ಬೆಂಗಳೂರು: ಬೆಂಗಳೂರು ಮಹಾನಗರದ ಹಲವೆಡೆ ಧಾರಾಕಾರ ಮಳೆ ಸುರಿದಿದೆ. ಈ ವೇಳೆ ಬಿಬಿಎಂಪಿ, ಬಿಡಬ್ಲ್ಯುಎಸ್ಎಸ್ಬಿ ಕಾಮಗಾರಿಯಿಂದ ಎಡವಟ್ಟು ಉಂಟಾಗಿದೆ. 10 ಕ್ಕೂ ಹೆಚ್ಚು ಮನೆಗೆ ನೀರು ನುಗ್ಗಿ ನಿವಾಸಿಗಳ ಪರದಾಟ ಉಂಟಾಗಿದೆ. ಕಾವಲ್‌ಭೈರಸಂದ್ರದ ಕಾವೇರಿನಗರದ ಎ ಬ್ಲಾಕ್‌ನಲ್ಲಿ ಘಟನೆ ನಡೆದಿದೆ. ಮನೆಯೊಳಗೆ ನಾಲ್ಕು ಅಡಿಗಳಿಗೂ ಹೆಚ್ಚು ನೀರು ಸಂಗ್ರಹ ಆಗಿದೆ. ಮನೆಯೊಳಗೆ ಸಂಗ್ರಹವಾದ ನೀರನ್ನು ಮನೆಯವರು ಹೊರಹಾಕುತ್ತಿದ್ದಾರೆ. ಮನೆಯೊಳಗಿನ ವಸ್ತುಗಳು ಮಳೆನೀರಿನಿಂದ ಆವೃತವಾಗಿದೆ.
ನೆಲಮಂಗಲದಲ್ಲಿ ಭಾರಿ ಮಳೆ ಸುರಿದಿದೆ. ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಯಲ್ಲಿ ಮಳೆ ನೀರು ಹರಿಯುತ್ತಿದೆ. ಕೆರೆಗೆ ನೀರು ಹರಿಯುವ ರಾಜಕಾಲುವೆ ಭರ್ತಿಯಿಂದಾಗಿ ಮಳೆ ನೀರು ಹೊರ ಬರುತ್ತಿದೆ. ಬಿನ್ನಮಂಗಲ ಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆ ಭರ್ತಿ ಆಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ಕೆರೆಗೆ ಹರಿಯುವ ನೀರು ರಾಜ ಕಾಲುವೆಯಿಂದ ಹೊರ ಬರುತ್ತಿದೆ. ಇದರಿಂದ ವಾಹನ ಸವಾರರಿಗೆ ತೀವ್ರ ಸಂಕಷ್ಟ ಎದುರಾಗಿದೆ.
ಇಂದು ಸಂಜೆಯ ವೇಳೆ ಕೂಡ ಬೆಂಗಳೂರು ಮಹಾನಗರದ ಹಲವೆಡೆ ಧಾರಾಕಾರ ಮಳೆ ಸುರಿದಿದೆ. ಶಾಂತಿನಗರ, ಮೆಜೆಸ್ಟಿಕ್, ಲಾಲ್ಬಾಗ್, ಕೆ.ಆರ್.ಸರ್ಕಲ್, ರಿಚ್ಮಂಡ್ ಸರ್ಕಲ್, ವಿಲ್ಸನ್ ಗಾರ್ಡನ್, ಕೋರಮಂಗಲ, ಕಾರ್ಪೊರೇಷನ್ ಸರ್ಕಲ್, ಜೆ.ಪಿ.ನಗರ, ಜಯನಗರ ಸೇರಿ ಬೆಂಗಳೂರು ನಗರದ ಹಲವೆಡೆ ಧಾರಾಕಾರ ಮಳೆ ಸುರಿದಿದೆ. ಮಳೆಯಿಂದ ಟ್ರಾಫಿಕ್ ಜಾಮ್ ಆಗಿ ಸವಾರರು ಪರದಾಡುವಂತಾಗಿದೆ.
ಬೆಂಗಳೂರಿನಲ್ಲಿ ಧಾರಾಕಾರ ಮಳೆ ಹಿನ್ನೆಲೆ ಚಿಕ್ಕಬಾಣಾವರದಲ್ಲಿ ಕಾರೊಂದು ಗುಂಡಿಯಲ್ಲಿ ಸಿಲುಕಿದೆ. ಬಸವನಗುಡಿ ಶಾಸಕ ರವಿಸುಬ್ರಹ್ಮಣ್ಯ ಕಚೇರಿಗೆ ನೀರು ನುಗ್ಗಿದೆ. ನಾಗವಾರ ಬಳಿ ಅಂಗಡಿ, ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಭಾರಿ ಮಳೆಯಿಂದಾಗಿ ರಸ್ತೆಗಳು ಸಂಪೂರ್ಣ ಜಲಾವೃತವಾಗಿದೆ. ಭಾರಿ ಮಳೆಗೆ ಮಲ್ಲೇಶ್ವರಂನ ಮಂತ್ರಿ ಮಾಲ್ ಬಳಿ ಮರದ ಕೊಂಬೆಯೊಂದು ಮುರಿದು ಬಿದ್ದಿದೆ. ಮಲ್ಲೇಶ್ವರಂನ ಮಂತ್ರಿಮಾಲ್ ಬಳಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿದೆ. ಟ್ರಾಫಿಕ್ ಜಾಮ್ನಿಂದ ವಾಹನ ಸವಾರರು ತೀವ್ರ ಪರದಾಡುವಂತಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಮತ್ತೆ ಧಾರಾಕರ ಮಳೆ ಆಗಿದೆ. ಮಳೆಗೆ ಈಗಾಗಲೇ ಜಿಲ್ಲೆಯ ಕೆರೆ ಕುಂಟೆ ನದಿ ನಾಲೆಗಳು ತುಂಬಿವೆ. ಮತ್ತೆ ಮಳೆ ಯಾಕಾದ್ರು ಬಂತು ಎಂದು ಜಿಲ್ಲೆಯ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಮಳೆಗೆ ಹೂ, ತರಕಾರಿ, ರೇಷ್ಮೆ, ಕೃಷಿ ಬೆಳೆಗಳು ಹಾನಿ ಆಗಿವೆ. ಅಳಿದುಳಿದಿರುವ ಬೆಳೆಗಳು ನಷ್ಟಕ್ಕಿಡಾಗುವ ಭೀತಿ ಎದುರಾಗಿದೆ. ಕೆಲವು ಕೆರೆಗಳ ಕಟ್ಟೆಗಳು ಒಡೆಯುವ ಭೀತಿ ಉಂಟಾಗಿದೆ. ಈಗಾಗಲೇ ಒಡೆದಿರುವ ಕೆರೆಗಳ ಕಟ್ಟೆಗೆ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಜಿಲ್ಲೆಯಾದ್ಯಂತ ಈಗಾಗಲೇ ನೂರು ಕೋಟಿ ರೂಪಾಯಿ ಮೌಲ್ಯದ ಬೆಳೆಹಾನಿ ಆಗಿದೆ. ತೋಟಗಾರಿಕೆ, ಕೃಷಿ. ರೇಷ್ಮೆ, ಸಣ್ಣ ನೀರಾವರಿ, ಲೋಕೋಪಯೋಗಿ ಇಲಾಖೆಗಳಿಗೆ ಉಂಟಾಗಿರುವ ಹಾನಿ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ವರದಿ ಸಲ್ಲಿಸಿದೆ. ಇದೀಗ ಮತ್ತೆ ಸುರಿಯುತ್ತಿರುವ ಮಳೆಯಿಂದ ರೈತರು ಕಂಗಾಲಾಗಿದ್ದಾರೆ.
ಇದನ್ನೂ ಓದಿ: ನಿರಂತರ ಮಳೆಯಿಂದಾಗಿ ಸೋರುತ್ತಿರುವ ಸರ್ಕಾರಿ ಆಸ್ಪತ್ರೆ; ರೋಗಿಗಳ ಪರದಾಟ
ಇದನ್ನೂ ಓದಿ: ಎಲ್ಲೆಂದರಲ್ಲಿ ಪ್ಲ್ಯಾಸ್ಟಿಕ್ ತ್ಯಾಜ್ಯ, ಮಳೆ ನೀರು ಹೋಗಲು ಅಡ್ಡಿ; ಜಲಮಯವಾಗುತ್ತಾ ಸಿಲಿಕಾನ್ ಸಿಟಿ
Published On - 9:24 pm, Mon, 15 November 21