AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುರುತಿನ ಚೀಟಿ ವಿಚಾರಕ್ಕೆ ಕಂಡಕ್ಟರ್ ಜೊತೆ ಮಾತಿನ ಚಕಮಕಿ: ದಂತ ವೈದ್ಯ ವಿದ್ಯಾರ್ಥಿ ವಿರುದ್ಧ ಎಫ್​ಐಆರ್

ಗುರುತಿನ ಚೀಟಿ ವಿಚಾರಕ್ಕೆ ಕಂಡಕ್ಟರ್ ಜೊತೆ ಮಾತಿನ ಚಕಮಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಂತ ವೈದ್ಯ ವಿದ್ಯಾರ್ಥಿ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಗುರುತಿನ ಚೀಟಿ ವಿಚಾರಕ್ಕೆ ಕಂಡಕ್ಟರ್ ಜೊತೆ ಮಾತಿನ ಚಕಮಕಿ: ದಂತ ವೈದ್ಯ ವಿದ್ಯಾರ್ಥಿ ವಿರುದ್ಧ ಎಫ್​ಐಆರ್
ರಮೇಶ್ ಬಿ. ಜವಳಗೇರಾ
|

Updated on: Jun 15, 2023 | 8:23 AM

Share

ಬೆಂಗಳೂರು: ಬಿಎಂಟಿಸಿ ಬಸ್‌ನಲ್ಲಿ ಪಾಸ್‌ ವಿಚಾರವಾಗಿ ನಿರ್ವಾಹಕನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಅನುಚಿತ ವರ್ತನೆ ತೋರಿದ ಕಾರಣಕ್ಕೆ ಖಾಸಗಿ ಕಾಲೇಜಿನ ದಂತ ವೈದ್ಯ ವಿದ್ಯಾರ್ಥಿ ಮೌನೇಶ್​ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಬಿಎಂಟಿಸಿ ಬಸ್​ ಕಂಡಕ್ಟರ್ ಅಶೋಕ್ ದೂರಿನ ಮೇರೆಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಪೀಣ್ಯ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲು ಮಾಡಲಾಗಿದೆ. ಇನ್ನು ಪೊಲೀಸ್‌ ಠಾಣೆಗೆ ಕರೆತಂದಾಗ ಸಬ್‌ ಇನ್‌ಸ್ಪೆಕ್ಟರ್‌ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಮೌನೇಶ್​ ಮೇಲೆ ಮತ್ತೊಂದು ಎಫ್​ಐಆರ್ ದಾಖಲಾಗುವ ಸಾಧ್ಯತೆಗಳಿವೆ.

ಇದನ್ನೂ ಓದಿ: Bengaluru News: PSI ಮೇಲೆ ಹಲ್ಲೆ ಆರೋಪ: ಏನಿದು ಡೆಂಟಲ್​ ಮೆಡಿಕಲ್​ ವಿದ್ಯಾರ್ಥಿ ಕಿರಿಕ್​? ಯುವಕನ ತಂದೆ ಹೇಳಿದ್ದೇನು

ವಿದ್ಯಾರಣ್ಯಪುರದ ಕುವೆಂಪುನಗರದ ನಿವಾಸಿ ಮೌನೇಶ್‌ (20) ಖಾಸಗಿ ಕಾಲೇಜಿನ ದಂತ ವೈದ್ಯ ವಿದ್ಯಾರ್ಥಿ. ಈತ ಬಿಎಂಟಿಸಿ ಬಸ್‌ನಲ್ಲಿ ಪಾಸ್‌ ವಿಚಾರವಾಗಿ ನಿರ್ವಾಹಕನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಅನುಚಿತ ವರ್ತನೆ ತೋರಿದ್ದ. ಈ ಕಾರಣಕ್ಕೆ ಮೌನೇಶ್​ನನ್ನು ಪೊಲೀಸ್‌ ಠಾಣೆಗೆ ಕರೆತರಲಾಗಿತ್ತು. ಬಳಿಕ ವಿಚಾರಣೆ ವೇಳೆ ಪೀಣ್ಯ ಸಬ್‌ ಇನ್‌ಸ್ಪೆಕ್ಟರ್‌ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.

ನನ್ನ ಮಗ ಮೌನೇಶ್‌ ತುಂಬಾ ಮೃದು ಸ್ವಭಾದವನಾಗಿದ್ದು, ಯಾವುದೇ ತಂಟೆ ತಕರಾರಿಗೆ ಹೋಗುವನಲ್ಲ. ಠಾಣೆಯಲ್ಲಿ ಮಗನನ್ನು ಕೂಡಿ ಹಾಕಿ ತಾವೇ ಮನಬಂದಂತೆ ಹೊಡೆದು ಈಗ ಆತನ ಮೇಲೆಯೇ ಪೊಲೀಸರು ಹಲ್ಲೆ ಆರೋಪ ಮಾಡುತ್ತಿದ್ದಾರೆ ಎಂದು ವಿದ್ಯಾರ್ಥಿ ಮೌನೇಶ್‌ ತಂದೆ ರಾಜ ಕಿಡಿಕಾರಿದ್ದಾರೆ.

ಪ್ರಕರಣ ಹಿನ್ನೆಲೆ

ತುಮಕೂರು ರಸ್ತೆಯ ಗೊರಗುಂಟೆಪಾಳ್ಯದ ಕೆಎಲ್‌ಇ ದಂತ ವೈದ್ಯಕೀಯ ಕಾಲೇಜಿನಲ್ಲಿ ಮೌನೇಶ್‌ ವ್ಯಾಸಂಗ ಮಾಡುತ್ತಿದ್ದು, ಕಾಲೇಜಿಗೆ ತೆರಳಲು ಬೆಳಗ್ಗೆ ಗಂಗಮ್ಮನ ಗುಡಿ ಸರ್ಕಲ್‌ನಲ್ಲಿ ಆತ ಬಿಎಂಟಿಸಿ ಬಸ್‌ ಹತ್ತಿದ್ದಾನೆ. ಆಗ ಟಿಕೆಟ್‌ ತೆಗೆದುಕೊಳ್ಳುವಂತೆ ನಿರ್ವಾಹಕ ಅಶೋಕ್‌ ಹೇಳಿದಾಗ ವಿದ್ಯಾರ್ಥಿ ತನ್ನ ಬಳಿ ಪಾಸ್‌ ಇದೆ ಎಂದಿದ್ದಾನೆ. ಆಗ ಪಾಸ್‌ ತೋರಿಸುವಂತೆ ನಿರ್ವಾಹಕ ಸೂಚಿಸಿದ್ದಾನೆ. ಪಾಸ್‌ ತೋರಿಸಿದಾಗ ನಿರ್ವಾಹಕ, ಕಾಲೇಜಿನ ಗುರುತಿನ ಪತ್ರ ತೋರಿಸುವಂತೆ ಮೌನೇಶ್‌ನನ್ನು ಕೇಳಿದ್ದಾನೆ. ಆತ ಗುರುತಿನ ಪತ್ರದ ಜೆರಾಕ್ಸ್‌ ಪ್ರತಿ ಪ್ರದರ್ಶಿಸಿದ್ದಾನೆ. ಇದಕ್ಕೆ ಆಕ್ಷೇಪಿಸಿದ ನಿರ್ವಾಹಕ, ಅಸಲಿ ಐಡಿ ತೋರಿಸುವಂತೆ ಕೇಳಿದ್ದಾನೆ. ಈ ಮಾತಿಗೆ ಕೆರಳಿದ ಮೌನೇಶ್‌, ‘ಮಹಿಳೆಯರು ಐಡಿ ಜೆರಾಕ್ಸ್‌ ಪ್ರತಿ ತೋರಿಸಿದರೆ ಸುಮ್ಮನೇ ಇರ್ತೀಯಾ’ ಎಂದು ಏರಿದ ದನಿಯಲ್ಲಿ ನಿಂದಿಸಿದ್ದಾನೆ. ಈ ಹಂತದಲ್ಲಿ ನಿರ್ವಾಹಕ ಹಾಗೂ ಮೌನೇಶ್‌ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಆಗ ಬಸ್‌ ನಿಲ್ಲಿಸಿ ನಿರ್ವಾಹಕನ ನೆರವಿಗೆ ಚಾಲಕ ಬಂದಿದ್ದಾನೆ. ಆಗ ಚಾಲಕ ಜತೆಗೂ ಮೌನೇಶ್‌ ಅನುಚಿತವಾಗಿ ವರ್ತಿಸಿದ್ದಾನೆ. ಮೌನೇಶ್​ನನ್ನು ಕೊನೆಗೆ ಪೀಣ್ಯ ಪೊಲೀಸ್​ ಠಾಣೆಗೆ ಕರೆದುಕೊಂಡು ಬರಲಾಗಿತ್ತು.