ಬೆಂಗಳೂರು: ಡ್ಯಾನ್ಸ್ ಬಾರ್ಗಳಿಗೆ ಲೈಸೆನ್ಸ್ ಕೊಡಿಸುವುದಾಗಿ ಹೇಳಿ ವಂಚನೆ ಮಾಡುತ್ತಿದ್ದ ಆರೋಪಿ ಭವಾನಿರಾವ್ ಮೋರೆ ಎಂಬಾತನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗೃಹ ಸಚಿವರ ಹೆಸರಲ್ಲಿ ವಂಚಿಸಿದ್ದ ಆರೋಪಿ ಸಿಸಿಬಿ ವಶವಾಗಿದ್ದಾನೆ. ಭವಾನಿರಾವ್ ಮೋರೆ ಎಂಬಾತ ಸುರೇಶ್ ಎಂಬುವರಿಂದ 25 ಲಕ್ಷ ರೂಪಾಯಿ ಪಡೆದು ವಂಚನೆ ಮಾಡಿದ್ದ ಎಂಬ ಆರೋಪ ಕೇಳಿಬಂದಿದೆ.
ಇಂದು (ನವೆಂಬರ್ 4) ಸುರೇಶ್ ದೂರು ಆಧರಿಸಿ ಶಿವಮೊಗ್ಗದಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಭವಾನಿರಾವ್ ಮೋರೆ ಎಂಬಾತ ಶಿವಮೊಗ್ಗದಲ್ಲಿ ಬಿಜೆಪಿ ನಾಯಕರ ಜತೆ ಗುರುತಿಸಿಕೊಂಡಿದ್ದ ಎಂದು ತಿಳಿದುಬಂದಿದೆ. ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದ ವಿಸ್ತಾರಕನಾಗಿದ್ದ ಮೋರೆ, ಸದ್ಯ ಕೆಪಿಟಿಸಿಎಲ್ ನಿರ್ದೇಶಕನಾಗಿದ್ದ. ಇದೀಗ ಕಬ್ಬನ್ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ.
ಬಾಗಲಕೋಟೆ: 3.9 ಕೆಜಿ ಗಾಂಜಾ ಜಪ್ತಿ
ಬಾಗಲಕೋಟೆ ತಾಲೂಕಿನ ಮನ್ನಿಕಟ್ಟೆ ಕ್ರಾಸ್ನಲ್ಲಿ ಗಾಂಜಾ ಸಾಗಣೆ ಮಾಡುತ್ತಿದ್ದ ನಾಲ್ವರ ಬಂಧನವಾಗಿದೆ. ಬಾಗಲಕೋಟೆ ಸಿಇಎನ್ ಠಾಣೆ ಪೊಲೀಸರಿಂದ ಗಾಂಜಾ ಸಾಗಾಟ ಮಾಡುತ್ತಿದ್ದವರನ್ನು ಬಂಧಿಸಲಾಗಿದೆ. ಅರ್ಜುನ್ ರಾಠೋಡ್, ಜಯರಾಮ್ ಚೌಹಾಣ್, ಶಿವು ಯಮನೂರು, ಭಾಗ್ಯವಂತ ಅರಕೇರಿ ಬಂಧಿತ ಆರೋಪಿಗಳಾಗಿದ್ದಾರೆ. 3 ಕೆಜಿ 900 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ. ಸ್ವಿಫ್ಟ್ ಕಾರು ವಶಕ್ಕೆ ಪಡೆಯಲಾಗಿದೆ.
ಆಂಧ್ರಪ್ರದೇಶ: 1.91 ಕೋಟಿ ಮೌಲ್ಯದ ಚಿನ್ನ ಜಪ್ತಿ
ಅಕ್ರಮವಾಗಿ ಸಾಗಿಸುತ್ತಿದ್ದ 1.91 ಕೋಟಿ ಮೌಲ್ಯದ ಚಿನ್ನ ಜಪ್ತಿ ಮಾಡಲಾಗಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂ ರೈಲ್ವೆ ನಿಲ್ದಾಣದಲ್ಲಿ ಚಿನ್ನ ವಶಕ್ಕೆ ಪಡೆಯಲಾಗಿದೆ. 1.91 ಕೋಟಿ ಮೌಲ್ಯದ 3983.5 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ರೈಲಿನಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಓರ್ವ ವ್ಯಕ್ತಿ ಬಂಧನವಾಗಿದೆ. ಪಶ್ಚಿಮ ಬಂಗಾಳದಿಂದ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ.
ರಾಯಚೂರು: ಟ್ರ್ಯಾಕ್ಟರ್ ಹರಿದು ತಾಯಿ, ಮಗ ದುರ್ಮರಣ
ಹತ್ತಿ ತುಂಬಿದ್ದ ಟ್ರ್ಯಾಕ್ಟರ್ ಹರಿದು ತಾಯಿ, ಮಗ ದುರ್ಮರಣವನ್ನಪ್ಪಿದ ದುರ್ಘಟನೆ ರಾಯಚೂರಿನ ಮಂಚಲಾಪುರ ರಸ್ತೆಯ ಕಾರ್ಖಾನೆ ಬಳಿ ನಡೆದಿದೆ. ಮಹಾರಾಷ್ಟ್ರ ಮೂಲದ ವೈಶಾಲಿ (26) ಹಾಗೂ ಸಮರ್ಥ (3) ಮೃತ ದುರ್ದೈವಿಗಳು. ಟ್ರ್ಯಾಕ್ಟರ್ ರಿವರ್ಸ್ ವೇಳೆ ಪುತ್ರ ಸಮರ್ಥ ಗಾಲಿಗೆ ಸಿಲುಕಿದ್ದ ಎಂದು ತಿಳಿದುಬಂದಿದೆ. ಈ ವೇಳೆ, ಪುತ್ರನನ್ನು ರಕ್ಷಿಸಲು ಹೋಗಿ ತಾಯಿ ವೈಶಾಲಿಯೂ ಸಾವನ್ನಪ್ಪಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳು ರಿಮ್ಸ್ಗೆ ಸ್ಥಳಾಂತರಿಸಲಾಗಿದೆ. ಬಳಿಕ ಟ್ರ್ಯಾಕ್ಟರ್ ಜಪ್ತಿ ಮಾಡಲಾಗಿದೆ. ಚಾಲಕನನ್ನು ಪೊಲೀಸ್ ಸಿಬ್ಬಂದಿ ಬಂಧಿಸಿದ್ದಾರೆ. ರಾಯಚೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ದಾವಣಗೆರೆ: ನಿರ್ಮಾಣ ಹಂತದ ಕಟ್ಟಡದ ಪಿಲ್ಲರ್ ಕುಸಿದು ಮೂವರ ಸಾವು; 6 ಜನರಿಗೆ ಗಾಯ
ಇದನ್ನೂ ಓದಿ: Bengaluru: ವಿಕ್ರಂ ಇನ್ವೆಸ್ಟ್ಮೆಂಟ್ ವಂಚನೆ ಪ್ರಕರಣ; ಇಡಿಯಿಂದ 35.70 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ