ಬೆಂಗಳೂರು: ಕುಡುಕ ತಂದೆಯ ಹುಚ್ಚಾಟಕ್ಕೆ ಮಗ ಆಸ್ಪತ್ರೆಗೆ ದಾಖಲಾದ ಘಟನೆ ನಗರದ ಮಹದೇವಪುರದ ರಂಗನಾಥ ಲೇಔಟ್ನಲ್ಲಿ ನಡೆದಿದೆ. ಕುಡಿತದ ಚಟ ಹೊಂದಿದ್ದ ವೆಂಕಟರಾಮ ರೆಡ್ಡಿ ನಿತ್ಯ ಹಣಕ್ಕಾಗಿ ಮಗನಲ್ಲಿ ಪೀಡಿಸುತ್ತಿದ್ದನು. ಮಗ ನಿರಾಕರಿಸಿದಾಗ ಮಚ್ಚಿನಿಂದ ಮಗನ ತಲೆಗೆ ಹಲ್ಲೆ (Assault) ನಡೆಸಿದ್ದಾನೆ. ಘಟನೆ ಸಂಬಂಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗಾಯಾಳು ಮಗನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕೊಲಾರದ ಕಾಮಸಂದ್ರದ ನಿವಾಸಿ ವೆಂಕಟರಾಮ ರೆಡ್ಡಿ ತೀವ್ರ ಕುಡಿತದ ಚಟಕ್ಕೆ ಬಿದ್ದಿದ್ದನು. ಅಲ್ಲದೆ ತನ್ನ ಪತ್ನಿ ಹಾಗೂ ಮಗ ಚಂದ್ರಶೇಖರ್ ರೆಡ್ಡಿಗೆ ವಿಪರೀತ ಕಾಟ ಕೊಡುತ್ತಿದ್ದನು. ಇದರಿಂದ ಬೇಸತ್ತ ತಾಯಿ ಮತ್ತು ಮಗ ಕೋಲಾರದಿಂದ ಬೆಂಗಳೂರಿನ ಮಹದೇವಪುರದ ರಂಗನಾಥ ಲೇಔಟ್ಗೆ ಶಿಫ್ಟ್ ಆಗಿದ್ದರು. ಇಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ತಾಯಿ ಮಗ ಸುಖವಾಗಿ ಜೀವನ ಸಾಗಿಸುತ್ತಿದ್ದರು. ಆದರೆ ಕುಡುಕ ತಂದೆ ಇಲ್ಲಿಗೂ ಬಂದು ಕಾಟ ಕೊಡಲು ಆರಂಭಿಸಿದ್ದಾನೆ.
ಮಹದೇವಪುರಕ್ಕೆ ಆಗಮಿಸಿದ ವೆಂಕಟರಾಮ, ಪತ್ನಿ ಹಾಗೂ ಮಗನಿದ್ದ ಮನೆ ಕಡೆ ಬಂದಿದ್ದಾನೆ. ಬರುವಾಗ ಕೋಲಾರದಿಂದ ಮಚ್ಚು ಕೂಡ ತೆಗೆದುಕೊಂಡೇ ಬಂದಿದ್ದಾನೆ. ನಂತರ ಮದ್ಯ ಖರೀದಿಸಲು ಕಾಸು ಕೊಡುವಂತೆ ಪೀಡಿಸಲು ಆರಂಭಿಸಿದ್ದಾನೆ. ಡಿಸೆಂಬರ್ 17ರಂದು ಮನೆಯ ಬಳಿ ಬಂದಾಗಲೂ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಈ ವೇಳೆ ಮಗ ಕೊಡಲ್ಲ ಎಂದಿದ್ದಕ್ಕೆ ಕೋಪದಿಂದ ಮಚ್ಚಿನಿಂದ ತಲಗೆ ಗಂಭೀರವಾಗಿ ಹಲ್ಲೆ ನಡೆಸಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ರಾಜ್ಯದ ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ