸಮಸ್ಯೆ ಆದರೆ ಕೇಬಲ್ ಗಳನ್ನು ಹೊರಗೆ ತೆಗೆಯಲು ಮತ್ತೆ ಬಾಕ್ಸ್ ಡೆಮಾಲಿಷನ್ ಮಾಡಬೇಕು. ಈ ರಸ್ತೆಗೆ ವೈಟ್ ಟಾಪಿಂಗ್ ಅವಶ್ಯಕತೆ ಇರಲಿಲ್ಲ ಮತ್ತು ಇದು ಅವೈಜ್ಞಾನಿಕ ಕಾಮಗಾರಿ. ಯಾರದ್ದೋ ಒತ್ತಡಕ್ಕೆ ಮಣಿದು ಈ ಕೆಲಸ ಮಾಡಲಾಗ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನೂ ರಾಜ್ಯದ ಇಬ್ಬರು ಪ್ರಭಾವಿ ಸಚಿವರು ಮತ್ತು ಸಿಎಂ ಆಪ್ತರಾಗಿರುವ ದಿನೇಶ್ ಗುಂಡೂರಾವ್ ಮತ್ತು ಜಮೀರ್ ಅಹಮದ್ ಪ್ರತಿನಿಧಿಸುವ ಚಾಮರಾಜಪೇಟೆ ಮತ್ತು ಗಾಂಧಿನಗರ ವಿಧಾನ ಕ್ಷೇತ್ರದಲ್ಲಿ ಬರುವ ಪೋಲಿಸ್ ರಸ್ತೆಗೆ ಡಾಂಬರ್ ಹಾಕಿ ವರ್ಷಗಳೇ ಕಳೆದು ಹೋಗಿದೆ. ಕಾರಣ ರಸ್ತೆಯ ಅರ್ಧ ಭಾಗ ಗಾಂಧಿನಗರ ವಿಧಾನ ಸಭಾ ಕ್ಷೇತ್ರಕ್ಕೆ,ಉಳಿದ ಅರ್ಧ ಭಾಗ ಚಾಮರಾಜಪೇಟೆ ವಿಧಾನಸಭಾಕ್ಕೆ ಸೇರಿದ್ದು, ಇಬ್ಬರಲ್ಲಿ ಯಾರು ರೋಡ್ಗೆ ಡಾಂಬರ್ ಹಾಕಬೇಕು ಅನ್ನೋ ಗೊಂದಲದಲ್ಲಿ ರೋಡ್ ಹಾಕುವುದನ್ನೇ ಮರೆತಂತಿದೆ.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ವಾಹನ ಸವಾರರು, ಈ ರೋಡ್ ನಲ್ಲಿ ಓಡಾಡುವುದು ಅಂದರೆ ಸಾವಿನ ಜೊತೆ ಹೋರಾಟ ಮಾಡಿದಂತೆ. ಸಾಕಷ್ಟು ವರ್ಷಗಳಿಂದ ರೋಡ್ ಹಾಕಲೇ ಇಲ್ಲ. ಇದು ಬೆಂಗಳೂರಿನಲ್ಲಿರುವ ರೋಡ್ ಅಥವಾ ಹಳ್ಳಿಯ ರಸ್ತೆನಾ ಅನ್ನಿಸುತ್ತದೆ. ಈ ರೋಡ್ ಮೂಲಕವೇ ಕೆಲಸಕ್ಕೆ ಹೋಗಬೇಕು ಬೇರೆ ದಾರಿ ಇಲ್ಲ ಎಂದು ಬೇಸರ ಹೊರಹಾಕಿದ್ದಾರೆ.
Published On - 9:04 pm, Fri, 31 October 25



