ಬೆಂಗಳೂರು, ಏಪ್ರಿಲ್ 27: ಟ್ರಾಫಿಕ್ ಸಮಸ್ಯೆ ಬೆಂಗಳೂರಿನ (Bengaluru Trffic) ವಾಹನ ಸವಾರರ ಬಲು ದೊಡ್ಡ ಸಮಸ್ಯೆಯಾಗಿದ್ದರೆ, ಇದೀಗ ಅದಕ್ಕಿಂತಲೂ ದೊಡ್ಡ ಅಪಾಯವೊಂದನ್ನು ಎದುರಿಸುವಂತಾಗಿದೆ. ನಗರದ ಮೇಲ್ಸೇತುವೆಗಳಲ್ಲಿ (Bengaluru flyovers) ತ್ಯಾಜ್ಯದ ಚೀಲಗಳನ್ನು ಎಸೆಯಲಾಗುತ್ತಿದ್ದು, ವಾಹನ ಸವಾರರ ಸಂಕಷ್ಟಕ್ಕೆ ಕಾರಣವಾಗಿದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಮೇಲ್ಸೇತುವೆಗಳು ಡಂಪಿಂಗ್ ಯಾರ್ಡ್‌ಗಳಾಗಿ ಮಾರ್ಪಟ್ಟಿವೆ ಎನ್ನುತ್ತಾರೆ ವಿವಿಧ ಪ್ರದೇಶಗಳ ವಾಹನ ಸವಾರರು. ರಸ್ತೆಗಳನ್ನು ಹಾಳು ಮಾಡುವುದಲ್ಲದೆ, ಕಸದ ಚೀಲಗಳು ದ್ವಿಚಕ್ರ ಸವಾರರ ಗಮನವನ್ನು ಬೇರೆಡೆಗೆ ಸೆಳೆಯುತ್ತವೆ. ಇವುಗಳಿಗೆ ಮುಕ್ತಿ ಕಾಣಿಸದಿದ್ದರೆ ಅಪಘಾತಗಳಿಗೆ ಕಾರಣವಾಗಬಹುದು ಎಂದು ಅನೇಕ ವಾಹನ ಸವಾರರು ಅಭಿಪ್ರಾಯಪಟ್ಟಿರುವುದಾಗಿ ವರದಿಯಾಗಿದೆ.
ಬೆಳೆದು ನಿಂತ ಮರವೊಂದರ ಕೊಂಬೆ ದಾಲ್ಮಿಯಾ ಸರ್ಕಲ್ ಮೇಲ್ಸೇತುವೆಯಲ್ಲಿ ಮಾರ್ಗಕ್ಕೆ ಅಡ್ಡವಾಗಿದ್ದು ಸವಾರರಿಗೆ ಅಡ್ಡಿಯಾಗಿದೆ ಎಂದು ಬನಶಂಕರಿ ನಿವಾಸಿ ನಾಗರಾಜನ್ ಆರ್ ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಮರ ಇಷ್ಟೊಂದು ಬೆಳೆದು ಒಂದು ತಿಂಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮರದ ಕೊಂಬೆ ಕಾರ್ನರ್ ಲೇನ್ ಅನ್ನು ಅತಿಕ್ರಮಿಸಿರುವುದರಿಂದ, ದ್ವಿಚಕ್ರ ವಾಹನ ಸವಾರರು ಕಾರುಗಳು ಬಳಸುವ ಮಧ್ಯದ ಲೇನ್ ಅನ್ನು ಬಳಸಬೇಕಾಗುತ್ತದೆ, ಇದು ಅಪಘಾತಗಳಿಗೆ ಕಾರಣವಾಗಬಹುದು. ಕೊಂಬೆಯ ಕೆಳಗಿನ ಪ್ರದೇಶವು ಕಸ ಸುರಿಯುವ ತಾಣವಾಗಿ ಮಾರ್ಪಟ್ಟಿದೆ ಎಂದು ಅವರು ದೂರಿದ್ದಾರೆ.
ಕಳೆದ ಕೆಲವು ದಿನಗಳಿಂದ ಹೆಣ್ಣೂರು ಮೇಲ್ಸೇತುವೆಯ ಬಗ್ಗೆಯೂ ದೂರುಗಳು ಬರುತ್ತಿವೆ. ಕಳೆದ ಎರಡು ವರ್ಷಗಳಿಂದ ಕಸದ ಸ್ಥಳವನ್ನು ಸ್ವಚ್ಛಗೊಳಿಸಲು ಕೆಲಸ ಮಾಡುತ್ತಿರುವ ಸ್ವಯಂಸೇವಕರು ಸಹ ಸಮಸ್ಯೆ ಇನ್ನೂ ಮುಂದುವರಿದಿದೆ ಎಂದು ಹೇಳಿದ್ದಾರೆ.
ಎರಡು ವರ್ಷಗಳ ಹಿಂದೆ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಜನರು ಫ್ಲೈಓವರ್ ಮೇಲೆ ಕಸದ ಚೀಲಗಳನ್ನು ಎಸೆಯಲು ಪ್ರಾರಂಭಿಸಿದ್ದರು. ಆಗ ಇದು ದೊಡ್ಡ ಸಮಸ್ಯೆಯಾಗಿತ್ತು ಎಂದು ಸಿಟಿಜನ್ ಗ್ರೂಪ್ ಹೆಣ್ಣೂರು ಟಾಸ್ಕರ್ಸ್ ಸಂಸ್ಥಾಪಕ ಸುಬ್ರಮಣಿಯನ್ ಕೆ ಹೇಳಿದ್ದಾರೆ. ಫ್ಲೈಓವರ್ ರಾತ್ರಿ ಸಮಯದಲ್ಲಿ ಬಹುತೇಕ ಖಾಲಿ ಇರುವುದರಿಂದ ಕಸ ಎಸೆಯುವುದು ಸುಲಭವಾಗಿದೆ. ರಾತ್ರಿಯಲ್ಲಿ ಕಡಿಮೆ ಬೆಳಕು ಮತ್ತು ಕಡಿಮೆ ಸಂಚಾರವನ್ನು ಹೊಂದಿರುವುದರಿಂದ ಕಸ ಎಸೆಯುವವರಿಗೆ ಸುಲಭವಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ನಾಗರಿಕರ ನಿರ್ಲಕ್ಷ್ಯದಿಂದ ಸಮಸ್ಯೆ ಹೆಚ್ಚಾಗಿದೆ. ಪೊಲೀಸ್ ಗಸ್ತು ತಿರುಗುವುದರಿಂದ ಇದನ್ನು ಪರಿಹರಿಸಬಹುದು ಎಂದು ಹೆಣ್ಣೂರು ಟಾಸ್ಕರ್ಸ್‌ನ ಮತ್ತೊಬ್ಬ ಸ್ವಯಂಸೇವಕ ರಾಕೇಶ್ ಮಲ್ಹೋತ್ರಾ ಅಭಿಪ್ರಾಯಪಟ್ಟಿರುವುದಾಗಿ ವರದಿ ಉಲ್ಲೇಖಿಸಿದೆ.
ಇದನ್ನೂ ಓದಿ: ಮತಗಟ್ಟೆ ಬಳಿ ಮಹಿಳೆಗೆ ಹೃದಯ ಸ್ತಂಭನ, ಜೀವ ಉಳಿಸಿದ ಮತದಾನ ಮಾಡಲು ಬಂದ ವೈದ್ಯ
ಅಪೂರ್ಣಗೊಂಡಿರುವ ಈಜಿಪುರ ಮೇಲ್ಸೇತುವೆ ಮತ್ತೊಂದು ಕಸ ಎಸೆಯುವ ಸ್ಥಳವಾಗಿದೆ. 2.5 ಕಿಲೋಮೀಟರ್ ಉದ್ದ ಚತುಷ್ಪಥ ಮೇಲ್ಸೇತುವೆ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಲಿದೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಇದು ಕಸ ಎಸೆಯುವ ಸ್ಥಳವಾಗಿ ಹೊರಹೊಮ್ಮಿದೆ. ಇದು ನೇರವಾಗಿ ಸಂಚಾರಕ್ಕೆ ಅಡ್ಡಿಯಾಗದಿದ್ದರೂ, ವಿಪರೀತ ದುರ್ನಾತ ಬೀರುತ್ತಿದೆ ಮತ್ತು ನೋಡಲು ಅಸಹ್ಯವಾಗಿದೆ ಎಂದು ಮಲ್ಹೋತ್ರಾ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ